Top

3ನೇ ಟೆಸ್ಟ್​: ಕೊಹ್ಲಿ-ರಹಾನೆ ಆಟಕ್ಕೆ ಒಲಿದ ದಿನದ ಗೌರವ

3ನೇ ಟೆಸ್ಟ್​: ಕೊಹ್ಲಿ-ರಹಾನೆ ಆಟಕ್ಕೆ ಒಲಿದ ದಿನದ ಗೌರವ
X

ಶತಕ ವಂಚಿತ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಅವರ ಶತಕದ ಜೊತೆಯಾಟದ ನೆರವಿನಿಂದ ಭಾರತ ತಂಡ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನವೇ 300ಕ್ಕೂ ಅಧಿಕ ಮೊತ್ತ ಪೇರಿಸಿ ದಿನದ ಗೌರವ ತನ್ನದಾಗಿಸಿಕೊಂಡಿತು.

ನಾಟಿಂಗ್ ಹ್ಯಾಮ್ ನಲ್ಲಿ ಶನಿವಾರ ಆರಂಭಗೊಂಡ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ದಿನದಾಟದ ಅಂತ್ಯಕ್ಕೆ ಮೊದಲ ಇನಿಂಗ್ಸ್ ನಲ್ಲಿ 6 ವಿಕೆಟ್ ಕಳೆದುಕೊಂಡು 307 ರನ್ ಕಲೆ ಹಾಕಿತು.

ಟಾಸ್ಸ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ ತಂಡಕ್ಕೆ ಶಿಖರ್ ಧವನ್ ಮತ್ತು ಕೆ.ಎಲ್. ರಾಹುಲ್ ಮೊದಲ ವಿಕೆಟ್ ಗೆ 60 ರನ್ ಪೇರಿಸಿ ಉತ್ತಮ ಆರಂಭ ಒದಗಿಸಿದರು.

65 ಎಸೆತಗಳಲ್ಲಿ 7 ಬೌಂಡರಿ ಸೇರಿದ 35 ರನ್ ಬಾರಿಸಿದ ಧವನ್ ವೇಗವಾಗಿ ರನ್ ಗಳಿಸುವ ಆತುರದಲ್ಲಿ ವಿಕೆಟ್ ಕೈ ಚೆಲ್ಲಿದರು. ಇದರ ಬೆನ್ನಲ್ಲೇ ರಾಹುಲ್ (23 ರನ್, 53 ಎಸೆತ, 4 ಬೌಂಡರಿ) ಕೂಡ ನಿರ್ಗಮಿಸಿದರು.

ಹಂತದಲ್ಲಿ ಜೊತೆಯಾದ ವಿರಾಟ್ ಕೊಹ್ಲಿ ಮತ್ತು ರಹಾನೆ ಮೂರನೇ ವಿಕೆಟ್ ಗೆ 159 ರನ್ ಕಲೆ ಹಾಕಿ ತಂಡವನ್ನು ಹಳಿಗೆ ತಂದರು. ಅತ್ಯುತ್ತಮವಾಗಿ ಆಡುತ್ತಿದ್ದ ಜೋಡಿಯನ್ನು ಸ್ಟುವರ್ಟ್ ಬ್ರಾಡ್ ಮುರಿದರು.

131 ಎಸೆತಗಳಲ್ಲಿ 12 ಬೌಂಡರಿ ಒಳಗೊಂಡ 81 ರನ್ ಕಲೆ ಹಾಕಿ ಉತ್ತಮವಾಗಿ ಆಡುತ್ತಿದ್ದ ರಹಾನೆ ಔಟಾದರು. ಇದಾದ ಕೆಲವೇ ಹೊತ್ತಿನಲ್ಲಿ 152 ಎಸೆತಗಳಲ್ಲಿ 11 ಬೌಂಡರಿ ಸೇರಿದ 97 ರನ್ ಗಳಿಸಿದ್ದ ಕೊಹ್ಲಿ ರಶೀದ್ ಎಸೆತದಲ್ಲಿ ವಿಕೆಟ್ ಕೈ ಚೆಲ್ಲಿ 3 ರನ್ ಗಳಿಂದ ಶತಕ ವಂಚಿತರಾದರು.

ದಿನದ ಅಂತ್ಯದಲ್ಲಿ 18 ರನ್ ಗಳಿಸಿದ್ದ ಹಾರ್ದಿಕ್ ಪಾಂಡ್ಯ 18 ರನ್ ಗಳಿಸಿ ಔಟಾದರೆ, ಟೆಸ್ಟ್ ಗೆ ಪಾದರ್ಪಣೆ ಮಾಡಿದ ಡೆಲ್ಲಿಯ ವಿಕೆಟ್ ಕೀಪರ್ ರಿಷಭ್ ಪಂತ್ 32 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸೇರಿದ 22 ರನ್ ಗಳಿಸಿ ವಿಕೆಟ್ ಉಳಿಸಿಕೊಂಡಿದ್ದಾರೆ.

  • ಸಂಕ್ಷಿಪ್ತ ಸ್ಕೋರ್
  • ಭಾರತ ಮೊದಲ ಇನಿಂಗ್ಸ್ 6 ವಿಕೆಟ್ 307 (ಕೊಹ್ಲಿ 97, ರಹಾನೆ 81, ಧವನ್ 35, ರಾಹುಲ್ 23, ಪಂತ್ ಅಜೇಯ 22, ಹಾರ್ದಿಕ್ 18, ಕ್ರಿಸ್ ವೋಕ್ಸ್ 75/3).

Next Story

RELATED STORIES