Top

ಬರದನಾಡು ವಿಜಯಪುರದಲ್ಲೂ ಎದುರಾಗಿದೆ ಪ್ರವಾಹ ಭೀತಿ..!

ಬರದನಾಡು ವಿಜಯಪುರದಲ್ಲೂ ಎದುರಾಗಿದೆ ಪ್ರವಾಹ ಭೀತಿ..!
X

ವಿಜಯಪುರ : ಕೊಡಗಿನಲ್ಲಿ ಜಲಪ್ರಳಯದಿಂದ ಆದ ಅನಾಹುತ ಒಂದೆರೆಡಲ್ಲ. ಆದ್ರೆ ಮಳೆ ಇಲ್ಲದೆ ಕಂಗೆಟ್ಟಿರುವ ಬರದ ನಾಡು ವಿಜಯಪುರ ಜಿಲ್ಲೆಯಲ್ಲು ನೆರೆಹಾವಳಿ ಎದುರಾಗಿದೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಭೀಮಾನದಿ ಉಕ್ಕಿ ಹರಿಯುತ್ತಿದ್ದು, ನದಿ ತೀರದ ಗ್ರಾಮಗಳು ಪ್ರವಾಹದ ಭೀತಿ ಎದುರಿಸುತ್ತಿವೆ. ಹೀಗಾಗಿ ಭೀಮಾತೀರದ ಗ್ರಾಮಸ್ಥರು ಎಚ್ಚರದಿಂದಿರುವಂತೆ ಅಧಿಕಾರಿಗಳು ಡಂಗುರ ಸಾರಿಸಿದ್ದಾರೆ.

ಈ ಮಧ್ಯೆ ಉಜನಿ ಜಲಾಶಯದಿಂದ ಹೆಚ್ಚುವರಿ ನೀರು ಹರಿ ಬಿಟ್ಟಿದ್ದು ಭೀಮಾತೀರದಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.. ಆದ್ರೆ ಇತ್ತ ಗಂಜಿ ಕೇಂದ್ರ ತೆರೆಯಬೇಕಿದ್ದ ಅಧಿಕಾರಿಗಳು ಗಾಢ ನಿದ್ರೆಯಲ್ಲಿದ್ದಾರೆ.

ಬರದ ನಾಡು ಅಂತ ಕರೆಯಿಸಿಕೊಳ್ಳುವ ವಿಜಯಪುರ ಜಿಲ್ಲೆಯಲ್ಲು ಪ್ರವಾಹ ಭೀತಿ ಶುರುವಾಗಿದೆ. ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಿದ ಪರಿಣಾಮ ಭೀಮಾನದಿ ಉಕ್ಕಿ ಹರಿಯುತ್ತಿದೆ. ಇದರ ಪರಿಣಾಮ ಕಳೆದ 7 ದಿನಗಳಿಂದ ಭೀಮಾನದಿ ಸಿಂದಗಿ ತಾಲೂಕಿನ ತಾರಾಪೂರ ಗ್ರಾಮವನ್ನ ಸುತ್ತುವರೆದಿದೆ. ಸಿಂದಗಿ ಸಂಪರ್ಕ ರಸ್ತೆ ಸಂಪೂರ್ಣ ಜಲಾವೃತ್ತಗೊಂಡಿದ್ದು, ಶಾಲೆ-ಕಾಲೇಜುಗಳಿಗೆ ತೆರಳಬೇಕಿದ್ದ ವಿಧ್ಯಾರ್ಥಿಗಳು ನೆರೆ ಭೀತಿಯಿಂದಾಗಿ ಮನೆಯಲ್ಲೆ ಉಳಿದುಕೊಂಡಿದ್ದಾರೆ.

ಇತ್ತ ಇಂದು ಮತ್ತೆ ಉಜನಿ ಜಲಾಶಯದಿಂದ 16 ಸಾವಿರ ಕ್ಯೂಸೆಕ್ ನೀರು ಹರಿಬಿಟ್ಟ ಪರಿಣಾಮ ಭೀಮಾನದಿ ನೀರು ತಾರಾಪೂರ ಮನೆ, ಹೊಲಗಳನ್ನ ಹೊಕ್ಕಿದೆ. ಇತ್ತ ಭೀಮಾ ನದಿಯ ದಂಡೆಯಲ್ಲಿರುವ ದೇವಣಗಾಂವ, ಸೊನ್ನ ಸೇರಿದಂತೆ ಹಲವು ಗ್ರಾಮಗಳಿಗೂ ನೆರೆ ಭೀತಿ ಕಾಡುತ್ತಿದೆ.

