Top

ಸಿಎಂ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದ ರೈತರು

ಸಿಎಂ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದ ರೈತರು
X

ತುಮಕೂರು : ರಾಜ್ಯದಲ್ಲಿ ಸಾಕಷ್ಟು ಮಳೆಯಾಗುತ್ತಿದೆ. ಮತ್ತೊಂದಡೆ ಜಲಾಯಶಗಳಲ್ಲಿ ನೀರು ಶೇಖರಿಸಿಕೊಳ್ಳಲಾಗಿದೆ ಹೊರ ಬಿಡಲಾಗುತ್ತಿದೆ. ಆದ್ರೆ ಇಲ್ಲಿನ ರೈತರು ಕುಡಿಯುವ ನೀರಿಗಾಗಿ ರಕ್ತದಲ್ಲಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಆ ಮೂಲಕ ಅನ್ನದಾನಿಗೆ ನೆರವಾಗುವಂತೆ ಮನವಿ ಮಾಡಿದ್ದಾರೆ.

ಒಂದೆಡೆ ಸೇರಿದ ರೈತರು, ರಕ್ತಮಯವಾಗಿರೋ ತಮ್ಮ ಕೈ ಬೆರಳಿನೊಂದಿಗೆ ನಾ ಮುಂದು ತಾ ಮುಂದು ಎಂದು ರಕ್ತದ ಹಸ್ತಾಕ್ಷರಕ್ಕೆ ಮುಗಿಬಿದ್ದಿರೋ ದೃಶ್ಯ. ಇದು ಕಂಡು ಬಂದಿದ್ದು ತುಮಕೂರು ಜಿಲ್ಲೆ ಶಿರಾ ತಾಲೂಕಿನ ಮದಲೂರು ಕೆರೆ ಅಂಗಳದಲ್ಲಿ.

ಇಲ್ಲಿನ ರೈತರು ತಮ್ಮ ಗ್ರಾಮದ ಮದಲೂರು ಕೆರೆಗೆ ನೀರು ಹರಿಸುವಂತೆ ರಕ್ತದಲ್ಲಿ ಪತ್ರ ಬರೆಯುತ್ತಿದ್ದಾರೆ. ಸಿಎಂ ಹೆಚ್ .ಡಿ. ಕುಮಾರಸ್ವಾಮಿಗೆ ಪತ್ರ ರವಾನಿದ್ದಾರೆ. ಗ್ರಾಮದ ಜನ್ಮಭೂಮಿ ರಕ್ಷಣಾ ಪಡೆ ನೇತೃತ್ವದಲ್ಲಿ ರಕ್ತದಲ್ಲಿ ಹೆಬ್ಬಟ್ಟು ಸಹಿ ಮಾಡಿದ್ದಾರೆ. ಅಲ್ಲದೆ ಎಲ್ಲರ ರಕ್ತ ಸಂಗ್ರಹಿಸಿ ಪತ್ರವನ್ನೂ ಬರೆದಿದ್ದಾರೆ.

ರಕ್ತದಲ್ಲಿ ಬರೆದ ಪತ್ರದಲ್ಲಿ ಹೀಗಿದೆ...

ಗೆ,

ಮಾನ್ಯ ಮುಖ್ಯಮಂತ್ರಿಯವರಿಗೆ,

ವಿಷಯ: ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ಬಗ್ಗೆ

ಶಿರಾ ತಾಲೂಕಿನ ಮದಲೂರು ಕೆರೆ ಭಾಗದ ರೈತರಾದ ನಾವು ತಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ, ನಮ್ಮನ್ನು ನೇಣು ಕುಣಿಕೆಯಿಂದ ಪಾರು ಮಾಡಿ, ಮದಲೂರು ಕೆರೆಗೆ ಹೇಮಾ ನೀರನ್ನು ಹರಿಸಿ ಕೆರೆಯನ್ನೂ ಉಳಿಸಿ.

ಇಂತಿ

ಮದಲೂರು ಗ್ರಾಮದ ರೈತರು.

