4ನೇ ಟೆಸ್ಟ್: ಮತ್ತೊಂದು ಜಯಕ್ಕೆ ಕೊಹ್ಲಿ ಪಡೆ ಸಜ್ಜು

ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ ಗುರುವಾರದಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ಅಭಿಯಾನ ಮುಂದುವರಿಸುವ ಕಾತರದಲ್ಲಿದೆ. ಇದರೊಂದಿಗೆ ಸರಣಿ ಜೀವಂತಾಗಿಸಿಕೊಳ್ಳುವ ಉಮೇದಿನಲ್ಲಿದೆ.
ಸೌಥ್ ಹ್ಯಾಂಪ್ಟನ್ನಲ್ಲಿ ನಡೆಯಲಿರುವ ಪಂದ್ಯ ಉಭಯ ತಂಡಗಳ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಇಂಗ್ಲೆಂಡ್ ಈ ಪಂದ್ಯ ಗೆದ್ದರೆ ಸರಣಿ ಜಯ ಹೊಂದಲಿದೆ. ಸರಣಿ ಜೀವಂತವಾಗಿಸಿಕೊಳ್ಳಬೇಕಾದರೆ ಭಾರತಕ್ಕೆ ಈ ಪಂದ್ಯವನ್ನೂ ಗೆಲ್ಲಬೇಕಿದೆ.
5ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-2ರಿಂದ ಹಿನ್ನಡೆ ಅನುಭವಿಸಿದ್ದರೂ 1934ರಲ್ಲಿ ಡಾನ್ ಬ್ರಾಡ್ಮನ್ ನಾಯಕತ್ವದ ಆಸ್ಟ್ರೇಲಿಯಾ ತಂಡ 0-2 ಹಿನ್ನಡೆ ನಂತರವೂ ಆ್ಯಷಸ್ ಸರಣಿ ಗೆದ್ದ ದಾಖಲೆಯನ್ನು ಕೊಹ್ಲಿ ಪಡೆ ಮುರಿಯುವುದೇ ಎಂಬ ಕುತೂಹಲ ಮೂಡಿದೆ.
ಮೂರನೇ ಟೆಸ್ಟ್ ಪಂದ್ಯದಲ್ಲಿ ಆಡಿದ ತಂಡವನ್ನೇ ಭಾರತ ಉಳಿಸಿಕೊಳ್ಳುವ ಸಾಧ್ಯತೆ ಇದ್ದರೂ ಗಾಯಗೊಂಡಿರುವ ಆರ್.ಅಶ್ವಿನ್ ಫಿಟ್ನೆಸ್ ಬಗ್ಗೆ ಅನುಮಾನಗಳಿವೆ. ಒಂದು ವೇಳೆ ಅಶ್ವಿನ್ ಆಡದಿದ್ದರೆ ಅವರ ಸ್ಥಾನದಲ್ಲಿ ಯಾರಿಗೆ ಅವಕಾಶ ಕೊಡುತ್ತಾರೆ ಎಂಬ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ.
ಅಲ್ಲದೇ ತಂಡದಲ್ಲಿ ಸ್ಥಾನ ಪಡೆದಿರುವ ಪೃಥ್ವಿ ಮತ್ತು ಹನುಮ ವಿಹಾರಿಯಲ್ಲಿ ಯಾರಿಗೆ ಅವಕಾಶ ಸಿಗುತ್ತದೆ ಎಂಬ ಕುತೂಹಲವೂ ಇದೆ.