Top

ಸಂತ್ರಸ್ತರ ನೆರವಿಗೆ ಮುಂದಾದ ನಟರ ಅಭಿಮಾನಿಗಳು

ಸಂತ್ರಸ್ತರ ನೆರವಿಗೆ ಮುಂದಾದ ನಟರ ಅಭಿಮಾನಿಗಳು
X

ಆಕಾಶವೇ ಕಳಚಿ ಬಿದ್ದಂತೆ ವರುಣನ ದಾಳಿ.. ದಾಖಲೆಯ ಮಳೆ.. ಗುಡ್ಡ ಕುಸಿತ, ಪ್ರವಾಹ ಭೀತಿಯಿಂದ ಕೊಡಗು ಜಿಲ್ಲೆ ನಲುಗಿ ಹೋಗಿದೆ.. ಪ್ರವಾಸಿಗರ ಸ್ವರ್ಗ ಅಂತ್ಲೇ ಕರೆಸಿಕೊಳ್ತಿದ್ದ ಕೊಡಗು ಸದ್ಯ ನರಕದಂತೆ ಭಾಸವಾಗ್ತಿದೆ.. ಸಾಕಷ್ಟು ಜನರು ಮಳೆಯ ಆರ್ಭಟಕ್ಕೆ ಸಿಲುಕಿ ಸಂಕಷ್ಟಕ್ಕೆ ಸಿಲುಕಿದ್ದಾರೆ.. ಇದೀಗ ಇಡೀ ಕರ್ನಾಟಕ ಸಂತ್ರಸ್ತರ ನೆರವಿಗೆ ನಿಂತಿದೆ.. ಸ್ಯಾಂಡಲ್​ವುಡ್​ ಸ್ಟಾರ್ಸ್​​ ಸಂಕಷ್ಟಕ್ಕೆ ಸಿಲುಕಿದವರ ಸಹಾಯಕ್ಕೆ ಕೈ ಚಾಚಿದ್ದು, ಅಭಿಮಾನಿಗಳು ಸಹ ಕೈ ಜೋಡಿಸಿದ್ದಾರೆ..

ನಿಲ್ಲದ ಮಳೆ.. ಮುಗಿಯದ ರಗಳೆ, ಮಳೆ ಆರ್ಭಟಕ್ಕೆ ನಲುಗಿದ ಕೊಡಗು

ಮಳೆರಾಯನ ಆರ್ಭಟದಿಂದ ಯೋಧರ ನಾಡಲ್ಲಿ ಎದುರಾಗಿರೋ ಸಮಸ್ಯೆ ಒಂದೆರಡಲ್ಲ. ಈಗಾಗಲೇ ಗೋಡೆ ಕುಸಿತ, ಗುಡ್ಡ ಕುಸಿತದಿಂದ ಕೆಲವರು ಜೀವ ಕಳೆದುಕೊಂಡಿದ್ದಾರೆ. ಮತ್ತೆ ಕೆಲವರು ಪ್ರವಾಹಕ್ಕೆ ಸಿಲುಕಿ ಕಾಣೆಯಾಗಿದ್ದಾರೆ.. ಪದೇ ಪದೇ ಬೀಸುತ್ತಿರೋ ಬಿರುಗಾಳಿ, ಅಬ್ಬರಿಸ್ತಿರೋ ಮಳೆ ಕೊಡಗಿನ ಜನರ ನಿದ್ದೆ ಕೆಡಿಸಿದೆ. ಜೀವವನ್ನ ಕೈಯಲ್ಲಿ ಹಿಡಿದುಕೊಂಡು ಬದುಕುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಡಗು ಮಾತ್ರವಲ್ಲ ಹಾಸನ, ಚಿಕ್ಕಮಗಳೂರು, ಮಂಡ್ಯದಲ್ಲೂ ಮಳೆಯ ಅವಾಂತರ ಮುಂದುವರೆದಿದೆ. ರಕ್ಷಣಾ ಕಾರ್ಯಚರಣೆಗೂ ತೊಡಕ್ಕುಂಟಾಗಿದೆ..

