Top

ಸ್ಯಾಂಡಲ್​ವುಡ್​ ಮೇಲೆ ‘ಸಿಸಿಬಿ’ ಹದ್ದಿನ ಕಣ್ಣು.?

ಮೋಜು ಮಸ್ತಿಯ ಹಾಡುಗಳು, ಅವುಗಳ ಕುಣಿತಕ್ಕೆ ಶಿಳ್ಳೆ ಚಪ್ಪಾಳೆ ಜೊತೆ ತಕಧಿಮಿತ ಅಂತ ಕುಣಿಯೋರೇ ಹೆಚ್ಚು. ಆದ್ರೀಗ ಅಂಥವ್ರ ಮೇಲೆ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ. ಧಮ್ ಗಿಮ್ ಅಂತ ಬರೆಯೋಕೂ, ಹಾಡೋಕ್ಕೂ ಮುನ್ನ ಒಮ್ಮೆ ಹುಷಾರಾಗಿ ಅಂತ ಎಚ್ಚರಿಕೆ ಕೊಟ್ಟಿದೆ. ಚಂದನ್ ಶೆಟ್ಟಿ- ಅರ್ಜುನ್ ಜನ್ಯ ಅಂತಹ ದಿಗ್ಗಜರೇ ಇದಕ್ಕೆ ಬೆಚ್ಚಿ ಬೀಳೋ ಪರಿಸ್ಥಿತಿ ಬಂದಿದೆ.

ಆಹಾ ಏನ್ ಚೆಂದಾಗಿದೆ ಗುರೂ ಈ ಹಾಡು. ಮಚ್ಚಾ ಸೂಪರ್ ಲಿರಿಕ್ಸ್ ಕಣೋ. ಹಾಡಿದ್ರೆ ಹೀಗೆ ಹಾಡ್ಬೇಕು ನೋಡಪ್ಪಾ ಅಂತ ಪಬ್ಬು, ಪಾರ್ಟಿಗಳಲ್ಲಿ ಮೋಜು ಮಸ್ತಿ ಮಾಡಿ, ಈ ಹಾಡುಗಳನ್ನ ಹಾಡಿ ಹೊಗಳಿದವ್ರೇ ಹೆಚ್ಚು. ಇದು ಅಕ್ಷರಶಃ ನಿಜವೇ ಆದ್ರೂ, ಇದೀಗ ಇಂತಹ ಹಾಡುಗಳಿಗೆಲ್ಲಾ ಹೊಸ ಸಂಕಷ್ಟ ಎದುರಾಗಿದೆ.

ಈ ಹಾಡುಗಳು ಎಂಟ್ರಟೈನ್ ಮಾಡೋ ಮ್ಯಾಜಿಕ್ ಏನೋ ಸರಿ. ಆದ್ರೆ ಅದ್ರ ಹಿಂದಿರೋ ಲಾಜಿಕ್ ಮಾತ್ರ ಸರಿಯಿಲ್ಲ. ಮೋಜು ಮಸ್ತಿ ಕುಣಿತದ ಈ ಹಾಡುಗಳು ಮನರಂಜನೆ ಜೊತೆ ಸಿಕ್ಕಾಪಟ್ಟೆ ಥ್ರಿಲ್ ಕೊಡಲಿವೆ. ಬೇರೆ ಹಾಡುಗಳಿಗಿಂತ ಬೇರೆಯದ್ದೇ ರೀತಿಯಲ್ಲಿ ಕಿಕ್ಕೇರಿಸಲಿವೆ. ಒಂಥರಾ ಯೂತ್ಸ್​ನ ತಪ್ಪುದಾರಿಗೆ ಎಳೆಯೋಕೆ ಕುಮ್ಮಕ್ಕು ಕೊಟ್ಟಂತಾಗ್ತಿದೆ.

ತೆರೆಮೇಲೆ ಧಮ್ ಹೊಡೆಯೋ ಮುನ್ನ ಹುಷಾರ್..!

ಹೌದು.... ಹೀಗೆ ವೆಸ್ಟ್ರನ್ ಸ್ಟೈಲ್​ನಲ್ಲಿ ಸಾಂಗ್ಸ್ ಮಾಡೋರಿಗೆ ಸಿಸಿಬಿ ಹೊಸ ಶಾಕ್ ಕೊಟ್ಟಿದೆ. ಯೂತ್ಸ್‌ ಸೆಳೆಯೋ ನಿಟ್ಟಿನಲ್ಲಿ, ಅವ್ರನ್ನ ಥಿಯೇಟರ್ ಅಂಗಳಕ್ಕೆ ಕರೆದುಕೊಂಡು ಬರುವಂತೆ ಮಾಡೋ ನಿಟ್ಟಿನಲ್ಲಿ ಈ ರೀತಿ ಸ್ಪೆಷಲ್ ಸಾಂಗ್ಸ್ ಮಾಡೋರ ಮೇಲೆ ಸಿಸಿಬಿ ಇಲಾಖೆ ಹದ್ದಿನ ಕಣ್ಣು ಇಟ್ಟಿದೆ. ಅದಕ್ಕೆ ಚಂದನ್ ಶೆಟ್ಟಿಯ ಅಂತ್ಯ ಸಾಂಗ್ ಬೆಸ್ಟ್ ಎಕ್ಸಾಂಪಲ್.

