ನಾಳೆ ತೆಲಂಗಾಣ ವಿಧಾನಸಭೆ ವಿಸರ್ಜನೆ?

ಮುಖ್ಯಮಂತ್ರಿ ಕೆ. ಚಂದ್ರಶೇಖರ್ ಶೀಘ್ರದಲ್ಲೇ ನಡೆಯುವ ನಾಲ್ಕು ರಾಜ್ಯಗಳ ಚುನಾವಣೆಗೆ ಒಟ್ಟಿಗೆ ಹೋಗುವ ಉದ್ದೇಶದಿಂದ ತೆಲಂಗಾಣ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸುವ ಸಾಧ್ಯತೆ ಇದೆ.
ಭಾನುವಾರ ಮಧ್ಯಾಹ್ನ 1 ಗಂಟೆಗೆ ಸಚಿವ ಸಂಪುಟ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ವಿಧಾನಸಭೆಯನ್ನು ವಿಸರ್ಜಿಸುವ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ನಂತರ ಬೃಹತ್ ಸಾರ್ವಜನಿಕ ಸಭೆ ನಡೆಸುವ ಸಾಧ್ಯತೆ ಇದೆ.
ನಾಳೆ ಮಹತ್ವದ ರಾಜಕೀಯ ನಿಲುವು ಪ್ರಕಟವಾಗಲಿದೆ. ಸಾರ್ವಜನಿಕ ಸಭೆಯ ನಂತರ ರಾಜ್ಯದಲ್ಲಿ ರಾಜ್ಯದಲ್ಲಿ ಮಹತ್ವದ ಬೆಳವಣಿಗೆಗಳನ್ನು ನೋಡಬಹುದು ಎಂದು ಮುಖ್ಯಮಂತ್ರಿ ಚಂದ್ರಶೇಖರ್ ಪುತ್ರ ಹಾಗೂ ತೆಲಂಗಾಣ ಮುನ್ಸಿಪಾಲ್ ಆಡಳಿತ ಹಾಗೂ ಐಟಿ ಸಚಿವ ಕೆ.ಟಿ. ರಾಮರಾವ್ ತಿಳಿಸಿದ್ದಾರೆ.
ಕೆ. ಚಂದ್ರಶೇಖರ್ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಸಮಿತಿ ಅಥವಾ ಟಿಆರ್ಎಸ್ ಸರಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಪೂರೈಸಿದೆ. 2019ರ ಮೇನಲ್ಲಿ 5 ವರ್ಷ ಪೂರೈಸಲಿದ್ದು, ಲೋಕಸಭಾ ಚುನಾವಣೆ ವೇಳೆ ಚುನಾವಣೆಗೆ ಸಜ್ಜಾಗಬೇಕಿತ್ತು. ಆದರೆ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಮುಂಚಿತವಾಗಿಯೇ ಚುನಾವಣೆಗೆ ಹೋಗಲು ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ.