ಮೊದಲ ದಿನವೇ 246 ರನ್ಗೆ ಇಂಗ್ಲೆಂಡ್ ಆಲೌಟ್

ಸೌಥ್ಹ್ಯಾಂಪ್ಟನ್: ಟೀಂ ಇಂಡಿಯಾದ ವೇಗಿಗಳ ದಾಳಿಗೆ ತತ್ತರಿಸಿದ ಆಂಗ್ಲರು ನಾಲ್ಕನೆ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 246 ರನ್ಗಳಿಗೆ ಆಲೌಟ್ ಆಗಿದೆ.
ರೋಸ್ಬೌಲ್ ಕ್ರೀಡಾಂಗಣದಲ್ಲಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 246 ರನ್ಗಳ ಸಾಧಾರಣ ಮೊತ್ತಕ್ಕೆ ಆಲೌಟಾಯಿತು. ದಿನದಾಂತ್ಯಕ್ಕೆ ಭಾರತ ವಿಕೆಟ್ ನಷ್ಟವಿಲ್ಲದೇ 19 ರನ್ ಗಳಿಸಿದೆ.
ಟೀಂ ಇಂಡಿಯಾದ ವೇಗಿ ಜಸ್ಪ್ರಿತ್ ಬೂಮ್ರಾ ಆರಂಭಿಕ ಬ್ಯಾಟ್ಸ್ ಮನ್ ಕಿಟಾನ್ ಜೆನ್ನಿಂಗ್ಸ್ ಮತ್ತು ಅಲಿಸ್ಟರ್ ಕುಕ್ ವಿಕೆಟ್ ಪಡೆದು ಆರಂಭಿಕ ಆಘಾತ ನೀಡಿದರು. ನಂತರ ಜೋ ರೂಟ್ 4, ಜಾನಿ ಬೈರ್ಸ್ಟೋ 6, ಬೆನ್ಸ್ಟೋಕ್ಸ್ 23, ಜೋಸ್ ಬಟ್ಲರ್ 21 ಬೇಗನೆ ವಿಕಟ್ ಒಪ್ಪಿಸಿ ಹೊರ ನಡೆದರು. ಇದರಿಂದ ತಂಡ 86 ರನ್ ಆಗುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಕಳಪೆ ಮೊತ್ತಕ್ಕೆ ಆಲೌಟಾಗುವ ಭೀತಿಗೆ ಒಳಗಾಗಿತ್ತು.
7ನೇ ವಿಕೆಟ್ಗೆ ಜೊತೆಗೂಡಿದ ಮೊಯಿನ್ ಅಲಿ ಮತ್ತು ಸ್ಯಾಮ್ ಕರನ್ 81 ರನ್ಗಳ ಜೊತೆಯಾಟ ನಿಭಾಯಿಸಿ ತಂಡಕ್ಕೆ ಮರು ಜೀವ ನೀಡಿದರು. ನಂತರ ಮೊಯಿನ್ ಅಲಿ (40), ಆದಿಲ್ ರಶೀದ್ (6), ಸ್ಟುವರ್ಟ್ ಬ್ರಾಡ್ (17) ರನ್ಗಳಿಸಿ ಪೆವಿಲಿಯನ್ ಸೇರಿದರು.
ಏಕಾಂಗಿ ಹೋರಾಟ ನಡೆಸಿದ ಸ್ಯಾಮ್ ಕರನ್ (78) ಅರ್ಧ ಶತಕ ಸಿಡಿಸಿ ಅಶ್ವಿನ್ಗೆ ವಿಕೆಟ್ ಒಪ್ಪಿಸಿ ಹೊರ ನಡೆದ್ರು. ಕೊನೆಗೆ ಇಂಗ್ಲೆಂಡ್ ತಂಡ 246 ರನ್ಗಳಿಗೆ ಪತನ ಕಂಡಿತು.
ದಿನದಾಟದ ಕೊನೆಯಲ್ಲಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಯಾವುದೇ ವಿಕೆಟ್ ನಷ್ಟವಿಲ್ಲದೇ 19 ರನ್ ಗಳಿಸಿತು. ಕೆ.ಎಲ್. ರಾಹುಲ್ ಅಜೇಯ 11 ಮತ್ತು ಶಿಖರ್ ಧವನ್ ಅಜೇಯ 3 ರನ್ ಗಳಿಸಿ ಎರಡನೇ ದಿನಕ್ಕೆ ಕ್ರಿಸ್ ಕಾಯ್ದುಕೊಂಡರು.
- ಸಂಕ್ಷಿಪ್ತ ಸ್ಕೋರ್
- ಇಂಗ್ಲೆಂಡ್ ಮೊದಲ ಇನಿಂಗ್ಸ್ 76.4 ಓವರ್ 246 (ಕರನ್ 78, ಮೊಯಿನ್ ಅಲಿ 40, ಬ್ರಾಡ್ 17, ಕುಕ್ 17, ಬುಮ್ರಾ 46/3, ಇಶಾಂತ್ 26/2, ಅಶ್ವಿನ್ 40/2, ಶಮಿ 51/2).
- ಭಾರತ ಮೊದಲ ಇನಿಂಗ್ಸ್ ವಿಕೆಟ್ ನಷ್ಟವಿಲ್ಲದೇ 19 (ಧವನ್ 3, ರಾಹುಲ್ 11).