ಚಂದನ್ ಶೆಟ್ಟಿಗೆ ‘ಸಿಸಿಬಿ’ಯಿಂದ ಬಿಗ್ ಶಾಕ್..!

ಮೂರು ವರ್ಷದ ಹಿಂದೆ ಕನ್ನಡ ಚಂದನ್ ಶೆಟ್ಟಿ ಮ್ಯೂಸಿಕ್ ಕಂಫೋಸ್ ಮಾಡಿ ಹಾಡಿದ ಅಂತ್ಯ ಚಿತ್ರದ ಗಾಂಜಾ ಹಾಡು ಸದ್ಯ ಟಾಕ್ ಆಫ್ ದ ಟೌನ್ ಆಗಿದೆ. ಸಿನಿಮಾ ರಿಲೀಸ್ ಆಗದೇ ಹೋದ್ರೂ ಸಹ, ಚಂದನ್ ಶೆಟ್ಟಿ ನೇಮು ಫೇಮ್​ಗೆ ತಕ್ಕನಾಗಿ ಯೂಟ್ಯೂಬ್​ನಲ್ಲಿ ಅಂತ್ಯ ಸಾಂಗ್ ಸಖತ್ ಸೆನ್ಸೇಷನ್ ಹುಟ್ಟಿಸಿತು.

ಅಂತ್ಯ ಚಿತ್ರದ ಈ ಸಾಂಗ್ ಹಿಟ್ ಆಗ್ತಿದ್ದಂತೆ, ಮಹಿಳಾ ಮತ್ತು ಮಾದಕ ದ್ರವ್ಯ ದಳದಿಂದ ಱಪರ್ ಚಂದನ್ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೂಡ ಕಳಿಸಿತು. ಇಷ್ಟಕ್ಕೂ ಆ ಹಾಡಿನಲ್ಲಿ ಅಂಥದ್ದೇನಿಗೆ ಅಂತ ನೋಡಿದ್ರೆ, ಹಾಡಿನಲ್ಲಿ ಮಾದಕ ದ್ರವ್ಯ ಸೇವನೆಗೆ ಪ್ರಚೋದನೆ ನೀಡಲಾಗ್ತಿದೆ ಅನ್ನೋ ಪಾಯಿಂಟ್ ಚಂದನ್​ಗೆ ಮುಳುವಾಯ್ತು.

‘ಭಂಗಿ ಹೊಡೆದು ನಗುತಾ ಇರು. ಶಿವನು ಹಿಡಿದರೆ ಭಂಗಿ, ನಾವು ಹಿಡಿದರೆ ಕಂಬಿ. ಬಾಬಾ ಎಳೆದರೆ ಪ್ರಸಾದ, ನಾವು ಎಳೆದರೆ ನಿಷೇಧ. ಬಿಡಬೇಡ ಧಮ್ಮು ಇದೇ ವಿಸ್ಕಿ ರಮ್ಮು’ ಅನ್ನೋ ಈ ಪ್ರಚೋದನಕಾರಿ ಸಾಹಿತ್ಯ ಸದ್ಯ ಚಂದನ್​ನ ಸಿಸಿಬಿ ಪೊಲೀಸರ ಬಳಿ ಬರುವಂತೆ ಮಾಡಿದೆ. ಸಮಾಜದ ಸ್ವಾಸ್ತ್ಯ ಹಾಳು ಮಾಡ್ತಿದ್ದ ಆರೋಪದ ಮೇಲೆ ಬಂದಂತಹ ಸಿಸಿಬಿ ನೋಟಿಸ್​ಗೆ ಚಂದನ್ ವಿಡಿಯೋ ಒಂದರ ಮೂಲಕ ಸ್ಪಷ್ಟನೆ ಕೂಡ ಕೊಟ್ಟರು.

ಸಿನಿಮಾ ರಿಲೀಸ್ ಆಗದೇ ಹೋದರೂ ಸಹ, ಮುತ್ತು ನಿರ್ದೇಶಿಸಿ, ಸಾಹಿತ್ಯ ರಚಿಸಿದ್ದ ಈ ಹಾಡು ಚಂದನ್​ನ ಸಂಕಷ್ಟಕ್ಕೆ ಸಿಲುಕಿಸಿದೆ. ಹಾಗಂತ ಚಂದನ್ ಡಿಲೀಟ್ ಮಾಡಿ ಅಂತ ಸುಖಾ ಸುಮ್ಮನೆ ಮನವಿ ಮಾಡಿದ್ರೆ ಆಗಿರೋ ದುರಂತ ತಪ್ಪಿಸೋರು ಯಾರು ಅಂತಿದೆ ಸಿಸಿಬಿ.

