Top

ಕೇಂದ್ರ ರಕ್ಷಣಾ ಸಚಿವರಿಗೆ ಅನಾನುಕೂಲ: ಸಿಎಂ ವಿಷಾದ

ಬೆಂಗಳೂರು: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅತಿವೃಷ್ಟಿ ಪೀಡಿತ ಕೊಡಗು ಜಿಲ್ಲೆಗೆ ಪರಿಶೀಲನೆಗಾಗಿ ಆಗಮಿಸಿದ ಸಂದರ್ಭದಲ್ಲಿ ಅವರಿಗೆ ಅನಾನುಕೂಲವಾಗಿದ್ದಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

'ನಮ್ಮ ಸರ್ಕಾರವು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ವಿಪತ್ತು ನಿರ್ವಹಣಾ ಸಂಸ್ಥೆಗಳು ಹಾಗೂ ಸ್ವಯಂ ಸೇವಕರ ನೆರವಿನೊಂದಿಗೆ ದಿನದ 24 ಗಂಟೆಯೂ ಕೊಡಗಿನಲ್ಲಿ ಪ್ರವಾಹ, ಭೂಕುಸಿತದಲ್ಲಿ ಸಿಲುಕಿಕೊಂಡ ನಾಗರಿಕರ ರಕ್ಷಣೆ, ಪರಿಹಾರ ಹಾಗೂ ಪುನರ್ವಸತಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಕೇಂದ್ರ ಸರ್ಕಾರವೂ ನಮ್ಮ ಬೆಂಬಲಕ್ಕೆ ನಿಂತಿದೆ.

ಪ್ರವಾಸೋದ್ಯಮ ಮತ್ತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರು ಅನಾಹುತ ಸಂಭವಿಸಿದ ಮೊದಲ ದಿನದಿಂದಲೇ ಕೊಡಗು ಜಿಲ್ಲೆಯಲ್ಲಿಯೇ ಮೊಕ್ಕಾಂ ಹೂಡಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಉಸ್ತುವಾರಿ ವಹಿಸಿ ನಿರಂತರವಾಗಿ ಕಾರ್ಯ ನಿರ್ವಹಿಸಿದ್ದಾರೆ.

ಅಂತೆಯೇ ಮಾನ್ಯ ರಕ್ಷಣಾ ಸಚಿವರು ನಮ್ಮ ಮನವಿಗೆ ಸ್ಪಂದಿಸಿ ರಕ್ಷಣಾ ಕಾರ್ಯಾಚರಣೆಗೆ ಎಲ್ಲ ರೀತಿಯಲ್ಲೂ ಬೆಂಬಲ ನೀಡಿದ್ದಾರೆ. ಅಲ್ಲದೆ ಕೊಡಗಿನ ಜನರ ಯಾತನೆಯ ವಸ್ತುಸ್ಥಿತಿ ಅರಿಯಲು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದರು.

ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಈ ಸಂಕಷ್ಟದ ಪರಿಸ್ಥಿತಿಯಲ್ಲೂ ಮಾನ್ಯ ಸಚಿವರ ಆಗಮನದ ಸಂದರ್ಭದಲ್ಲಿ ಶಿಷ್ಟಾಚಾರ ಪಾಲನೆಗೆ ಅಗತ್ಯ ಕ್ರಮ ವಹಿಸಿದ್ದರೂ ಅವರಿಗೆ ಕೆಲವು ಅನಾನುಕೂಲ ಆಗಿರುವುದು ದುರದೃಷ್ಟಕರ ಹಾಗೂ ಇದಕ್ಕಾಗಿ ವಿಷಾದ ವ್ಯಕ್ತಪಡಿಸುವೆ. ಈ ವಿಷಯದ ಕುರಿತಾಗಿ ನಾನು ದೂರವಾಣಿ ಮೂಲಕ ಅವರೊಂದಿಗೆ ಮಾತನಾಡಿದ್ದೇನೆ ಎಂದರು.

ನಾವೆಲ್ಲರೂ ಈಗ ಭಿನ್ನಾಭಿಪ್ರಾಯ ಮರೆತು ಅತಿವೃಷ್ಟಿಯಿಂದ ತೊಂದರೆಗೊಳಗಾಗಿರುವ ಕೊಡಗಿನ ಜನರ ಪುನರ್ವಸತಿಗೆ ಆದ್ಯತೆ ನೀಡುವುದು ಇಂದಿನ ತುರ್ತು ಅಗತ್ಯವಾಗಿದೆ. ನಾವು ಈ ಘಟನೆಗೆ ಯಾವುದೇ ಬಣ್ಣ ಬಳಿದು ನಮ್ಮ ಗುರಿಯ ಹಾದಿಯಿಂದ ವಿಚಲಿತರಾಗುವುದು ಬೇಡ. ಕೇಂದ್ರ ಸರ್ಕಾರ ಅದರಲ್ಲೂ ವಿಶೇಷವಾಗಿ ಮಾನ್ಯ ರಕ್ಷಣಾ ಸಚಿವರ ಬೆಂಬಲ ಹೀಗೆಯೇ ಮುಂದುವರಿಯುವುದು ಎನ್ನುವುದು ನನ್ನ ನಂಬಿಕೆ" ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Next Story

RELATED STORIES