Top

ಪಾಂಡ್ಯ ದಾಳಿಗೆ ಪತರಗುಟ್ಟಿದ ಇಂಗ್ಲೆಂಡ್​: ಭಾರತಕ್ಕೆ ಭಾರೀ ಮುನ್ನಡೆ

ಪಾಂಡ್ಯ ದಾಳಿಗೆ ಪತರಗುಟ್ಟಿದ ಇಂಗ್ಲೆಂಡ್​: ಭಾರತಕ್ಕೆ ಭಾರೀ ಮುನ್ನಡೆ
X

ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ 29 ಎಸೆತಗಳ ಅಂತರದಲ್ಲಿ 5 ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಈ ಮೂಲಕ ಮೂರನೇ ಟೆಸ್ಟ್ ಪಂದ್ಯದಲ್ಲಿ 168 ರನ್ ಗಳ ಭಾರೀ ಮುನ್ನಡೆ ಪಡೆಯುವ ಜೊತೆ ಸರಣಿಯಲ್ಲಿ ಮೊದಲ ಬಾರಿ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.

ಪಂದ್ಯದ ಎರಡನೇ ದಿನವಾದ ಭಾನುವಾರ ಭಾರತ ತಂಡವನ್ನು 329 ರನ್ ಗಳಿಗೆ ಆಲೌಟ್ ಮಾಡಿದ ನಂತರ ಆಡಲಿಳಿದ ಇಂಗ್ಲೆಂಡ್ ತಂಡ ಚಹಾ ವಿರಾಮಕ್ಕೂ ಮುನ್ನವೇ 161 ರನ್ ಗಳಿಗೆ ಆಲೌಟಾಯಿತು. 2007ರ ನಂತರ ಭಾರತ ತಂಡ ಗಳಿಸಿದ ಅತೀ ದೊಡ್ಡ ಇನಿಂಗ್ಸ್ ಮುನ್ನಡೆ ಇದಾಗಿದೆ.

ಇಂಗ್ಲೆಂಡ್ ಒಂದೂ ವಿಕೆಟ್ ಕಳೆದುಕೊಳ್ಳದೇ 54 ರನ್ ಗಳಿಸಿತ್ತು. ಆದರೆ ನಂತರ ಇಂಗ್ಲೆಂಡ್ ಸತತ ವಿಕೆಟ್ ಕಳೆದುಕೊಂಡಿತು. ಹಾರ್ದಿಕ್ ಪಾಂಡ್ಯ ಕೇವಲ 29 ಎಸೆತಗಳಲ್ಲಿ 5 ವಿಕೆಟ್ ಪಡೆದು ಈ ಸಾಧನೆ ಮಾಡಿದರು.

ಭಾರತ ಎರಡನೇ ಇನಿಂಗ್ಸ್ ನಲ್ಲಿ ಉತ್ತಮ ಆರಂಭ ಪಡೆದಿದ್ದು ದಿನಾದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 124 ರನ್ ಗಳಿಸಿದೆ. ಇದರೊಂದಿಗೆ ಭಾರತ ಒಟ್ಟಾರೆ 292 ರನ್ ಮುನ್ನಡೆ ಗಳಿಸಿ ಪಂದ್ಯದ ಮೇಲೆ ಹಿಡಿತ ಬಿಗಿಗೊಳಿಸಿದೆ.

ಪೂಜಾರ (33) ಮತ್ತು ಕೊಹ್ಲಿ (8) ಕ್ರೀಸ್ ನಲ್ಲಿ ಇದ್ದಾರೆ. 44 ರನ್ ಗಳಿಸಿದ ಧವನ್ ಮತ್ತು 36 ರನ್ ಗಳಿಸಿದ ರಾಹುಲ್ ನಿರ್ಗಮಿಸಿದ್ದಾರೆ.

ಇಂಗ್ಲೆಂಡ್ ತಂಡಕ್ಕೆ ಕುಕ್ ಮತ್ತು ಜೆನ್ನಿಂಗ್ಸ್ 54 ರನ್ ಪೇರಿಸಿ ಉತ್ತಮ ಆರಂಭ ಒದಗಿಸಿದರು. ಆದರೆ ನಂತರ ಈ ಜೋಡಿ ಬೇರ್ಪಡುತ್ತಿದ್ದಂತೆ ತಂಡ ಸತತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು.

ಮಧ್ಯಮ ಕ್ರಮಾಂಕದಲ್ಲಿ ಜೋಸ್ ಬಟ್ಲರ್ (39) ತಂಡವನ್ನು ಆಧರಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬೆನ್ನೆಲುಬು ಮುರಿದ ಹಾರ್ದಿಕ್ ಪಾಂಡ್ಯ ಸರಣಿಯಲ್ಲಿ ಮೊದಲ ಬಾರಿ ಮಿಂಚಿದರು.

  • ಸಂಕ್ಷಿಪ್ತ ಸ್ಕೋರ್
  • ಭಾರತ ಮೊದಲ ಇನಿಂಗ್ಸ್ 329 ಮತ್ತು 2 ವಿಕೆಟ್ ಗೆ 124 (ಧವನ್ 44, ರಾಹುಲ್ 36, ಪುಜಾರ ಅಜೇಯ 33)
  • ಇಂಗ್ಲೆಂಡ್ ಮೊದಲ ಇನಿಂಗ್ಸ್ 161 (ಬಟ್ಲರ್ 39, ಹಾರ್ದಿಕ್ 28/5, ಇಶಾಂತ್ 32/2, ಬುಮ್ರಾ 37/2).

Next Story

RELATED STORIES