Top

ಸರ್ಕಾರದ ಮೇಲೆ ಸಿದ್ದರಾಮಯ್ಯನ ಹಿಡಿತ ತಪ್ಪಿಸಲು ಪ್ಲಾನ್.?

ಸಮ್ಮಿಶ್ರ ಸರ್ಕಾರದ ನೀತಿ ನಿರೂಪಣೆಗಾಗಿ ರಚನೆಯಾಗಿರುವ ಸಮನ್ವಯ ಸಮಿತಿ ಆಟಕ್ಕುಂಟು ಲೆಕ್ಕಕ್ಕಿಲ್ಲ ದಂತಾಗಿದೆ. ಸದಸ್ಯರ ನಡುವಿನ ಸಮನ್ವಯತೆ ಕೊರತೆಯಿಂದಾಗಿ ಸಭೆ ನಡೆಯುವುದೇ ಅನುಮಾನವಾಗಿದೆ. ಹೀಗಾಗಿ ಮಹತ್ವದ ಯೋಜನೆಗಳು,ಕಾರ್ಯಕ್ರಮಗಳಿಗೆ ಬ್ರೇಕ್ ಬಿದ್ದಿದೆ. ಮತ್ತೊಂದೆಡೆ ಸಿದ್ದರಾಮಯ್ಯಗೆ ಮೈತ್ರಿ ಸರ್ಕಾರದ ಮೇಲಿನ ಹಿಡಿತ ತಪ್ಪಿಸುವ ಲೆಕ್ಕಾಚಾರವು ಅಡಗಿದೆ.

ಪಕ್ಷ-ಸರ್ಕಾರ ನಡುವಿನ ಹೊಂದಾಣಿಕೆಯ ಸಮಿತಿ ಕಡೆಗಣನೆ

ಮೈತ್ರಿ ಸರ್ಕಾರದ ಸಾಮಾನ್ಯ ಕನಿಷ್ಟ ಕಾರ್ಯಕ್ರಮಗಳನ್ನು ರೂಪಿಸಲು ರಚನೆಯಾದ ಸಮನ್ವಯ ಸಮಿತಿ ಸಭೆಗೆ ಸಿಎಂ ಕ್ಯಾರೆ ಎನ್ನುತ್ತಿಲ್ಲ. ಪ್ರಮುಖ ಕಾರ್ಯಕ್ರಮಗಳು, ಯೋಜನೆಗಳನ್ನು ರೂಪಿಸುವ ಮೊದಲು ಸಮಿತಿ ಸಭೆಯಲ್ಲಿ ಅನುಮೋದನೆ ಪಡೆಯುವುದು ಕಡ್ಡಾಯವಾಗಿತ್ತು. ಆದ್ರೀಗ ಮೈತ್ರಿಯ ಎಲ್ಲಾ ಷರತ್ತುಗಳಿಗೆ ಸಿಎಂ ಹೆಚ್ ಡಿಕೆ ಎಳ್ಳುನೀರು ಬಿಟ್ಟಿದ್ದಾರೆ ಎನ್ನಲಾಗ್ತಿದೆ. ವಿನಾಕರಣ ನೆಪಗಳನ್ನು ಮುಂದಿಟ್ಟುಕೊಂಡು ಸಭೆಯ ದಿನವನ್ನು ಮುಂದೂಡುತ್ತಲಿದ್ದಾರೆ.

ಬಜೆಟ್ ಮಂಡನೆಗು ಮುನ್ನ ಮೂರು ಸಭೆ ನಡೆಸಿರುವ ಸಿಎಂಗೆ ನಾಲ್ಕನೇ ಸಭೆ ನಡೆಸಲು ಮನಸ್ಸಿಲ್ಲವೆನ್ನಲಾಗಿದೆ. ಒಂದು ವೇಳೆ ಸಭೆ ನಡೆಸಿದ್ರೆ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಎಲ್ಲಿ ಮೈತ್ರಿ ಸರ್ಕಾರದ ಮೇಲೆ ತಿರುಗಿ ಬೀಳಬಹುದೆಂಬ ಆತಂಕದಿಂದ ಸಭೆ ನಡೆಸಲು ಸಿಎಂ ಹಿಂದೇಟು ಹಾಕಿದ್ದಾರೆ ಎನ್ನಲಾಗ್ತಿದೆ. ಮತ್ತೊಂದೆಡೆ ಸಿದ್ದರಾಮಯ್ಯನ್ನು ಕಡೆಗಣಿಸಲು ಉದ್ದೇಶಪೂರ್ವಕವಾಗಿಯೇ ಈ ತಂತ್ರ ಅನುಸರಿಲಾಗ್ತಿದೆ ಎಂಬ ಮಾತುಗಳು ಕೇಳಿ ಬರ್ತಿವೆ. ಇದಕ್ಕೆ ಪೂರಕವೆಂಬಂತೆ ಡಿಸಿಎಂ ಹೇಳಿಕೆ ಕೂಡ ಪುಷ್ಟಿ ನೀಡುತ್ತಿದೆ.

