Top

ಇದು ಕೊಡಗಿನ ನೆರೆ ಸಂತ್ರಸ್ತ ಕಣ್ಣೀರ ಕತೆ.!

ಇದು ಕೊಡಗಿನ ನೆರೆ ಸಂತ್ರಸ್ತ ಕಣ್ಣೀರ ಕತೆ.!
X

ಕೊಡಗು : ಮಹಾ ಮಳೆಯ ಅಬ್ಬರಕ್ಕೆ ಅಕ್ಷರಶಹ ಕೊಡಗು ಜಿಲ್ಲೆ ನಲುಗಿ ಹೋಗಿದೆ. ಎಲ್ಲೆಲ್ಲೂ ಈಗ ಸ್ಮಶಾನ ಮೌನ ಆವರಿಸಿದೆ. ಕೋಟ್ಯಾಧೀಶ್ವರರ ಬದುಕು ಈಗ ಬೀದಿಗೆ ಬಂದು ನಿಂತಿದೆ.

ಸರ್ಕಾರ ರಚಿಸಿರುವ ಅನೇಕ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ವೀರ ಯೋಧರ ನಾಡಿನ ಜನರು, ನಾಶಹೊಂದಿದ ತಮ್ಮ ನೆಲೆಗಾಗಿ ಹಂಬಲಿಸುತ್ತಿದ್ದಾರೆ.

ತಾವು ಸಾಕಿದ ಪ್ರಾಣಿ, ತಾವು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ನಾಯಿಗಾಗಿ ಪ್ರಾಣ ಉಳಿದರೇ ಸಾಕು ಅಂತ ಹೊರಗೆ ಬಂದವರು ಅವುಗಳ ಪಾಡು ಈಗ ಏನಾಗಿದೆಯೋ ಅಂತ ಪರಿತಪಿಸುತ್ತಿದ್ದಾರೆ.

ಅಂದಹಾಗೇ ರಚ್ಚೆ ಹಿಡಿದ ಮಳೆ ಹೊರಗೆ ಬಾರದಂತೆ ಕಾಡುತ್ತಿದ್ದರೂ, ಶಿಬಿರದಲ್ಲಿ ಆಶ್ರಯ ಪೆಡಿದಿರುವ ಕೊಡವರನ್ನು ಊರಿನ ಸೆಳೆತ ಮಾತ್ರ ಬಿಟ್ಟಿಲ್ಲ.

ಜಾರಿಕೊಂಡು ಹೋದ ತೋಟ, ಗದ್ದೆಗಳನ್ನು, ಅಲ್ಲಿಯೇ ಬಿಟ್ಟು ಬಂದಿರುವ ದನಗಳನ್ನು ನೋಡಲು ಜೀವಗಳು ಎಳೆಯುತ್ತಿದೆ. ಹೀಗಾಗಿ ರಕ್ಷಣಾ ಸಿಬ್ಬಂದಿಗಳು ಬೇಡ ಎಂದು ಎಷ್ಟೇ ತಿಳಿಹೇಳಿದರೂ, ಕಣ್ ತಪ್ಪಿಸಿ ಊರಿನತ್ತ ಧಾವಿಸುವ ಪ್ರವೃತ್ತಿ ಎದ್ದು ಕಾಣುತ್ತಿದೆ.

ಮೈತುಂಬಾ ಗಾಯ ಮಾಡಿಕೊಂಡು ಕೆಂಪುಬಣ್ಣಕ್ಕೆ ತಿರುಗಿರುವ ಕಾಲೂರಿನ ಗುಡ್ಡದ ಮೇಲೆ ನಿಂತು ಕೆಳಗೊಮ್ಮೆ ದಿಟ್ಟಿಸಿ ನೋಡಿದರೇ ಸಾಕು, ಕಣಿವೆಯ ಆಳದಲ್ಲಿ ಭಗ್ನಾವಶೇಷಗಳನ್ನು ಪುಟ್ಟ ಬೆಂಕಿ ಪೊಟ್ಟಣಗಳಂತೆ ಗೋಚರಿಸುತ್ತಿವೆ.

ಆದರೂ ಜನರು ಅಳಿದುಳಿದ ಮನೆಗಳತ್ತ ಮುಖ ಮಾಡುವುದನ್ನು ಬಿಟ್ಟಿಲ್ಲ. ಹೀಗೆ ಹೊರಟ ನಾಲ್ಕಾರು ಜನಗಳ ಗುಂಪು ನೋಡ ನೋಡುತ್ತಿದ್ದಂತೆ ಗುಡ್ಡದ ನೆತ್ತಿಯಿಂದ ಕೆಳ ಇಳಿಯತೊಡಗಿತು.