ಕೊಡಗಿನ ಮೇಘಸ್ಫೋಟಕ್ಕೆ ಮರುಗಿದ ಚಂದನವನ

ಕಳೆದ 15 ದಿನಗಳಿಂದ ಕೊಡಗು ಸುತ್ತಾಮುತ್ತಾ ಮಳೆಯಾಗ್ತಿದ್ದು, ನದಿಗಳು ತುಂಬಿ ಹರಿಯುತ್ತಿವೆ.. ಕುಶಾಲನಗರ, ಸೋಮವಾರ ಪೇಟೆ ಜಲಾವೃತವಾಗಿದೆ.. ಮಾಂದಲ್ ಪಟ್ಟಿ, ಮಕ್ಕಂದೂರು, ಹಾಲೇರಿ, ಗಾಳಿಬೀಡು, ಜೋಡಪಾಲ, ಹಟ್ಟಿಹೊಳೆ, ತಂತಿಪಾತ, ಮುಕ್ಕೊಡ್ಲು ಸುತ್ತಾಮುತ್ತಾ ಮಳೆಯ ಅವಾಂತರ ಹೆಚ್ಚಾಗಿದೆ.. ಈಗಾಗಲೇ ರಾಜ್ಯದ ಮೂಲೆಮೂಲೆಯಲ್ಲಿರೋ ಜನ ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ.. ತಮ್ಮ ಕೈಲಾದ ಸಹಾಯ ಮಾಡ್ತಿದ್ದಾರೆ.. ಸ್ಯಾಂಡಲ್​ವುಡ್​ ಕೂಡ ಕೊಡಗು ಪ್ರವಾಹ ಪೀಡಿತರ ರಕ್ಷಣೆಗೆ ಕೈ ಜೋಡಿಸಿದೆ.

ಕಿಚ್ಚ, ದಚ್ಚು, ಶಿವಣ್ಣನ ಕರೆಗೆ ಧಾವಿಸಿದ ಅಭಿಮಾನಿ ಗಣ..!

ನೆಲ, ಜಲ, ಭಾಷೆ ವಿಚಾರ ಬಂದಾಗ ಕನ್ನಡ ಚಿತ್ರರಂಗ ಸದಾ ಬೆಂಬಲಕ್ಕೆ ನಿಲ್ಲುತ್ತೆ.. ಯಾವುದೇ ಹೋರಾಟ, ಸಮಾಜಮುಖಿ ಕಾರ್ಯಕ್ಕೆ ಚಿತ್ರರಂಗದ ಬೆಂಬಲ ಸಿಕ್ಕಿದ್ರೆ, ಆನೆ ಬಲ ಬಂದಂತೆ ಲೆಕ್ಕ.. ಇದೀಗ ಸ್ಯಾಂಡಲ್​ವುಡ್​ ಸ್ಟಾರ್ಸ್ ಕೊಡಗಿನಲ್ಲಿ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆಗೆ ಮುಂದಾಗಿದ್ದಾರೆ.. ಸಂತ್ರಸ್ತರ ನೆರವಿಗೆ ಧಾವಿಸುವಂತೆ ತಮ್ಮ ಅಭಿಮಾನಿಗಳಿಗೂ ಕರೆ ನೀಡಿದ್ದಾರೆ.. ನೆಚ್ಚಿನ ನಟರ ಮನವಿಯಂತೆ ಅಭಿಮಾನಿಗಳು ಈಗಾಗಲೇ ಸಹಾಯಕ್ಕೆ ಮುಂದೆ ಬಂದಿದ್ದಾರೆ..

