Top

ಇದು ತಾಯಿಯ ಆಸೆ ಈಡೇರಿಸಿದ ಆಧುನಿಕ ಶ್ರವಣಕುಮಾರನ ಕಥೆ

ಇದು ತಾಯಿಯ ಆಸೆ ಈಡೇರಿಸಿದ ಆಧುನಿಕ ಶ್ರವಣಕುಮಾರನ ಕಥೆ
X

ಧಾರವಾಡ : ನಮಗೆಲ್ಲಾ ಶ್ರವಣ ಕುಮಾರನ ಕಥೆ ಗೊತ್ತು. ತಂದೆ-ತಾಯಿಯನ್ನು ಹೆಗಲ ಮೇಲೆ ಹೊತ್ತೊಯ್ದು ಆತ ಅವರಿಗೆ ತೀರ್ಥ ಯಾತ್ರೆ ಮಾಡಿಸಿದ ವ್ಯಕ್ತಿಯಾತ. ಅದೇ ರೀತಿ ಧಾರವಾಡದಲ್ಲಿ ಓರ್ವ ವ್ಯಕ್ತಿಯೂ ತನ್ನ ವೃದ್ಧ ತಾಯಿಯನ್ನು ಬೈಕ್ ಮೇಲೆ ಕರೆದೊಯ್ದು ಸಾವಿರಾರು ಕೀ.ಮೀ. ದೂರದಲ್ಲಿರೋ ದೇವಸ್ಥಾನಗಳ ದರ್ಶನ ಮಾಡಿಸುತ್ತಿದ್ದಾನೆ. ಇಂಥ ಆಧುನಿಕ ಶ್ರವಣಕುಮಾರನ ಕಥೆ ಮುಂದೆ ಓದಿ..

ಡಿ. ಕೃಷ್ಣಕುಮಾರ್, ಮೈಸೂರಿನ ಇವರು ಕಳೆದ ಜನವರಿಯಿಂದಲೇ ತಾಯಿಯೊಂದಿಗೆ ಊರು ಬಿಟ್ಟಿದ್ದಾರೆ. ಅಷ್ಟಕ್ಕೂ ಅವರು ಓಡಾಡುತ್ತಿರೋದು ತಾಯಿಯ ಆಸೆ ಈಡೇರಿಸಲು. ತಾಯಿ 70 ವರ್ಷದ ಚೂಡಾರತ್ನ ಅವರು ತೀರ್ಥ ಯಾತ್ರೆಯ ಬಯಕೆಯನ್ನು ಮಗನ ಮುಂದೆ ಇಟ್ಟರು. ಈ ವಯಸ್ಸಿನಲ್ಲಿ ತಾಯಿಯನ್ನು ಹೇಗೆ ಕರೆದೊಯ್ಯೋದು ಅಂತಾ ಕೃಷ್ಣಕುಮಾರ್ ಅವರಿಗೆ ಚಿಂತೆಯಾಯಿತು.

ಕಾರಿನಲ್ಲಿ ಕರೆದೊಯ್ಯೋದು ತುಂಬಾನೇ ದುಬಾರಿ ಅಂದುಕೊಂಡು ತಮ್ಮ 20 ವರ್ಷದ ಸಂಗಾತಿ ಬಜಾಜ್ ಚೇತಕ್ ಸ್ಕೂಟರ್ ನಲ್ಲಿಯೇ ತಾಯಿಯನ್ನು ತೀರ್ಥಯಾತ್ರೆಗೆ ಕರೆದೊಯ್ಯಲು ಪ್ಲ್ಯಾನ್ ಮಾಡಿದರು. ಮಗನ ಈ ಸಾಹಸಕ್ಕೆ ತಾಯಿಯೂ ಸಾಥ್ ಕೊಟ್ಟರು. ಸಂಕ್ರಾಂತಿ ಮರುದಿನ ಜನವರಿ 16 ರಂದು ಮೈಸೂರಿನಿಂದ ಆರಂಭವಾದ ಯಾತ್ರೆ ಇವತ್ತು ಆರು ರಾಜ್ಯಗಳನ್ನು ಸುತ್ತಾಡಿ ಧಾರವಾಡಕ್ಕೆ ಬಂದು ನಿಂತಿದೆ.

