Top

ಶ್ರೀಕೃಷ್ಣ ಜನ್ಮಾಷ್ಠಮಿಯ ಬಗ್ಗೆ ಒಂದಷ್ಟು ಮಾಹಿತಿ..

ಶ್ರೀಕೃಷ್ಣ ಜನ್ಮಾಷ್ಠಮಿಯ ಬಗ್ಗೆ ಒಂದಷ್ಟು ಮಾಹಿತಿ..
X

ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣನ ಜನ್ಮದಿನವನ್ನು ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು, ಸೌರಮಾನ ರೀತಿಯಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಆಚರಿಸಲಾಗುತ್ತದೆ.

ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿ ಕೃಷ್ಣನು ಹುಟ್ಟಿದ ದಿನ. ಅಷ್ಟಮಿಯ ಮಧ್ಯರಾತ್ರಿ, ಕಾರಾಗೃಹದಲ್ಲಿ ಕೃಷ್ಣನ ಜನನವಾಯಿತೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಮಥುರಾ ಕೃಷ್ಣನ ಜನ್ಮಸ್ಥಳ. ಕೃಷ್ಣನು ಹುಟ್ಟಿದೊಡನೆ ಅವನನ್ನು ಸೋದರ ಮಾವನಾದ ಕಂಸನಿಗೆ ತಿಳಿಯದಂತೆ ಗೋಕುಲಕ್ಕೆ ಕರೆದೊಯ್ಯಲಾಗುತ್ತದೆ. ದೇವಕಿ ಕೃಷ್ಣನಿಗೆ ಜನ್ಮ ನೀಡಿದ ತಾಯಿಯಾದರೆ, ಯಶೋಧೆ ಅವನನ್ನು ಸಾಕಿ ಬೆಳೆಸಿದ ತಾಯಿ.

ಕೃಷ್ಣಾಷ್ಟಮಿಯ ದಿನದಂದು, ಮನೆ ಮತ್ತು ದೇವಾಲಯಗಳನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ. ಕೃಷ್ಣನ ಪುಟ್ಟ ಹೆಜ್ಜೆಗಳನ್ನು ರಂಗೋಲಿಯಲ್ಲಿ ಬರೆದು ಸಂಭ್ರಮಿಸಲಾಗುತ್ತದೆ. ಕೃಷ್ಣನ ವಿಗ್ರಹಗಳನ್ನು ವಿಧವಿಧವಾಗಿ ಅಲಂಕರಿಸಿ, ಬಗೆಬಗೆಯ ತಿಂಡಿಗಳನ್ನು ಮಾಡಿ ಬಾಲಕೃಷ್ಣನನ್ನು ಪೂಜಿಸಲಾಗುತ್ತದೆ.

ಶ್ರೀಮನ್ನಾರಾಯಣನ ದಶಾವತಾರಗಳಲ್ಲಿ 9ನೆಯ ಅವತಾರವೇ ಶ್ರೀಕೃಷ್ಣ. ಮನುಷ್ಯರಂತೆ ವ್ಯವಹರಿಸಿದರೂ, ಕಾಲಕ್ಕೆ ತಕ್ಕ ಹಾಗೂ ತನ್ನ ಅಪ್ರತಿಮ ಮತ್ತು ಅಮೋಘವಾದ ಜ್ಞಾನ, ಬಲ, ಶಕ್ತಿ, ತೇಜಸ್ಸುಗಳನ್ನೂ ಮತ್ತು ಆತ್ಮಗುಣ ಸಂಪತ್ತನ್ನೂ ಪ್ರದರ್ಶಿಸಿದ ಪರಮ ಪುರುಷ. ಗೋವುಗಳನ್ನು, ಗೋಪಾಲಕರನ್ನು, ಪಶು, ಪಕ್ಷಿ, ವೃಕ್ಷ, ವನಸ್ಪತಿಗಳನ್ನು ಸಂರಕ್ಷಿಸಿ ಉದ್ಧರಿಸಿದ ಪರಮಾತ್ಮ. ಮಹಾಭಾರತದ ಸೂತ್ರಧಾರ, ಭಗವದ್ಗೀತೆಯ ಮೂಲಕ ಆಧ್ಯಾತ್ಮ ತತ್ವವನ್ನು ಉಪದೇಶಿಸಿದ ಯೋಗಾಚಾರ್ಯ. ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ನೀತಿಯನ್ನೂ ಧರ್ಮವನ್ನೂ ಉಪದೇಶಿಸುತ್ತಾನೆ.