ಇನ್ನು ದಿನದಿಂದ ದಿನಕ್ಕೆ ಭೀಮಾನದಿಯ ಹರಿವಿನಲ್ಲಿ ಹೆಚ್ಚಳ ಉಂಟಾಗಿರೋದ್ರಿಂದ ನದಿ ತೀರದ ಗ್ರಾಮಗಳ ಗ್ರಾಮಸ್ತರು ದನ-ಕರುಗಳ ಬಗ್ಗೆ ಎಚ್ಚರಿಗೆ ವಹಿಸುವಂತೆ ಅಧಿಕಾರಿಗಳು ಡಂಗೂರ ಸಾರಿಸಿದ್ದಾರೆ. ಇದ್ರಿಂದ ಮತ್ತಷ್ಟು ಆತಂಕದ ವಾತಾವರಣ ಹಲವು ಗ್ರಾಮಗಳಲ್ಲಿ ನಿರ್ಮಾಣವಾಗಿದೆ.

ಭೀಮಾನದಿ ತಾರಾಪೂರ ಗ್ರಾಮವನ್ನ ಸುತ್ತುವರೆದು 7 ದಿನಗಳು ಕಳೆದಿದ್ದರು, ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಈ ವರೆಗು ಗಂಜಿ ಕೇಂದ್ರವನ್ನ ತೆರೆದು ನೆರೆಭೀತಿಯಲ್ಲಿರುವ ಜನರನ್ನ ರಕ್ಷಣೆ ಮಾಡುವ ಗೋಜಿಗು ಹೋಗಿಲ್ಲ. ಹೀಗಾಗಿ ಭೀಮಾತೀರದ ಜನರು ಅಧಿಕಾರಿಗಳ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.

ಅಲ್ಲದೆ ಪ್ರತಿ ವರ್ಷವು ಭೀಮಾನದಿ ಪ್ರವಾಹದಿಂದ ಬಾಧಿಸಲ್ಪಡುವ ತಾರಾಪೂರ ಗ್ರಾಮವನ್ನ 2013 ರಲ್ಲೆ ಸ್ಥಳಾಂತರ ಮಾಡುವ ಆದೇಶವಿದ್ರು, ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಮೊನ್ನೆ ನಾಮಕಾವಾಸ್ತೆ ತಾರಾಪೂರ ಗ್ರಾಮಕ್ಕೆ ಭೇಟಿ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಎಂ ಸಿ ಮನಗೂಳಿ ಹಾಗೂ ಜಿಲ್ಲಾಧಿಕಾರಿ ಶೆಟ್ಟೆಪ್ಪನವರ್ ಭರವಸೆ ನೀಡಿ ಸುಮ್ಮನಾಗಿದ್ದಾರೆ.

ಸದ್ಯ ದಿನ ಕಳೆದಂತೆ ಭೀಮೆ ಉಕ್ಕಿ ಹರಿಯುತ್ತಿದ್ದು, ಭೀಮಾತೀರದ ಮತ್ತಷ್ಟು ಗ್ರಾಮಗಳು ಮುಳುಗಡೆ ಆಗುವ ಭೀತಿಯಲ್ಲಿವೆ. ಹೀಗಾಗಿ ಗ್ರಾಮಸ್ಥರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಲೆ ಭಯದಿಂದಲೆ ಕಾಲ ಕಳೆಯುತ್ತಿದ್ದಾರೆ. ಯಾವುದೇ ಅನಾಹುತಗಳು ನಡೆಯುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತು ಸೂಕ್ತ ಸೌಕರ್ಯಗಳನ್ನ ನದಿ ತೀರದ ಗ್ರಾಮಗಳಿಗೆ ಒದಗಿಸಬೇಕಿದೆ..

ವರದಿ : ಶರಣು ಮಸಳಿ, ಟಿವಿ5 ವಿಜಯಪುರ.

Next Story

RELATED STORIES