ಅಷ್ಟಕ್ಕೂ ಕೃಷ್ಣಕುಮಾರ್ ಅವರಿಗೆ ಇಂಥ ಯೋಚನೆ ಬಂದಿದ್ದು ಅಕಸ್ಮಾತ್ ಆಗಿ ನಡೆದ ಘಟನೆಯಿಂದ. ಅವರ ತಂದೆ ಇದ್ದಾಗ ತಾಯಿ ಅವರ ಸೇವೆ ಮತ್ತು ಅಡುಗೆ ಮನೆಗಷ್ಟೇ ಸೀಮಿತರಾಗಿದ್ದರು. ನಾಲ್ಕು ವರ್ಷಗಳ ಹಿಂದೆ ತಂದೆ ದಕ್ಷಿಣಾಮೂರ್ತಿ ತೀರಿಕೊಂಡರು. ಒಂದು ದಿನ ಚೂಡಾರತ್ನ ಅವರು ತಾವು ಬೇಲೂರು-ಹಳೆಬೀಡು ನೋಡಿಲ್ಲ ಎಂದರು.

ಮೈಸೂರಿನಿಂದ ಅತ್ಯಂತ ಸಮೀಪದಲ್ಲಿರುವ ಊರನ್ನೇ ನೋಡಿಲ್ಲ ಎಂದಾಗ ಮಗನಿಗೆ ತೀರಾನೇ ಬೇಸರವಾಯಿತು. ಆಗಲೇ ಅವರನ್ನು ಯಾತ್ರೆಗೆ ಕರೆದೊಯ್ಯಲು ಸಂಕಲ್ಪ ಮಾಡಿದರು. ಬೆಂಗಳೂರಿನಲ್ಲಿ ಕಂಪನಿಯೊಂದರ ಮಾರುಕಟ್ಟೆ ಪ್ರತಿನಿಧಿಯಾಗಿ ಕೆಲಸ ಮಾಡಿದ ಕೃಷ್ಣಕುಮಾರ್, ಸರಳ ಬದುಕಿಗೆ ಸಾಕಾಗುವಷ್ಟು ದುಡಿದಿದ್ದೇನೆ ಅಂತಾರೆ. ತಾಯಿ ಬದುಕಿರುವಾಗಲೇ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕೆನ್ನಿಸಿ ಇಂಥದ್ದೊಂದು ನಿರ್ಧಾರಕ್ಕೆ ಬಂದಿದ್ದಾರೆ.

ತಾಯಿಯ ಸೇವೆಯಲ್ಲಿಯೇ ಬದುಕಬೇಕು ಅಂದುಕೊಂಡಿರೋ ಕೃಷ್ಣಕುಮಾರ್ ಅವರಿಗೆ ಮದುವೆಯಾಗಿಲ್ಲ. ಆದರೆ ತಾಯಿಯ ಆಸೆ ಈಡೇರಿಸಲು ಇಂಥದ್ದೊಂದು ಸಾಹಸಕ್ಕೆ ಕೈ ಹಾಕಿರೋದು ನಿಜಕ್ಕೂ ಅಚ್ಚರಿಯ ಸಂಗತಿ. ಸ್ಕೂಟರ್‌ನಲ್ಲೇ ತಮ್ಮ ಕೆಲವು ಜೊತೆ ವಸ್ತ್ರ, ಮಲಗುವ ಹಾಸಿಗೆ, ಹೊದಿಕೆ, ಒಂದಷ್ಟು ಹಣ್ಣು ಹಂಪಲು, ಅವಲಕ್ಕಿ ಇತ್ಯಾದಿ ಆಹಾರಗಳನ್ನು ಇಟ್ಟುಕೊಂಡಿದ್ದಾರೆ.

