Top

13 ಜಿಲ್ಲೆಯ 48 ತಾಲ್ಲೂಕು ಬರ ಪೀಡಿತ : ನೆರವಿಗೆ ಸರ್ಕಾರದ ಚಿಂತನೆ

13 ಜಿಲ್ಲೆಯ 48 ತಾಲ್ಲೂಕು ಬರ ಪೀಡಿತ : ನೆರವಿಗೆ ಸರ್ಕಾರದ ಚಿಂತನೆ
X

ಬೆಂಗಳೂರು : ಅದೇಕೋ ಏನೋ ರಾಜ್ಯಕ್ಕೆ ಅತಿವೃಷ್ಟಿ-ಅನಾವೃಷ್ಟಿಯಿಂದ ಮುಕ್ತಿ ಸಿಕ್ಕಿಲ್ಲ. ಒಂದೆಡೆ ನೆರೆ ಜಲಪ್ರಳಯಕ್ಕೆ ಕಾರಣವಾದ್ರೆ, ಮತ್ತೊಂದಡೆ ಬರ ಜನರನ್ನ ಹೈರಾಣಾಗಿಸಿದೆ. ಕೊಡಗಿನಲ್ಲಿನ ನೆರೆ ಅಲ್ಲಿನ ಜನರ ಬದುಕನ್ನ ಕಿತ್ತುಕೊಂಡ್ರೆ, ಬರ ಹಲವು ಜಿಲ್ಲೆಗಳ ರೈತರನ್ನು ನಲುಗುವಂತೆ ಮಾಡಿಬಿಟ್ಟಿದೆ. ಬರಪೀಡಿತ ಪ್ರದೇಶಗಳ ಅಭಿವೃದ್ಧಿ ಬಗ್ಗೆ ಇಷ್ಟು ದಿನ ಸುಮ್ಮನಿದ್ದ ಸರ್ಕಾರ ಇದೀಗ ಕೊನೆಗೂ ಕಣ್ತೆರೆದಿದೆ. ವರುಣನ ಅವಕೃಪೆಯಿಂದ ಸಂಕಷ್ಟಕ್ಕೀಡಾಗಿರೋ 13 ಜಿಲ್ಲೆಗಳ ರೈತರತ್ತ ನೆರವಿನ ಹಸ್ತ ಚಾಚೋಕೆ ಸಿಎಂ ಮುಂದಾಗಿದ್ದಾರೆ.

ಮೊದಲ ಹಂತದಲ್ಲಿ 13 ಜಿಲ್ಲೆಗಳ 48 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲು ಸರ್ಕಾರನಿರ್ಧರಿಸಿದೆ. ಈ ವಾರಾಂತ್ಯದೊಳಗೆ ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಲು ತೀರ್ಮಾನಿಸಿದೆ. ರಾಷ್ಟ್ರೀಯ ಪ್ರಕೃತಿ ವಿಕೋಪ ನಿಯಮಗಳ ಅನ್ವಯ ಬರಪೀಡಿತ ತಾಲೂಕುಗಳ ಘೋಷಣೆ ಮಾಡುವ ಮೂಲಕ ಬೆಳೆನಷ್ಟ ಪರಿಹಾರಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿಲು ಅಣಿಯಾಗಿದೆ.

ರಾಜ್ಯ ಸರ್ಕಾರ ಮಳೆ ಕೊರತೆ ಎದುರಿಸಿರೋ ಬರಪೀಡಿತ 13 ಜಿಲ್ಲೆಗಳ ಪಟ್ಟಿ ಮಾಡಿದೆ. ಈ ಕೆಳಗಿನಂತಿವೆ..

ಬರಪೀಡಿತ ಜಿಲ್ಲೆಗಳು

 1. ಬೆಂಗಳೂರು ಗ್ರಾಮಾಂತರ
 2. ರಾಮನಗರ
 3. ಕೋಲಾರ
 4. ಚಿಕ್ಕಬಳ್ಳಾಪುರ
 5. ಚಿತ್ರದುರ್ಗ
 6. ರಾಯಚೂರು
 7. ಬಳ್ಳಾರಿ
 8. ಕಲಬುರ್ಗಿ
 9. ಯಾದಗಿರಿ
 10. ಬೀದರ್
 11. ಬಾಗಲಕೋಟೆ
 12. ಬಿಜಾಪುರ
 13. ಗದಗ

ಈ ಬರಪೀಡಿತ ಜಿಲ್ಲೆಗಳ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಬರಪೀಡಿತ ತಾಲೂಕುಗಳ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಬರಪೀಡಿತ ತಾಲೂಕುಗಳಲ್ಲಿ ತುರ್ತು ಕಾಮಗಾರಿ ಕೈಗೊಳ್ಳಲು 500 ಕೋಟಿ ರೂ ತಕ್ಷಣ ಬಿಡುಗಡೆಗೆ ಸರ್ಕಾರ ಮುಂದಾಗಿದೆ.

184 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲು ಸರ್ಕಾರ ತಯಾರಿ ನಡೆಸಿದೆ. ಈ ನಿಟ್ಟಿನಲ್ಲಿ ಬರಪೀಡಿತ ಜಿಲ್ಲೆಗಳಲ್ಲಿ ತುರ್ತು ಪರಿಹಾರ ಕಾಮಗಾರಿ ಕೈಗೊಳ್ಳಲು ಜಿಲ್ಲಾಧಿಕಾರಿಗಳ ವಿಶೇಷ ನಿಧಿ ಬಳಕೆಗೆ ಸರ್ಕಾರ ಸೂಚನೆ ನೀಡಿದೆ.

ಜೊತೆಗೆ, ನೆರೆ ಹಾಗೂ ಬರ ಪರಿಹಾರಕ್ಕೆ 4 ಸಾವಿರ ಕೋಟಿ ರೂ ಅನುದಾನ ಒದಗಿಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಈ ಸಂಬಂಧ ಸೆಪ್ಟೆಂಬರ್ 3 ಕ್ಕೂ ಮುನ್ನ ದೆಹಲಿಗೆ ತೆರಳಲಿರುವ ಕಂದಾಯ ಸಚಿವರ ನೇತೃತ್ವದ ನಿಯೋಗ ಕೇಂದ್ರಕ್ಕೆ ಮನವಿ ಸಲ್ಲಿಸಲಿದೆ.

ಒಟ್ನಲ್ಲಿ ಬರಪೀಡಿತ ತಾಲ್ಲೂಕುಗಳ ಘೋಷಣೆ ಮೂಲಕ ರೈತರ ನೋವಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಇದು ಅನ್ನದಾತರಲ್ಲಿಯೂ ಹೊಸ ನಿರೀಕ್ಷೆ ಹುಟ್ಟುಹಾಕಿದೆ.

ವರದಿ : ಶಿವಕುಮಾರ್ ಜೋಹಳ್ಳಿ, ಪೊಲಿಟಿಕಲ್ ಬ್ಯೂರೋ ಟಿವಿ5, ಬೆಂಗಳೂರು

Next Story

RELATED STORIES