ಪೊಲೀಸರ ಮುಂದೆ ಹಾಜರಾದ ಚಂದನ್ ಶೆಟ್ಟಿ..!

ಕ್ಷಮೆ ಕೇಳಿ ಹಾಡು ಡಿಲೀಟ್ ಮಾಡೋ ಭರವಸೆ

ಬೆಳಗ್ಗೆ 11 ಗಂಟೆಗೆ ಸಿಸಿಬಿ ಕಚೇರಿಗೆ ಬಂದು ಸ್ಪಷ್ಟನೆ ನೀಡಬೇಕಿದ್ದ ಚಂದನ್, ಸ್ವಲ್ಪ ತಡವಾಗಿಯೇ ಪೊಲೀಸರ ಮುಂದೆ ಬಂದರು. ನಂತ್ರ ಸುದೀರ್ಘ ಚರ್ಚೆಯ ಬಳಿಕ ಆ ಹಾಡು ಈ ರೀತಿ ಸಮಾಜದ ಸ್ವಾಸ್ತ್ಯ ಕೆಡಿಸುವ ಹಾಡಾಗುತ್ತೆ ಅಂದುಕೊಂಡಿರಲಿಲ್ಲ. ಕೂಡಲೇ ಹಾಡನ್ನ ಡಿಲೀಟ್ ಮಾಡಿಸುತ್ತೇನೆ ಎಂದು ತಪ್ಪೊಪ್ಪಿಗೆ ಹೇಳಿಕೆ ನೀಡಿ ಹೊರಬಂದಿದ್ದಾರೆ.

ರಾಂಬೊ-2 ಚಿತ್ರಕ್ಕಾಗಿ ಅರ್ಜುನ್ ಜನ್ಯಾಗೂ ನೋಟಿಸ್..?

ಉಪ್ಪಿ- 2 ಚಿತ್ರದ ರಿಯಲ್ ಸ್ಟಾರ್ ಉಪೇಂದ್ರ ಕಥೆ ಏನು..?!

ಸದ್ಯ ಚಂದನ್ ಶೆಟ್ಟಿ ಗಾಂಜಾ ಸಾಂಗ್ ಕಾಂಟ್ರವರ್ಸಿ ಕ್ರಿಯೇಟ್ ಮಾಡ್ತಿದ್ದಂತೆ, ಕನ್ನಡದಲ್ಲಿರೋ ಅಂತಹದ್ದೇ ಹಾಡುಗಳ ಮ್ಯೂಸಿಕ್ ಡೈರೆಕ್ಟರ್​ಗಳಿಗೂ ಭಯ ಶುರುವಾಗಿದೆ. ಮೂಲಗಳ ಪ್ರಕಾರ ಸಿಸಿಬಿ ಪೊಲೀಸರು ಱಂಬೋ-2 ಚಿತ್ರದ ಧಮ್ ಮಾರೋ ಧಮ್ ಹಾಡಿನ ಕಂಫೋಸಿಂಗ್ ವಿಚಾರವಾಗಿ ಮ್ಯಾಜಿಕಲ್ ಕಂಫೋಸರ್ ಅರ್ಜುನ್ ಜನ್ಯಾಗೂ ನೋಟಿಸ್ ಕೊಡೋ ಸಾಧ್ಯತೆಯಿದೆ.

ಇನ್ನು ಉಪೇಂದ್ರ ನಟಿಸಿ, ನಿರ್ದೇಶಿಸಿ, ನಿರ್ಮಿಸಿದ್ದ ಉಪ್ಪಿ-2 ಚಿತ್ರದ ಹಾಡೊಂದರಲ್ಲೂ ಗಾಂಜಾ ಸೇವನೆಯ ದೃಶ್ಯಗಳಿವೆ. ನೆಪಕ್ಕೆ ಅಲ್ಲೊಂದು ಡಿಸ್ಕ್ಲೈಮರ್ ಹಾಕಿದ್ರೂ ಸಹ ಮುಂದೊಂದು ದಿನ ಸಿಸಿಬಿ ಪೊಲೀಸರ ಕಣ್ಣಿಗೆ ಬಿದ್ದು ಹೈರಾಣಾಗೋದ್ರಲ್ಲಿ ಡೌಟೇ ಇಲ್ಲ.

ಅದೇನೇ ಇರಲಿ, ಸದ್ಯ ಸಿಸಿಬಿ ಪೊಲೀಸರು ಸಮಾಜದ ಒಳಿತಿಗಾಗಿ ಈ ರೀತಿಯ ಹಾಡುಗಳು ಮಾಡೋರಿಗೆ ಎಚ್ಚರಿಕೆ ಕೊಡೋದ್ರ ಜೊತೆಗೆ ಬ್ಯಾನ್ ಮಾಡಿಸಿದ್ರೆ, ಉತ್ತಮ ಬೆಳವಣಿಗೆ ಅನಿಸಿಕೊಳ್ಳಲಿದೆ.

ವರದಿ : ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್‌, ಟಿವಿ5

Next Story

RELATED STORIES