ಮಳೆಯಿಂದ ರಕ್ಷಿಸಿಕೊಳ್ಳಲು ರೇನ್‌ಕೋಟ್‌, ಚಳಿಗೆ ಸ್ವೆಟರ್ ಇತ್ಯಾದಿಗಳಿವೆ. ಹಳೆಯ ಸ್ಕೂಟರ್‌ ಆದರೂ ಒಂದು ದಿನವೂ ಸಮಸ್ಯೆ ನೀಡಿಲ್ಲ ಎನ್ನುವುದು ಕೃಷ್ಣಕುಮಾರ್ ಅವರ ಸಮಾಧಾನ. ಅದೆಲ್ಲಕ್ಕಿಂತ ದೊಡ್ಡ ಸಮಾಧಾನವೆಂದರೆ ಇಷ್ಟುಇಳಿ ವಯಸ್ಸಿನಲ್ಲಿ ತಾಯಿ ಚೂಡಾರತ್ನ ಅವರಿಗೆ ಎಲ್ಲಿಯೂ ಆರೋಗ್ಯ ಕೈಕೊಟ್ಟಿಲ್ಲ ಅನ್ನೋದು. ಅಲ್ಲದೇ ಮಗನ ಸಾಹಸದ ಜೊತೆಗೆ ಸಾಗುತ್ತಿರೋ ಅವರಿಗೆ ತೀರ್ಥಯಾತ್ರೆಯ ಖುಷಿ ಬೇರೆ. ಇದೀಗ ಇವರು ಪ್ರಯಾಣಿಸಿದ್ದು ಬರೋಬ್ಬರಿ 23 ಸಾವಿರ ಕಿ.ಮೀ.

ಮೈಸೂರಿನಿಂದ ಹೊರಟ ಇವರು ದಕ್ಷಿಣ ಕರ್ನಾಟಕದ ದೇವಾಲಯಗಳ ಯಾತ್ರೆ ಮುಗಿಸಿದ್ದಾರೆ. ಮಂತ್ರಾಲಯದ ದರ್ಶನ ಮಾಡಿ, ಕೊಪ್ಪಳ, ಗದಗ ಮಾರ್ಗವಾಗಿ ಧಾರವಾಡಕ್ಕೆ ಬಂದಿದ್ದಾರೆ. ‘ಸ್ಕೂಟರ್‌ನಲ್ಲೇ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರಕ್ಕೂ ಹೋಗಿ ಬಂದಿದ್ದಾರೆ. ನಿತ್ಯವೂ ಭೇಟಿ ನೀಡುವ ಮಠ, ಮಂದಿರಗಳಲ್ಲೇ ಆಹಾರ ಸೇವಿಸಿ, ಮಲಗುತ್ತಾರೆ.

ಸಧ್ಯಕ್ಕೆ ಧಾರವಾಡದ ಸುತ್ತಮುತ್ತಲಿರೋ ದೇವಸ್ಥಾನಗಳಿಗೆ ಭೇಟಿ ನೀಡಿ, ಕರಾವಳಿ ಕಡೆಗೆ ಹೋಗೋ ಯೋಚನೆಯಿದೆ. ಕೃಷ್ಣಕುಮಾರ್ ಇಂಥ ಸಾಹಸಕ್ಕೆ ಕೈ ಹಾಕಿದ್ದು ಅಚ್ಚರಿಯ ಸಂಗತಿ. ಆದರೆ ಅದಕ್ಕಿಂತ ಅಚ್ಚರಿಯ ಸಂಗತಿ ಅಂದರೆ ಇಳಿ ವಯಸ್ಸಿನಲ್ಲಿಯೂ ಮಗನೊಂದಿಗೆ ಇಷ್ಟೊಂದು ದಿನ, ಸಾವಿರಾರು ಕಿ.ಮೀ. ಪ್ರಯಾಣ ಮಾಡಿದ್ದು.

ವರದಿ : ದುರ್ಗೇಶ ನಾಯಿಕ, ಟಿವಿ5 ಧಾರವಾಡ

Next Story

RELATED STORIES