Top

ಅಡಿಕೆಗೆ ಕೊಳೆ ರೋಗದ ಬಾಧೆ : ಸಂಕಷ್ಟದಲ್ಲಿ ಅಡಿಕೆ ಬೆಳೆಗಾರರು.!

ಅಡಿಕೆಗೆ ಕೊಳೆ ರೋಗದ ಬಾಧೆ : ಸಂಕಷ್ಟದಲ್ಲಿ ಅಡಿಕೆ ಬೆಳೆಗಾರರು.!
X

ಶಿರಸಿ : ಈ ಬಾರಿ ಉತ್ತರಕನ್ನಡ ಜಿಲ್ಲೆಯಲ್ಲಿ ಮೇ ತಿಂಗಳ ಅಂತ್ಯದಿಂದ ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ, ಅಡಿಕೆ ಬೆಳೆಗೆ ಜಿಲ್ಲೆಯಾದ್ಯಂತ ಕೊಳೆ ರೋಗ ಬಾಧಿಸಿದ್ದು ರೈತರು ಕಂಗಾಲಾಗುವಂತೆ ಮಾಡಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಾದ ಮಹಾ ಮಳೆಗೆ ಜಿಲ್ಲೆಯಲ್ಲಿನ ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲೂಕುಗಳಲ್ಲಿ ಅತೀ ಹೆಚ್ಚು ಅಡಿಕೆ ಬೆಳೆ ಹಾನಿಗೊಂಡಿದೆ. ಕಾರಣ, ಮಳೆಯಿಂದಾಗಿ ಅಡಿಕೆಗೆ ಕೊಳೆ ರೋಗ ಬಿದ್ದು, ಇದೀಗ ರೈತರನ್ನು ನಷ್ಟದತ್ತ ದೂಡಿದೆ.

ಪ್ರತೀ ವರ್ಷ ಅಡಿಕೆಗೆ 2ರಿಂದ 3 ಬಾರಿ ಬೋರ್ಡೊ ದ್ರಾವಣ ಸಿಂಪಡಿಸುವ ಮೂಲಕ ಅಡಿಕೆಗೆ ಕೊಳೆರೋಗ ಬಾರದಂತೆ ತಡೆಯುತ್ತಿದ್ದರು. ಆದ್ರೆ ಈ ಬಾರಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಬೋರ್ಡೋ ಸಿಂಪಡಣೆಗೆ ಅವಕಾಶವೇ ಆಗಲಿಲ್ಲ. ಅಲ್ಲದೇ, ಒಂದೊಂದು ದಿನ ಮಳೆ ವಿರಾಮ ನೀಡಿದ್ದರೂ ಕಾರ್ಮಿಕರ ಕೊರತೆಯಿಂದ ಎಷ್ಟೋ ತೋಟಗಳಿಗೆ ಔಷಧ ಸಿಂಪಡಣೆ ಸಾಧ್ಯವಾಗಿಲ್ಲ.

ಕೆಲವರು ಮಳೆಯ ನಡುವೆಯೇ ಬೋರ್ಡೋ ದ್ರಾವಣ ಸಿಂಪಡಿಸಿದ್ದರೂ ಅದು ಫ‌ಲಕಾರಿಯಾಗಲಿಲ್ಲ. ಪರಿಣಾಮ ಅಡಿಕೆಗೆ ಸಂಪೂರ್ಣ ಕೊಳೆರೋಗ ತಗಲಿದೆ. ಪ್ರತೀ ತೋಟದಲ್ಲೂ ಎಳೆಯ ಅಡಿಕೆಗಳು ಉದುರಿ ಬೀಳುತ್ತಿದೆ. ಅಡಿಕೆಯನ್ನೇ ಅವಲಂಬಿಸಿರುವ ಕೃಷಿಕರು ಹೇರಳವಾಗಿ ತೋಟದಲ್ಲಿ ಬಿದ್ದಿರುವ ಅಡಿಕೆ ರಾಶಿಯನ್ನು ನೋಡಿ ಕಂಗಾಲಾಗಿದ್ದಾರೆ.

ಅದ್ರಲ್ಲೂ ಸಣ್ಣ ಪುಟ್ಟ ರೈತರ ಪರಿಸ್ಥಿತಿ ಅಂತೂ ಚಿಂತಾಜನಕವಾಗಿದೆ. ಇನ್ನೂ ಪರಿಸ್ಥಿತಿ ಹೀಗೇ ಮುಂದುವರಿದರೆ, ಈ ಬಾರಿ ಅಡಿಕೆ ಮಾರುಕಟ್ಟೆಗೆ ಬರದೇ ಇರೋದ್ರಲ್ಲಿ ಆಶ್ಚರ್ಯ ಏನಿಲ್ಲ. ಈ ಬಗ್ಗೆ ಸಂಬಂಧಪಟ್ಟ ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ ಬೆಳೆ ಹಾನಿ ಸರ್ವೇ ನಡೆಸಿ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಅಡಿಕೆ ಬೆಳೆಗಾರರಿಗೆ ಒಂದರ ಮೇಲೆ ಒಂದರಂತೆ ಪೆಟ್ಟು ಬಿಳುತ್ತಿದ್ದು ಸರ್ಕಾರ ಕೂಡಾ ಇದರ ಹತೋಟಿಗೆ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಂಡು ಮಲೆನಾಡ ಅಡಿಕೆ ಬೆಳೆಗಾರರ ಹಿತಕಾಯುವ ಕೆಲಸ ಆಗಬೇಕಿದೆ.

ವರದಿ : ವಿನಾಯಕ್ ಹೆಗಡೆ, ಟಿವಿ5 ಶಿರಸಿ

Next Story

RELATED STORIES