Top

ಯಶೋಮಾರ್ಗ ಹೆಸರು ದುರುಪಯೋಗ: ಯಶ್ ಗರಂ

ಯಶೋಮಾರ್ಗ ಹೆಸರು ದುರುಪಯೋಗ: ಯಶ್ ಗರಂ
X

ಕೆಜಿಎಫ್ ಚಿತ್ರೀಕರಣ ಮುಗಿಸಿ ಕಿರಾತಕ-2 ಚಿತ್ರಕ್ಕಾಗಿ ಗೆಟಪ್ ಬದಲಿಸುವ ಚಿಂತನೆಯಲ್ಲಿರುವ ನಟ ಯಶ್ ಸದ್ಯ ಗರಂ ಆಗಿದ್ದಾರೆ. ಅದಕ್ಕೆ ಕಾರಣ ಕೊಡಗು ಪ್ರವಾಹ ಸಂತ್ರಸ್ತರಿಗೆ ತಮ್ಮ ಯಶೋಮಾರ್ಗದ ಮೂಲಕ ನೆರವಾಗುತ್ತಿದ್ದಾರೆ. ಆದರೆ ಯಶೋಮಾರ್ಗದ ಹೆಸರನ್ನು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿರುವುದು ಗೊತ್ತಾಗಿ ಗರಂ ಆಗಿದ್ದಾರೆ.

ಹೌದು, ಇತ್ತೀಚೆಗೆ ಮಡಿಕೇರಿಯಲ್ಲಿ ಅತೀವ ಮಳೆಯಿಂದ ಆದಂತಹ ಅನಾಹುತಗಳಿಗೆ ಇಡೀ ಕರುನಾಡು ಕಂಬನಿ ಮಿಡಿದಿದೆ. ಅಷ್ಟೇ ಅಲ್ಲ, ಸಂತ್ರಸ್ತರಿಗೆ ನೆರವಾಗೋ ನಿಟ್ಟಿನಲ್ಲಿ ಲೋಡ್ ಗಟ್ಟಲೆ ಸಿದ್ದ ಆಹಾರ ಪದಾರ್ಥಗಳು ಸೇರಿದಂತೆ ಮೂಲಭೂತ ವಸ್ತುಗಳನ್ನ ನಿರಾಶ್ರಿತರಿಗೆ ತಲುಪಿಸುವಲ್ಲಿ ಯಶಸ್ವಿ ಆಗಿದೆ. ಇದರಲ್ಲಿ ಯಶ್​ರ ಯಶೋಮಾರ್ಗದ ಪಾಲು ಕೂಡ ಇದೆ.

ಯಶ್ ಮಾರ್ಗದರ್ಶನದಂತೆ, ಚೇತನ್, ರಾಕೇಶ್ ಸೇರಿದಂತೆ ಯಶೋಮಾರ್ಗದ 15 ಮಂದಿ ತಂಡ ಮಡಿಕೇರಿಗೆ ಒಂದು ಟ್ರಕ್ ತುಂಬಾ ವಸ್ತುಗಳನ್ನ ತುಂಬಿಸಿಕೊಂಡು ನಿರಾಶ್ರಿತ ಕೇಂದ್ರಗಳಿಗೆ ಧಾವಿಸಿತ್ತು. ಅದನ್ನ ನಮ್ಮ ಟಿವಿ5 ಕೂಡ ವರದಿ ಮಾಡಿತ್ತು. ಅಂದ್ರೆ ನೇರವಾಗಿ ನಿರಾಶ್ರಿತರಿಗೆ ಆ ವಸ್ತುಗಳು ಸೇರುವಂತೆ ಮಾಡಿದ್ರು ಯಶ್.