ಪ್ರತಿ ವರ್ಷ ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಕಳ್ಳಂಬೆಳ್ಳ ಗ್ರಾಮದ ಕೆರೆಗೆ ನೀರು ಹರಿಸಲಾಗುತ್ತಿದೆ. ಬಳಿಕ ಮದಲೂರು ಕೆರೆಗೆ ಹರಿಸಲು ಕಾಲುವೆಗಳನ್ನ ನಿರ್ಮಿಸಲಾಗಿದೆ. ಕಳೆದ ವರ್ಷ ಸಚಿವರಾಗಿದ್ದ ಟಿ.ಬಿ.ಜಯಚಂದ್ರ ಕಾಲುವೆಗೆ ಚಾಲನೆ ನೀಡಿದ್ರು.

ಅದ್ಯಾಕೋ ಮಲೆನಾಡಿನಲ್ಲಿ ಮಳೆ ಪ್ರಮಾಣ ಕ್ಷೀಣಿಸಿದರ ಪರಿಣಾಮ ಅಗತ್ಯ ನೀರನ್ನ ಹರಿಸಿಕೊಳ್ಳಲಾಗಲಿಲ್ಲಾ. ಆದ್ರೆ ಈ ಬಾರಿ ಹೇಮಾವತಿ ಜಲಾಶಯದಲ್ಲಿ ಹೆಚ್ಚಿನ ನೀರು ಶೇಖರಣೆಯಾಗಿದೆ. ಇದ್ರಿಂದ ಅಣೆಕಟ್ಟೆಯಿಂದ ಹೆಚ್ಚು ನೀರನ್ನ ಹರಿಸಬಹುದಾಗಿದೆ ಅನ್ನೋದು ಅನ್ನದಾತರ ಅಭಿಮತ.

ಶಿರಾ ತಾಲೂಕಿನ ಕಳ್ಳಂಬೆಳ್ಳ ಗ್ರಾಮದ ಕೆರೆಗೆ ಹೇಮಾವತಿ ನೀರು ಹರಿಸಿದ್ರೆ, ಮದಲೂರು ಕೆರೆಗೆ ಹರಿಯುವ ಮಾರ್ಗ ಮಧ್ಯೆಯ ಸುಮಾರು 11 ಕೆರೆಗಳು ಜೀವ ಜಲ ಕಾಣಲಿದೆ. ಮದಲೂರು ಕೆರೆ ಸುಮಾರು 1,500 ಎಕರೆ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ.

ಮದಲೂರು ಕೆರೆ ಸುತ್ತಮುತ್ತ ಇರುವ ಕಸಬಾ ಹೋಬಳಿ, ಹುಲಿಕುಂಟೆ, ದಿಡಗನಹಳ್ಳಿ, ಅರೆಹಳ್ಳಿ, ಹೊನ್ನಗೊಂಡನಹಳ್ಳಿ, ಕೊಟ್ಟ, ಪಟ್ಟನಾಯಕನಹಳ್ಳಿಯ ಪ್ರದೇಶದಲ್ಲಿಯೂ ಅಂತರ್ಜಲ ವೃದ್ಧಿಸಲಿದೆ ಎಂಬ ವಾದ ಸ್ಥಳೀಯ ರೈತರದ್ದಾಗಿದೆ. ಜಿಲ್ಲೆಯ ಕೆರೆಗಳಿಗೆ ಹರಿಸಬೇಕೆಂಬುದು ರೈತರ ಆಗ್ರಹ.

ಅನೇಕ ಬಾರಿ ಸ್ಥಳೀಯ ಜನಪ್ರತಿನಿಧಿಗಳಿಗೆ ತುಮಕೂರು ಜಿಲ್ಲೆಯ ರೈತರು ಮನವಿ ಮಾಡುತ್ತಲೇ ಬಂದಿದ್ದಾರೆ. ಆದ್ರೆ ಇದಕ್ಕೆ ಜನಪ್ರತಿನಿಧಿಗಳು ಕ್ಯಾರೇ ಎನ್ನುತ್ತಿಲ್ಲ. ಇದ್ರಿರಿಂದ ರೊಚ್ಚಿಗೆದ್ದ ರೈತರು ಕ್ರಾಂತಿಕಾರಿಯ ಹೋರಾಟಕ್ಕಿಳಿದಿದ್ದಾರೆ. ರೈತರ ಪರ ಸಿಎಂ ಅದ್ಯಾವ ಭರವಸೆ ನೀಡ್ತಾರೆ ಕಾದು ನೋಡ್ಬೇಕು..

ವರದಿ : ಟಿ.ಯೋಗಿಶ್, ಟಿವಿ5 ತುಮಕೂರು

Next Story

RELATED STORIES