ವಸುದೇವ - ದೇವಕಿ ಕುಟುಂಬದ ಎಂಟನೆಯ ಮಗು ಶ್ರೀ ವಾಸುದೇವ. ಗೋಕುಲದಲ್ಲಿ ಯಶೋಧೆಯ ಮುದ್ದು ಪೋರನಾಗಿ ಬೆಳೆದು, ಅಕ್ಕಪಕ್ಕದ ಮನೆಯಲ್ಲಿ ಬೆಣ್ಣೆ ಕದ್ದು ತಿಂದು, ತುಂಟತನದಲ್ಲಿ ಮಕ್ಕಳಿಗೆ ಗುರುವಾಗಿದ್ದ. ಅಷ್ಟಲ್ಲದೇ ಬಾಯಲ್ಲಿ ಮಣ್ಣು ಹಾಕಿಕೊಂಡು ತನ್ನ ತಾಯಿಗೆ ವಿಶ್ವರೂಪ ದರ್ಶನ ಮಾಡಿಸಿದ ವಿಶ್ವರೂಪಿ. ಜಾಂಬವಂತನಿಂದ ಶಮಂತಕಮಣಿಯನ್ನು ಪಡೆದ ದೈವರೂಪಿ.

ಶ್ರೀಕೃಷ್ಣನು ವಾಸುಕಿ ಎಂಬ ಕಾಳಸರ್ಪವನ್ನು ಸಂಹರಿಸಿ ಜನಗಳನ್ನು ಸಂರಕ್ಷಿಸಿದವನು. ಕೃಷ್ಣನು ಬಲರಾಮನ ತಮ್ಮ ಹಾಗೂ ಕುಚೇಲನ ಆಪ್ತ ಮಿತ್ರ. ಇವನಿಗೆ ಅವಲಕ್ಕಿ ಬಹು ಪ್ರೀಯವಾದ ತಿನಿಸು. ಮಹಾಭಾರತ ಕಾಳಗದಲ್ಲಿ ಕಪಟೋಪಾಯವನ್ನು ಬೋಧಿಸಿ, ಶತ್ರು ಸಂಹಾರದ ವೈವಿಧ್ಯವನ್ನು ಪರಿಚಯಿಸಿದ ಕಪಟಸೂತ್ರಧಾರಿ. ನರಕಾಸುರನನ್ನು ಸಂಹರಿಸಿ ಸಾವಿರಾರು ರಾಜರುಗಳನ್ನು, ಹದಿನಾರು ಸಾವಿರ ಸ್ತ್ರೀಯರನ್ನೂ ಬಿಡುಗಡೆಗೊಳಿಸಿದ ಮಹಾ ಪರಾಕ್ರಮಿ.

ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಈ ವಿಶೇಷ ದಿನದಂದು ಭಗವಂತನ ಪೂಜಾ ಮಂಟಪವನ್ನು ರಸಭರಿತವಾದ ಹಣ್ಣು-ಹೂವು ಕಾಯಿಗಳಿಂದ ಸಿಂಗರಿಸಲಾಗುತ್ತದೆ. ಬಾಲಕೃಷ್ಣನ ಹೆಜ್ಜೆ ಗುರುತುಗಳನ್ನು ಹೊಸ್ತಿಲಿನಿಂದ ದೇವರ ಕೋಣೆಯವರಗೆ ಇರಿಸುವರು. ಶ್ರೀಕೃಷ್ಣನು ಬಾಲಕನ ರೂಪದಲ್ಲಿ ಮನೆಯೊಳಗೆ ಬರುವನು ಎಂಬುದು ಭಕ್ತರ ಬಲವಾಗ ನಂಬಿಕೆ.

Next Story

RELATED STORIES