ಅಂದಹಾಗೆ ಆ ಟ್ರಕ್ ಪೂರ ಯಶೋಮಾರ್ಗ ಟೀಂ ಹೊತ್ತು ಹೊರಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನ ಯಶ್ ಆಗಲಿ ಅಥ್ವಾ ಯಶೋಮಾರ್ಗ ಸಂಸ್ಥೆಯಾಗಲಿ ದೇಣಿಗೆ ಸಂಗ್ರಹಿಸಿ ಖರೀದಿಸಿದ್ದಲ್ಲ. ಬದಲಿಗೆ ನಟ ಯಶ್ ತಮ್ಮ ಸ್ವಂತ ದುಡಿಮೆಯ ಹಣದಲ್ಲಿ ಖರೀದಿ ಮಾಡಿದ ವಸ್ತುಗಳು ಅನ್ನೋದು ವಿಶೇಷ. ಆದ್ರೀಗ ಮಡಿಕೇರಿ ಸಂತ್ರಸ್ಥರಿಗಾಗಿ ಯಶೋಮಾರ್ಗದ ಹೆಸ್ರಲ್ಲಿ ಒಂದಷ್ಟು ಮಂದಿ ದೇಣಿಗೆ ಸಂಗ್ರಹಿಸ್ತಿರೋದು ಯಶ್​ರ ಗಮನಕ್ಕೆ ಬಂದಿದೆ. ಈ ಕಾರಣಕ್ಕೆ ಯಶ್ ಗರಂ ಆಗಿರೋದಲ್ಲದೆ, ಅಂಥವ್ರಿಗೆ ಹಣ ನೀಡಬೇಡಿ ಅಂತ ಮನವಿ ಮಾಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಖುದ್ದು ಯಶ್ ಅವರೇ ಈ ರೀತಿ ಮನವಿ ಮಾಡಿಕೊಂಡಿದ್ದಾರೆ. ಯಥಾವತ್ ನಿಮ್ಮ ಮುಂದೆ ಇಟ್ಟಿದ್ದೇವೆ....

‘ಯಶೋಮಾರ್ಗ' ಸಂಸ್ಥೆಯ ಮೂಲಕ ನನ್ನ ಸ್ವಂತ ಸಂಪಾದನೆಯ ಹಣದಲ್ಲಿ ನನ್ನ ಆತ್ಮ ತೃಪ್ತಿಗಾಗಿ ನನ್ನ ಕೈಲಾದ ಮಟ್ಟಿಗೆ ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಿದ್ದೇನೆ. ಇದಕ್ಕಾಗಿ ಯಾವುದೇ ದೇಣಿಗೆ/ವಂತಿಗೆಯನ್ನು ಜನರಿಂದ ಸ್ವೀಕರಿಸುತ್ತಿಲ್ಲ.

ಆದರೆ, ಇತ್ತೀಚೆಗೆ ಭಾರಿ ಮಳೆಯಿಂದಾಗಿ ನಿರಾಶ್ರಿತರಾದ ಕೊಡಗಿನ ಜನರಿಗೆ ಪರಿಹಾರ ನೀಡುವ ನೆಪದಲ್ಲಿ ಯಶೋಮಾರ್ಗದ ಹೆಸರಲ್ಲಿ ದೇಣಿಗೆ ಸಂಗ್ರಹಿಸುತ್ತಿರುವುದು ನನ್ನ ಗಮನಕ್ಕೆ ಬಂದಿರುತ್ತದೆ. ಅವರ ಉದ್ದೇಶ ಒಳ್ಳೆಯದೇ ಆಗಿದ್ದರೂ ಇದಕ್ಕಾಗಿ ಯಶೋಮಾರ್ಗದ ಹೆಸರನ್ನು ಬಳಸಬಾರದೆಂದು ವಿನಂತಿಸುತ್ತೇನೆ.

ಸಾರ್ವಜನಿಕರ ನೆರವು ಯಶೋಮಾರ್ಗಕ್ಕೆ ಅವಶ್ಯವೆನಿಸುವ ಸಂದರ್ಭದಲ್ಲಿ ನಾನೇ ಖುದ್ದು ನಿಮ್ಮ ಮುಂದೆ ಬರುತ್ತೇನೆ. ಸದ್ಯಕ್ಕೆ ಯಶೋಮಾರ್ಗದ ಹೆಸರಿನಲ್ಲಿ ದೇಣಿಗೆ ಕೇಳಲು ಬಂದವರಿಗೆ ದೇಣಿಗೆ ನೀಡಬೇಡಿ ಎಂದು ನಾನು ಈ ಸಂದರ್ಭದಲ್ಲಿ ತಿಳಿಸಬಯಸುತ್ತೇನೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಮುಖ್ಯಸ್ಥ, ಟಿವಿ5

Next Story

RELATED STORIES