ಸಿಎಂಗೆ ಸಾಥ್ ನೀಡ್ತಿದ್ದಾರಾ ಡಿಸಿಎಂ ಪರಮೇಶ್ವರ್..?

ಸಮನ್ವಯ ಸಮಿತಿ ಸಭೆ ನಡೆಸುವುದಕ್ಕೆ ಸ್ವತಃ ಸಿಎಂ ಹಾಗೂ ಡಿಸಿಎಂ ಪರಮೇಶ್ವರ್ ಗೆ ಆಸಕ್ತಿಯಿಲ್ಲ. ಸಿಎಂಗೆ ಎಲ್ಲಾ ವಿಚಾರಗಳಲ್ಲಿ ಡಿಸಿಎಂ ಪರಮೇಶ್ವರ್ ಸಾಥ್ ನೀಡ್ತಿದ್ದಾರೆ. ಈ ಮೂಲಕ ಸರ್ಕಾರದ ಮೇಲೆ ಸಿದ್ದರಾಮಯ್ಯನ ಹಿಡಿತ ತಪ್ಪಿಸಲು ಪ್ಲಾನ್ ರೂಪಿಸ್ತಿದ್ದಾರೆ ಅನ್ನೋ ಮಾಹಿತಿಯಿದೆ. ಜೊತೆಗೆ ಸಮಿತಿ ಸಭೆ ನಡೆಸಿದ್ರೆ, ತಮ್ಮ ಸರ್ಕಾರದ ಬಜೆಟ್ ಯೋಜನೆಗಳನ್ನ ಅನುಷ್ಟಾನ ತರದೆ ನಿರ್ಲಕ್ಷ್ಯದ ವಹಿಸಿದ್ದೀರಾ ಅಂತ ಸಿದ್ದರಾಮಯ್ಯ ಎಲ್ಲಿ ತಕರಾರು ತೆಗೆಯುತ್ತಾರೋ ಅನ್ನೋ ಅಂತಕ ಸಿಎಂಗಿದೆ. ಹೀಗಾಗಿಯೇ ಸಮನ್ವಯ ಸಮಿತಿ ಸಭೆ ನಡೆಸೋಕೆ ಹಿಂದೇಟು ಹಾಕ್ತಿದ್ದಾರೆ ಅಂತ ಹೇಳಲಾಗ್ತಿದೆ.

ಸಮನ್ವಯ ಸಮಿತಿ ಸಭೆ ನಡೆಸದಿದ್ರೆ ಸರ್ಕಾರಕ್ಕೆ ಗಂಡಾಂತರ

ಇನ್ನೂ ಸೆಪ್ಟಂಬರ್ 2 ರಿಂದ 15 ರವರೆಗೆ ಸಿದ್ದು ಫಾರಿನ್ ಟೂರ್ ಹೋಗ್ತಿದ್ದಾರೆ. ಅಷ್ಟರೊಳಗೆ ಸಮನ್ವಯ ಸಮಿತಿ ಸಭೆ ಮುಗಿಸೋಣ ಅಂತ ಡ್ಯಾನಿಷ್ ಆಲಿಗೆ ಸಭೆ ಕರೆಯೋಕೆ ಹೇಳಿದ್ರು. ಆದ್ರೆ ಸಿಎಂ ಡೇಟ್ ನೀಡ್ತಿಲ್ಲ ಹೀಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅಸಮಾಧಾನಗೊಂಡಿದ್ದಾರೆ. ಒಂದು ವೇಳೆ ಸಮನ್ವಯ ಸಮಿತಿ ಸಭೆ ನಡೆಯದೆ ಹೋದ್ರೆ ಸರ್ಕಾರಕ್ಕೂ ಗಂಡಾಂತರ ಗ್ಯಾರೆಂಟಿ..

