ಕೊಡಗಿನ ನಿರಾಶ್ರಿತರಿಗೆ ಅರೆಬೆಂದ ಅನ್ನ..!

ಕೊಡಗು: ಕೊಡಗಿನಲ್ಲಿ ಪ್ರವಾಹ ಬಂದು ನಿರಾಶ್ರಿತರೆಲ್ಲ ಸಂತ್ರಸ್ತರ ಕೇಂದ್ರದಲ್ಲಿ ವಾಸಿಸುತ್ತಿದ್ದಾರೆ. ರಾಜ್ಯದೆಲ್ಲೆಡೆಯಿಂದ ಕೊಡಗಿಗೆ ಸಹಾಯಗಳ ಮಹಾಪೂರವೇ ಹರಿದು ಬರುತ್ತಿದೆ. ಆದ್ರೆ ನಿರಾಶ್ರಿತರಿಗೆ ತಿನ್ನಲು ಸರಿಯಾದ ಆಹಾರವೂ ಸಿಗುತ್ತಿಲ್ಲ.
ಕುಶಾಲನಗರದ ವಾಲ್ಮಿಕಿ ಭವನದಲ್ಲಿ ನಿರಾಶ್ರಿತರಿಗೆ ಅರ್ಧ ಬೆಂದಿರುವ ಅನ್ನ ನೀಡಲಾಗುತ್ತಿದೆ. ಅಲ್ಲದೇ ಮಧ್ಯಾಹ್ನ ಕೊಡಬೇಕಾದ ಊಟವನ್ನು ಸಂಜೆ 4ಗಂಟೆಗೆ ನೀಡಲಾಗುತ್ತಿದೆ. ಇನ್ನು ಮುನ್ನೂರು ಜನರಿರುವ ಭವನದಲ್ಲಿ ಬರೀ ಮೂರು ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಇನ್ನು ವಾಲ್ಮೀಕಿ ಭವನಕ್ಕೆ ಬರುವ ದಾರಿಯಲ್ಲಿ ದಾರಿದೀಪಗಳಿಲ್ಲ, ರಾತ್ರಿ ರಸ್ತೆಯಲ್ಲಿ ಸಂಚರಿಸುವಾಗ ಕಗ್ಗತ್ತಲಾಗಿರುತ್ತದೆ.
ಇನ್ನು ಈ ಮುಂಚೆ ನಿರಾಶ್ರಿತರು ಮಡಿಕೇರಿಯ ಸೇವಾ ಭವನದಲ್ಲಿದ್ದಾಗ, ತಮ್ಮನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು. ಆದ್ರೆ ಇಲ್ಲಿ ಅಧಿಕಾರಿಗಳು ಭಿಕ್ಷುಕರಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅವ್ಯವಸ್ಥೆಯ ಬಗ್ಗೆ ಕೇಳಲು ಹೋದರೆ ಅಧಿಕಾರಿಗಳು ಪೊಲೀಸರನ್ನು ಕರೆಸುತ್ತೇವೆಂದು ಧಮ್ಕಿ ಹಾಕುತ್ತೇವೆಂದು ಬೆದರಿಸುತ್ತಾರಂತೆ. ಈ ಕಾರಣಕ್ಕೆ ನಿರಾಶ್ರಿತರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ.