Top

ನಾಳೆ ಧೀರಯೋಧನ ಜೀವನಾಧಾರಿತ 'ಮುಕ್ತಿ' ಚಿತ್ರ ಬಿಡುಗಡೆ.!

ನಾಳೆ ಧೀರಯೋಧನ ಜೀವನಾಧಾರಿತ ಮುಕ್ತಿ ಚಿತ್ರ ಬಿಡುಗಡೆ.!
X

ಧಾರವಾಡ : ಕನ್ನಡಿಗರ ಹೆಮ್ಮೆಯ ವೀರಯೋಧ ಹನುಮಂತಪ್ಪ ಕೊಪ್ಪದ. ಹಿಮದಲ್ಲಿ ಸಾವು, ನೋವಿನ ಹೋರಾಟ ನಡೆಸಿ, ವೀರ ಮರಣ ಹೊಂದಿದ್ದ ಧೀರಯೋಧ ಆತ. ಧಾರವಾಡ ಜಿಲ್ಲೆಗೆ ಹಾಗೂ ಕರ್ನಾಟಕ ರಾಜ್ಯಕ್ಕೆ ಹಿರಿಮೆ ತಂದಿದ್ದ ವೀರಯೋಧ ಹನುಮಂತಪ್ಪ ಕೊಪ್ಪದ. ಅವರ ಜೀವನಾಧಾರಿತ ಚಿತ್ರ ನಿರ್ಮಾಣವಾಗಿದ್ದು, ನಾಳೆ ಬೆಳ್ಳಿತೆರೆಗೆ ಬರಲು ರೆಡಿಯಾಗಿದೆ.

ಇಡೀ ದೇಶವೇ ಹೆಮ್ಮೆ ಪಡುವಂತಹ ವೀರಯೋಧ ಹನುಮಂತಪ್ಪ ಕೊಪ್ಪದ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೆಟದೂರ ಗ್ರಾಮದ ಈ ವೀರಯೋಧ ಸಿಯಾಚಿನ್ ಪ್ರದೇಶದಲ್ಲಿ ಕರ್ತವ್ಯದ ಮೇಲಿದ್ದಾಗ ಮೃತಪಟ್ಟ. ಹಿಮ ಕುಸಿದು ಅದರಡಿ ಸಿಲುಕಿ ಹಲವು ದಿನಗಳ ಕಾಲ ಬದುಕಿದ್ದ ಹನುಮಂತಪ್ಪ ಅವರ ಬದುಕೆ ಒಂದು ಅದ್ಭುತ.

ನಾಲ್ಕಾರು ದಿನಗಳ ಕಾಲ ಮಂಜಿನಡಿಯೇ ಬದುಕಿ 2016ರ ಫೆಬ್ರುವರಿ 11ರಂದು ಅವರು ಮೃತಪಟ್ಟರು. ವೀರಯೋಧ ಹನುಮಂತಪ್ಪ ಕೊಪ್ಪದ ಚಿಂತಿಸುತ್ತಿದ್ದ ದೇಶದ ಸಮಸ್ಯೆಗಳ ಕುರಿತು ಪಾತ್ರ ವರ್ಗ ಸೃಷ್ಠಿಸಿ ಇದೀಗ ಮುಕ್ತಿ ಅನ್ನೋ ಚಿತ್ರ ನಿರ್ಮಿಸಲಾಗಿದೆ. ಶ್ರೀಧರ್ ನಿರ್ಮಾಣದ ಈ ಚಿತ್ರವನ್ನು ನಾಳೆ 45 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಇನ್ನು ಚಿತ್ರವನ್ನು ಬೆಂಗಳೂರಿನ ಮಾಗಡಿ ಅರಣ್ಯ ಪ್ರದೇಶ, ಧಾರವಾಡ ಜಿಲ್ಲೆಯ ಹನುಮಂತಪ್ಪ ಹುಟ್ಟೂರಾದ ಬೆಟ್ಟದೂರ ಗ್ರಾಮ ಸೇರಿದಂತೆ ಉತ್ತರ ಕರ್ನಾಟಕ ಬಹುತೇಕ ಭಾಗದಲ್ಲಿ ಎರಡು ತಿಂಗಳ ಕಾಲ ಚಿತ್ರೀಕರಿಸಲಾಗಿದೆ. ಮುಕ್ತಿ ಚಿತ್ರ ನಿರ್ಮಾಣಕ್ಕೆ 80 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಹನುಮಂತಪ್ಪ ಕೊಪ್ಪದ ಕುಟುಂಬ ಹಾಗೂ ಆತ್ಮೀಯ ಮಿತ್ರರ ಸಹಾಯದಿಂದ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ.

ರಜೆಯ ಸಂದರ್ಭದಲ್ಲಿ ಊರಿಗೆ ಬಂದಾಗ ಕೊಪ್ಪದ ಹೆಚ್ಚಿನ ವೇಳೆಯನ್ನು ಗೆಳೆಯರೊಂದಿಗೆ ಕಳೆಯುತ್ತಿದ್ದರು. ಆಗ ಗೆಳೆಯರಿಗೆ ಹೇಳಿದ ಅನೇಕ ಅನುಭವಗಳನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಮುಕ್ತಿ ಚಿತ್ರ ಅದ್ಭುತವಾಗಿ ನಿರ್ಮಾಣವಾಗಿದೆ ಅನ್ನೋದು ಕೊಪ್ಪದ ಅವರ ಪತ್ನಿ ಮಹಾದೇವಿ ಅವರ ಅನಿಸಿಕೆ.

ಮುಕ್ತಿ ಚಿತ್ರವನ್ನು ಶಂಕರ್ ನಿರ್ದೇಶಿಸಿದ್ದು, ನಕುಲ್, ಮೈತ್ರಿ ಸೇರಿದಂತೆ ಹಲವು ಹೊಸ ನಟರು ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಪ್ರೀತಿ-ಪ್ರೇಮ, ಮರ ಸುತ್ತುವ ಸಿನಿಮಾಗಳಿಗಿಂತ ಯುವ ಜನತೆಯ ಜವಾಬ್ದಾರಿ ಏನು ಎಂಬುದನ್ನು ತಿಳಿಸುವಂತಹ ಈ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಗಲಿ ಅನ್ನೋದೆ ನಮ್ಮ ಆಶಯ.

ವರದಿ : ದುರ್ಗೇಶ ನಾಯಿಕ, ಟಿವಿ5 ಧಾರವಾಡ

Next Story

RELATED STORIES