ವಿದೇಶದಲ್ಲೇ ಕೂತು ದಾಳ ಉರುಳಿಸೋಕೆ ರೆಡಿಯಾಗ್ತಿದ್ದಾರೆ ಸಿದ್ದು

ಯಾಕಂದ್ರೆ ಸಿದ್ದು ಸುಮ್ಮನೆ ಕೂರುವ ವ್ಯಕ್ತಿಯಲ್ಲ. ತಮ್ಮ ಇಮೇಜಿಗೆ ಧಕ್ಕೆ ಬಂದರೆ ನಯವಾಗಿಯೇ ದಾಳ ಉರುಳಿಸೋಕೆ ರೆಡಿಯಾಗ್ತಾರೆ ಅನ್ನೋದ ಎಲ್ಲರಿಗೂ ಗೊತ್ತೇಇದೆ. ಹೀಗಾಗಿ ವಿದೇಶಿ ಟೂರ್ ವೇಳೆಯೇ ಸರ್ಕಾರ ಬೀಳಿಸುವ ಪ್ಲಾನ್ ಸಿದ್ದು ರೂಪಿಸ್ತಾರೆ ಅನ್ನೋ ಮಾತುಗಳೂ ಕೇಳಿಬರ್ತಿವೆ. ಒಂದು ವೇಳೆ ಸರ್ಕಾರ ಡ್ಯಾಮೇಜ್ ಆದ್ರೂ ನಾನು ಇಲ್ಲಿರಲಿಲ್ಲ ಪ್ರವಾಸದಲ್ಲಿದ್ದೆ ಏನೂ ಗೊತ್ತಾಗ್ಲಿಲ್ಲ ಅಂತ ಸಮರ್ಥನೆ ಮಾಡಿಕೊಳ್ಳೋಕೆ ಸಿದ್ದು ಚಿಂತಿಸ್ತಿದ್ದಾರೆ ಅನ್ನೋ ಮಾಹಿತಿಯೂ ಹೊರಬಿದ್ದಿದೆ.

ಒಟ್ಟಾರೆ ಸಮನ್ವಯ ಸಮಿತಿ ಸಭೆ ನಡೆಸದೆ ಮೈತ್ರಿ ಸರ್ಕಾರ ಮಹತ್ವದ ತೀರ್ಮಾನ ಕೈಗೊಳ್ತಿರೋದು ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾದಂತಾಗಿದೆ. ಮತ್ತೊಂದೆಡೆ. ಸಿದ್ದರಾಮಯ್ಯನನ್ನು ಕಟ್ಟಿಹಾಕುವ ತಂತ್ರವು ಇದರಲ್ಲಡಗಿದೆ. ಆದ್ರೆ ಗೌಡರ ಗರಡಿಯಲ್ಲೇ ಒಳಗಿ ಬಂದಿರುವ ಸಿದ್ದು ಸುಮ್ಮನಿರ್ತಾರಾ ಅನ್ನೋದು ಸದ್ಯಕ್ಕೆ ಉದ್ಬವಿಸಿರುವ ಪ್ರಶ್ನೆ. ಒಂದಂತೂ ನಿಜ. ಸಿದ್ದು ಕಡೆಗಣಿಸಿ ಆಡಳಿತ ನಡೆಸೋಕೆ ಸಿಎಂ ಮುಂದಾದ್ರೆ,ಸಿದ್ದು ಪರೋಕ್ಷವಾಗಿಯೇ ಸರ್ಕಾರ ಉರುಳಿಸುವ ಸ್ಕೆಚ್ ರೆಡಿಮಾಡ್ತಾರೆ ಅನ್ನೋದು ಅಷ್ಟೇ ಸತ್ಯ.

ವರದಿ : ಶಿವಕುಮಾರ್ ಜೋಹಳ್ಳಿ, ಪೊಲಿಟಿಕಲ್ ಬ್ಯೂರೋ, ಟಿವಿ5 ಬೆಂಗಳೂರು

Next Story

RELATED STORIES