Top

ಕೊಡಗಿನ ಜನರಿಗೆ ನೆರವು: ಮಿಡಿದ ರಶ್ಮಿಕಾ ಮಂದಣ್ಣ

ಕೊಡಗಿನ ಜನರಿಗೆ ನೆರವು: ಮಿಡಿದ ರಶ್ಮಿಕಾ ಮಂದಣ್ಣ
X

ಕೊಡಗಿನ ನಟಿ ರಶ್ಮಿಕಾ ಮಂದಣ್ಣ ಕೊಡಗಿನಲ್ಲಿ ಭೀಕರ ಮಳೆ ಹಾಗೂ ಪ್ರವಾಹದಿಂದ ಸಂತ್ರಸ್ತರಾದವರಿಗೆ ನೆರವಾದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಫೇಸ್​ಬುಕ್​ನಲ್ಲಿ ಭಾವನಾತ್ಮಕವಾಗಿ ಬರೆದಿರುವ ರಶ್ಮಿಕಾ ಮಂದಣ್ಣ ಅವರ ಪತ್ರವನ್ನು ಹಾಗೆ ಕೊಟ್ಟಿದ್ದೇವೆ. ಓದಿಕೊಳ್ಳಿ.

ನಮಗೆ ನೋವಾದಾಗ ಅಮ್ಮ ಎಂದು ಕೂಗುತ್ತೇವೆ , ಅಮ್ಮನೇ ಮುನಿಸಿಕೊಂಡಾಗ ಯಾರನ್ನು ಕೂಗುವುದು ಏನೆಂದು ಕೂಗುವುದು... ನಾ ಹುಟ್ಟಿದ , ಬೆಳೆದ ಆಡಿದ್ದ ಓದಿದ್ದ ಉಸಿರಾಡುತ್ತಿದ್ದ ಕೊಡಗು ಇಂದು ಮುಳುಗಿದ ಹಡಗಾಗಿದೆ.

ಜಲಪ್ರಳಯಕ್ಕೆ ಲಕ್ಷಾಂತರ ಜನರು ಅಕ್ಷರಶಃ ನೀರುಪಾಲಾಗಿದ್ದಾರೆ ಇದಕ್ಕೆ ಮೂಕಜೀವಿಗಳು ಹೊರತಾಗಿಲ್ಲ, ಯಾರಿಗೂ ನೋವು ಮಾಡದ ನಮ್ಮವರು ಇಂದು ನೋವಿನಲ್ಲಿದ್ದಾರೆ , ಪ್ರಪಂಚದಲ್ಲಿ ಮೂರರಷ್ಟು ನೀರು ಒಂದರಷ್ಟು ಭೂಮಿ ಎಂಬುದನ್ನು ನೀರೇ ಮುಂದೆ ನಿಂತು ಹೇಳಿದಂತಿದೆ!

ನಾನು,ನೀನು, ನಂದು, ನಿಂದು, ಮೇಲು- ಕೀಳು, ಶ್ರೀಮಂತಿಕೆ.. ಎಲ್ಲಾ ನೀರಿನಲ್ಲಿ ಕೊಚ್ಚಿ ಹೋಗಿದೆ. ಮನುಷ್ಯತ್ವವೇ ಕಣ್ತುಂಬಿಕೊಂಡಿದೆ. ಮಳೆಯ ಶಬ್ಧ ನೀರಿನ ಆರ್ಭಟ ಕೇಳಿದರೆ ಜೀವ ನಡುಗುವಂತಾಗಿದೆ. ಮಕ್ಕಳು ಮಾಡಿದ ಪಾಪವಾದರು ಏನು? ಪ್ರಾಣಿಗಳು ಮಾಡಿದ ಪಾಪವಾದರು ಏನು? ದೇವರೇ ಉತ್ತರಿಸು.

ಬೆಟ್ಟಗಳು ನೆಂದು ನೆಲವಾಗಿ, ಬಯಲು ಕೆರೆಗಳಾಗಿ, ದಾರಿಗಳು ನದಿಗಳಾಗಿ, ಕೊಡಗು ಸಮುದ್ರವಾಗಿದೆ... ನೀರು ನೀರು ನೀರು ಬಿಟ್ಟರೆ.. ಕಣ್ಣೀರು.'ಧೈರ್ಯವಾಗಿರಿ ನಾವಿದ್ದೇವೆ' ಎಂಬ ನಿಮ್ಮುಗಳ ಮಾತು

ನಮ್ಮನ್ನು ಜೀವಂತವಾಗಿರಿಸಿದೆ. ಸರ್ಕಾರಗಳು, ಸ್ವಯಂ ಸಂಘಗಳು, ಸಂಸ್ಥೆಗಳು, ಚಿತ್ರರಂಗದವರು, ಪತ್ರಕರ್ತರು, ಮಾಧ್ಯಮದವರು, ವಿದ್ಯಾರ್ಥಿಗಳು, ಕೋಟ್ಯಾನುಕೋಟಿ ಕನ್ನಡಿಗರು, ಎಲ್ಲಾ ಭಾಷಿಕರು, ಪ್ರಪಂಚದ ಮೂಲೆಮೂಲೆಯಲ್ಲಿರುವ ಕೊಡವ ಸಮಾಜದವರು, ನೀವುಗಳು ಕೈ ಮೀರಿ ಸಹಾಯ ಮಾಡಿದ್ದೀರಿ ಮಾಡುತ್ತಿದ್ದೀರಿ, ಬಳ್ಳಾರಿಯ ಜೈಲಿನ ಖೈದಿಗಳು ನಾಲ್ಕುವಾರದ ಮಾಂಸದೂಟ ಬೇಡವೆಂದು ಮೂರುಲಕ್ಷ ರೂಗಳನ್ನು ಕೊಡಗಿನ ಸಂತ್ರಸ್ತರಿಗೆ ಕಳಿಸಿದ್ದಾರೆಂದರೆ ಮನುಷ್ಯತ್ವ ನಮಗಿಂತ ಮುಂದಿದೆಯೆನಿಸುತ್ತದೆ.

ನಿಮ್ಮ ಸ್ಪಂದನೆಗೆ ಸಹಾಯಕ್ಕೆ ನಾನು ಋಣಿ ... ಮನಸ್ಪೂರ್ವಕವಾಗಿ ಕೊಡಗಿನ ಪರವಾಗಿ ಒದ್ದೆಕಣ್ಣಿನಿಂದ ವಂದಿಸುತ್ತಿದ್ದೇನೆ , ಕೊಡಗನ್ನು ಕೊಡಗಿನವರ ನೆಂದ ನೊಂದ ಬದುಕನ್ನು ಪುನರ್ನಿರ್ಮಿಸಬೇಕಾಗಿದೆ, ಕೈ ಜೋಡಿಸಿ ನಾನು ನಿಮ್ಮೊಂದಿಗೆ ಇರುತ್ತೇನೆ

-ರಶ್ಮಿಕಾ ಮಂದಣ್ಣ. ನಟಿ

Next Story

RELATED STORIES