Top

ಮುಖ್ಯಮಂತ್ರಿಗಳೇ ಉತ್ತರ ಕರ್ನಾಟಕ ಪ್ರವಾಸ ಯಾವಾಗ.?

ಬೆಂಗಳೂರು : ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬದ್ಧರಾಗಿರುವುದಾಗಿ ಹೇಳಿದ್ದ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾತಿಗೆ ತಪ್ಪುತ್ತಿದ್ದಾರಾ.? ಇದು ಉತ್ತರಕರ್ನಾಟಕದ ಜನರು ಕೇಳುತ್ತಿರುವ ಪ್ರಶ್ನೆಯಾಗಿದೆ. ಜೊತೆಗೆ ಮುಖ್ಯಮಂತ್ರಿಗಳಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಹೆಚ್‌.ಡಿ.ಕುಮಾರಸ್ವಾಮಿಗಳೇ, ಉತ್ತರಕರ್ನಾಟಕ ಪ್ರವಾಸ ಯಾವಾಗ ಎಂಬ ಪ್ರಶ್ನೆಯನ್ನು ಆ ಭಾಗದ ಜನರು ಎತ್ತಿದ್ದಾರೆ.

ಅಂದಹಾಗೇ, ನಾವು ಹೀಗೆ ಕೇಳೋದಕ್ಕೂ ಒಂದು ಕಾರಣ ಇದೆ. ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸುತ್ತಿದ್ದ ಹೋರಾಟಗಾರರಿಗೆ ನಿಮ್ಮೆಲ್ಲಾ ಸಮಸ್ಯೆಗಳಿಗೆ ಸ್ಪಂದಿಸೋದಾಗಿ ಹೇಳಿದ್ರು. ಆದ್ರೆ ಕೊಡಗಿನಲ್ಲಾದ ನೆರೆ, ಸಮ್ಮಿಶ್ರ ಸರ್ಕಾರದ ಸಂಕಟ ಹೆಚ್.ಡಿ.ಕೆ ತೊಡಕಾಗಿ ಪರಿಣಮಿಸಿವೆ.

ಪ್ರತ್ಯೇಕ ಉತ್ತರಕರ್ನಾಟಕ ರಾಜ್ಯ ವಿವಾದ ಭುಗಿಲೆದ್ದ ಸಮಯದಲ್ಲಿ ಸಿಎಂ ಕುಮಾರಸ್ವಾಮಿ ವಿವಾದ ತಣ್ಣಗಾಗಿಸಲು ಕೊಟ್ಟ ಭರವಸೆಗಳು ಒಂದೆರಡಲ್ಲ. ಇಡೀ ಉತ್ತರ ಕರ್ನಾಟಕ ಬಂದ್ ಮಾಡಲು ತಯಾರಿ ನಡೆಸಿದ್ದ ಹೋರಾಟಗಾರರಿಗೆ ಸಿಎಂ ಉತ್ತರ ಕರ್ನಾಟಕ ಪ್ರವಾಸ ಮಾಡುವ ಮಾತು ಕೊಟ್ಟು ಬಂದಿದ್ರು. ಉತ್ತರ ಕರ್ನಾಟಕ ಭಾಗದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡ್ತೀನಿ. ಜಿಲ್ಲಾವಾರು ಸಮಸ್ಯೆಗಳನ್ನು ಬಗೆಹರೆಸುತ್ತೇನೆ ಅಂತ ಹೇಳಿದ್ದ ಹೆಚ್.ಡಿ.ಕೆ ಮತ್ತೆ ಅತ್ತ ಸುಳಿದಿಲ್ಲ.

ಕೊಡಗಿನಲ್ಲಾದ ಮಹಾ ಮಳೆಯಿಂದ ಉಂಟಾದ ಸಂಕಷ್ಟಗಳಿಗೆ ಸ್ಪಂದಿಸಲೇಬೇಕಾದ ಅನಿವಾರ್ಯತೆಗೆ ಸಿಎಂ ಸಿಲುಕಿದ್ರು. ಕೊಡಗು ಜನತೆಯ ಕಷ್ಟಗಳಿಗೆ ಧ್ವನಿಯಾಗುವ ಕೆಲಸ ಮಾಡ್ತಿದರು. ಆದರೆ ಸಿಎಂ ಕುಮಾರಸ್ವಾಮಿ ಉತ್ತರ ಕರ್ನಾಟಕದ ಜನತೆಗೆ ತಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಅಗತ್ಯತೆ ಇದೆ.

ಹೀಗಾಗಿ ಉತ್ತರ ಕರ್ನಾಟಕದ ಕಡೆಯೂ ಸಿಎಂ ಕುಮಾರಸ್ವಾಮಿ ಗಮನ ಹರಿಸಬೇಕಿದೆ. ಯಾಕಂದ್ರೆ ಭಾರಿ ಮಳೆಗೆ ಕೊಡಗು ಕೊಚ್ಚಿ ಹೋದರೆ, ಇತ್ತ ಉತ್ತರ ಕರ್ನಾಟಕದ ಹಲವೆಡೆ ಬರದ ಪರಿಸ್ಥಿತಿ ಎದುರಾಗಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲ ಮನ್ನಾ ಮಾಡಿ ರೈತರಿಗೆ ಸಿಹಿ ಸುದ್ದಿ ನೀಡಿದ ಕುಮಾರಸ್ವಾಮಿ ಖುದ್ದು ರೈತರ ಜೊತೆ ನಿಲ್ಲುವ ಅನಿವಾರ್ಯತೆ ಇದೆ. ಹೀಗಾಗಿ ಕುಮಾರಸ್ವಾಮಿ ಇತ್ತ ಯಾವಾಗ ಬರ್ತಾರೆ ಅಂತ ಉತ್ತರ ಕರ್ನಾಟಕ ಜನ ಕಾಯ್ದು ಕುಳಿತಿದ್ದಾರೆ.

ಇತ್ತ ಕೊಡಗು ಪುನರ್ ನಿರ್ಮಾಣದ ಮಹತ್ವದ ಜವಾಬ್ದಾರಿ ಸಿಎಂ ಹೆಗಲ ಮೇಲಿದೆ. ಅದರೆ ತಮ್ಮ ಮೈತ್ರಿ ಸರ್ಕಾರದಲ್ಲಿ ಪ್ರತಿ ನಿತ್ಯ ನಡೆಯುತ್ತಿರುವ ರಾಜಕೀಯ ಹೈ ಡ್ರಾಮಾಗಳು ಕುಮಾರಸ್ವಾಮಿಯವ್ರಿಗೆ ತಲೆ ಬಿಸಿ ತರಿಸಿದೆ. ಸಮ್ಮಿಶ್ರ ಸರ್ಕಾರದ ಸಂಕಟ ಪರಿಹರಿಸಿಕೊಳ್ಳುವಲ್ಲಿ ನಿರತರಾಗಿರುವ ಕುಮಾರಸ್ವಾಮಿಯವ್ರಿಗೆ ಉತ್ತರ ಕರ್ನಾಟಕ ಮತ್ತೆ ಮರೆತಂತಾಗಿದೆ. ಹೆಚ್.ಡಿ.ಕೆ ಉತ್ತರ ಕರ್ನಾಟಕ ಟೂರ್ ಯಾವಾಗ ಅನ್ನೋ ಜನರ ಪ್ರಶ್ನೆಗೆ ಕುಮಾರ ಸ್ವಾಮಿ ಉತ್ತರ ಏನು ಕಾಯ್ದು ನೋಡಬೇಕಿದೆ.

Next Story

RELATED STORIES