Top

ನೀರಿನ ಒತ್ತಡಕ್ಕೆ ರಾಜ್ಯದ ಅನೇಕ ಜಲಾಶಯಗಳಲ್ಲಿ ಬಿರುಕು.?

ಬೆಂಗಳೂರು : ರಾಜ್ಯದ ಜಲಾಶಯಗಳ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಪ್ರಮುಖ ಡ್ಯಾಂಗಳಲ್ಲಿ ಸಣ್ಣಪುಟ್ಟ ಬಿರುಕು ಕಾಣಿಕೊಂಡಿವೆ. ಕೆಆರ್ ಎಸ್, ಕಬಿನಿ ಹಾಗೂ ಹೇಮಾವತಿ ತುಂಗಭದ್ರಾ ಭಾಗದ ಅಣೆಕಟ್ಟೆಗಳು ಬಿರುಕು ಬಿಟ್ಟಿದೆ. ಖುದ್ದು ಜಲಸಂಪನ್ಮೂಲ ಸಚಿವರೇ ಇದನ್ನ ಬಹಿರಂಗಪಡಿಸಿದ್ದಾರೆ.

ಬಿಟ್ಟು ಬಿಡದೇ ವರುಣ ತೋರುತ್ತಿರುವ ಆರ್ಭಟಕ್ಕೆ ಕೇರಳದಲ್ಲಿ ಜಲಪ್ರಳಯವೇ ಸೃಷ್ಟಿಯಾಗಿದೆ. ಇದರಿಂದ ಜನಜೀವನವೇ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರಾಜ್ಯದ ಕೊಡಗು ಜಿಲ್ಲೆಯಲ್ಲೂ ಮಳೆಯು ರೌದ್ರ ನರ್ತನ ಮಾಡ್ತಿದೆ. ಭಾರೀ ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿ, ಆಸ್ತಿಪಾಸ್ತಿ ನಷ್ಟ ಉಂಟಾಗಿದೆ. ಇದರ ನಡುವೆಯೇ ರಾಜ್ಯದ ಎಲ್ಲಾ ಜಲಶಯಗಳೂ ಸಂಪೂರ್ಣ ಭರ್ತಿಯಾಗಿವೆ.

ಭಾರೀ ಮಳೆಯಿಂದಾಗಿ ಒಂದು‌ ಕಡೆ ಜನರು ಪರದಾಡುವಂತಾಗಿದ್ರೆ, ಮತ್ತೊಂದೆಡೆ ಜಲಾಶಯಗಳು ಹೊಡೆದು ಹೋಗಬಹುದಂಬ ಆತಂಕ ಎದುರಾಗಿದೆ. ಜಲಾಶಯಗಳ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಸಣ್ಣಪುಟ್ಟ ಬಿರುಕುಗಳು ಮೂಡಿವೆ. ಇದನ್ನ ಸ್ವತಃ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಬಹಿರಂಗಪಡಿಸಿದ್ದಾರೆ.

ಜಲಾಶಯಗಳಲ್ಲಿನ ಒತ್ತಡ ಕಡಿಮೆ ಮಾಡುವ ಸಲುವಾಗಿ ಈಗಾಗಲೇ ನೀರನ್ನ ಹೊರಬಿಡಲಾಗ್ತಿದೆ. ಅಷ್ಟೇ ಅಲ್ಲಾ, ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಕಾಲುವೆಗಳನ್ನು ದುರಸ್ಥಿ ಮಾಡಿ ಕೆರೆಗಳನ್ನು ತುಂಬಿಸುವಂತೆ ಸರ್ಕಾರ ಆದೇಶಿಸಿದೆ. ಅಣೆಕಟ್ಟೆಗಳ ಬಳಿ ಅಧಿಕಾರಿಗಳ ಗಸ್ತು ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದು ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಇದೇ ವೇಳೆ, ಮಹದಾಯಿ ವಿವಾದ ಕುರಿತಂತೆ ಮೇಲ್ಮನವಿ ಸಲ್ಲಿಸಲು ಸರ್ಕಾರ ನಿರ್ಧಾರ ಮಾಡಿದೆ. ಈ ಸಂಬಂಧ ಈಗಾಗಲೇ ಕಾನೂನು ತಜ್ಞರ ಜೊತೆಯೂ ಸಮಾಲೋಚನೆ ನಡೆಸಲಾಗಿದೆ ಎಂದು ಸಚಿವ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ಒಟ್ಟಾರೆ, ರಾಜ್ಯದ ಅನೇಕ ಕಡೆಯಲ್ಲಿನ ದಾಖಲೆ‌ ಮಳೆಯಿಂದಾಗಿ ಜಲಾಶಯಗಳ ಒಳಹರಿವಿನ ಮಟ್ಟ ಹೆಚ್ಚಿದ್ದು ಬಿರುಕುಗಳು ಮೂಡಿವೆ. ಆದ್ರೆ ದುರಂತ ಸಂಭವಿಸುವ ಮೊದಲೇ ಸರ್ಕಾರ ಯಾವ ಹೆಜ್ಜೆ ಇಡಲಿದೆ ಅನ್ನೋದೇ ಸದ್ಯದ ಪ್ರಶ್ನೆ.

ವರದಿ : ಕಿರಣ.ಆರ್, ಪೊಲಿಟಿಕಲ್ ಬ್ಯುರೋ, ಟಿವಿ5, ಬೆಂಗಳೂರು

Next Story

RELATED STORIES