ರಸ್ತೆಯೇ ಇಲ್ಲದ ಊರಿಗೆ ಹೊಸದೊಂದು ಕಾಲುದಾರಿಯನ್ನು ಸೃಷ್ಠಿಸಿಕೊಂಡು ಸಾಹಸ ಮಾಡುತ್ತಿರುವ ದೃಶ್ಯ ಎಲ್ಲೆಲ್ಲೂ ಸರ್ವೇ ಸಾಮಾನ್ಯವಾಗಿದೆ.

ಹೀಗೆ ಹೊರಟ ಒಂದು ಗುಂಪಿನಲ್ಲಿದ್ದ ವ್ಯಕ್ತಿಗಳ ಕೈನಲ್ಲಿ ಬ್ರೆಡ್ಡಿನ ಪ್ಯಾಕೆಟ್ಟುಗಳು. ಎತ್ತ ಹೊರಟಿದ್ದು ಎಂದು ಕೇಳಿದವರಿಗೆ, ಮನೆಗಳಿಂದ ನಾವು ಜೀವ ಭಯದಲ್ಲಿ ಓಡಿ ಬರುವಾಗ ಹಸುಗಳ ಹಗ್ಗ ಬಿಚ್ಚಿ ಹಾಗೆ ಬಂದಿದ್ದೆವು.

ನಮ್ಮ ನಾಯಿಗಳು ಸಹ ಅಲ್ಲಿಯೇ ಇದ್ದವು. ಅವುಗಳ ಗತಿ ಏನಾಗಿದೆಯೋ ನೋಡೋಕೆ ಹೊರಟಿದ್ದೇವೆ ಎಂದು ಹೇಳುತ್ತಾ ಮುಂದೆ ಸಾಗುತ್ತಾರೆ.

ಮಳೆ ಇನ್ನೂ ಸುರಿಯುತ್ತಿದೆ. ಗುಡ್ಡ ಬೇರೆ ಕುಸಿಯುತ್ತಿದೆ. ಅಪಾಯವನ್ನು ಏಕೆ ಮೈಮೇಲೆ ಎಳೆದುಕೊಳ್ಳುತ್ತೀರಿ ಎಂದ್ರೇ, ಜೀವ ತಡೆಯುತ್ತಿಲ್ಲ. ಒಮ್ಮೆ ನೋಡಿಕೊಂಡು ಬಂದು ಬಿಡುತ್ತೇವೆ ಎಂದು ಹೇಳಿ ಮುಂದೆ ಸಾಗುತ್ತಾರೆ.

ಹೀಗೆ ಹೋದವರನ್ನು ಕಂಡ ಸಾಕು ಪ್ರಾಣಿಗಳು, ತನ್ನೊಡೆಯನನ್ನು ಕಂಡ ತಕ್ಷಣ, ಓಡೋಡಿ ಬರೋದು. ಅವುಗಳಿಗೆ ಕೊಟ್ಟ ಆಹಾರ ತಿಂದು ಸಂತಸ ಪಡುವ ಪರಿಯಂತೂ ಅಕ್ಷರಗಳಲ್ಲಿ ಹಿಡಲಾಗದು.

ಕೊಡಗಿನ ಮಳೆಯ ರುದ್ರ ನರ್ತನ ಆ ಕರಾಳ ದಿನಗಳ ಬಗ್ಗೆ ಈಗ ಒಬ್ಬೊಬ್ಬರದು ಒಂದೊಂದು ಮಾತು. ನನ್ನೂರು ತುಂಬಾ ಚೆನ್ನಾಗಿತ್ತು.

ಕೇರಳ ಕಡೆಯಿಂದ ಪ್ರವೇಶವಾದ ಮುಂಗಾರು ಜೂನ್‌ ಮಧ್ಯಂತರದಲ್ಲಿ ಒಂದು ರಾತ್ರಿ ಇದ್ದಕ್ಕಿದ್ದಂತೆ ಸುರಿದ ಮಳೆಯ ರುದ್ರ ನರ್ತನಕ್ಕೆ, ಈಗ ಎಲ್ಲವೂ ಮಾಯವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.

ಈ ದೃಶ್ಯ ಕೊಡಗಿನ ನೆರೆ ಸಂತ್ರಸ್ತ ಪ್ರದೇಶಗಳಲ್ಲಿ ಸರ್ವೇಸಾಮಾನ್ಯವಾಗಿದೆ. ಈ ಮೂಲಕ ಕೊಡಗು ನೆರೆ ಸಂತ್ರಸ್ತ ಜನರ ಕಣ್ಣೀರ ಕತೆ ಒಂದೊಂದೇ ಬಿಚ್ಚಿಕೊಳ್ಳುತ್ತಾ ಹೋಗುತ್ತವೆ.

Next Story

RELATED STORIES