ಡಾ. ರಾಜ್​ಕುಮಾರ್​, ವಿಷ್ಣುವರ್ಧನ್ ಕಾಲದಿಂದಲೂ ನೊಂದವರ ಸಹಾಯಕ್ಕೆ ಚಿತ್ರರಂಗ ಮಿಡಿಯುತ್ತಾ ಬರ್ತಿದೆ.. ಸದ್ಯ ಡಾ. ಶಿವರಾಜ್​ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್ ಸೇರಿದಂತೆ ಘಟಾನುಘಟಿ ಕಲಾವಿದರು ಮಳೆಯಿಂದ ತೊಂದರೆಗೆ ಸಿಲುಕಿದವರ ರಕ್ಷಣೆಗೆ ಮುಂದಾಗಿದ್ದಾರೆ.. ಶಿವಣ್ಣ ವೀಡಿಯೋ ಸಂದೇಶದ ಮೂಲಕ ನೆರವಿಗೆ ಧಾವಿಸುವಂತೆ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ..

ಕಳೆದ ವರ್ಷದಿಂದ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳದೇ, ತಮ್ಮ ಹುಟ್ಟುಹಬ್ಬಕ್ಕೆ ಬಳಸುವ ಹಣವನ್ನ ಒಳ್ಳೆ ಕಾರ್ಯಕ್ಕೆ ವಿನಿಯೋಗಿಸಿ ಅಂತ ಅಭಿಮಾನಿಗಳಿಗೆ ಸುದೀಪ್ ಹೇಳಿದ್ದಾರೆ.. ಇದೀಗ ಟ್ವೀಟ್ ಮಾಡಿರೋ ಸುದೀಪ್, ಕೊಡಗಿನ ಜನರ ಸಹಾಯಕ್ಕೆ ಧಾವಿಸುವಂತೆ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.. ಅದೇ ನೀವು ನನಗೆ ಕೊಡೋ ದೊಡ್ಡ ಉಡುಗೊರೆ ಅಂದಿದ್ದಾರೆ.. ಸುದೀಪ್ ಮನವಿಗೆ ಸ್ಪಂದಿಸಿರೋ ಅಭಿಮಾನಿಗಳು 8000 ಚಪಾತಿ, ಸೇರಿದಂತೆ ಸಾಕಷ್ಟು ಸಾಮಗ್ರಿಗಳನ್ನ ಕೊಡಗು ಮತ್ತು ಕೇರಳ ಸಂತ್ರಸ್ಥರಿಗೆ ನೀಡಲು ಮುಂದಾಗಿದ್ದಾರೆ..

TV5 ಅಭಿಯಾನಕ್ಕೆ ಸ್ಯಾಂಡಲ್​ವುಡ್​ ಸೆಲೆಬ್ರೆಟಿಗಳು ಸಾಥ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ, ಟ್ವೀಟ್ ಮಾಡಿ ಕೊಡಗಿನಲ್ಲಿ ಸಂಕಷ್ಟಕ್ಕೆ ಸಿಲುಕಿರುವವರ ಬೆಂಬಲಕ್ಕೆ ಬರುವಂತೆ ಮನವಿ ಮಾಡಿದ್ದಾರೆ.. TV5 ವಾಹಿನಿ ಕೂಡ ಕೊಡಗಿನ ಜನರ ಸಹಾಯಕ್ಕೆ ಮುಂದಾಗಿ ಅಭಿಯಾನ ಶುರು ಮಾಡಿದೆ.. ನೀವು ಬಳಸದೇ ಇರುವ ಬೆಡ್ ಶೀಟ್​, ಬಿಸ್ಕತ್​, ಬ್ರೆಡ್, ಹಣ ಯಾವುದೇ ರೀತಿಯಲ್ಲಿ ನೆರವಾಗಲು ಬಯಸುವವರು ನಮ್ಮ ಟಿವಿ 5ನ ಬೆಂಗಳೂರು ಹಾಗೂ ಮೈಸೂರು ಕಚೇರಿಯ ವಿಳಾಸಗಳಿಗೆ ತಲುಪಿಸಬಹುದು.. ನೀವು ತಲುಪಿಸಿದ ವಸ್ತುಗಳನ್ನು ಸಂತ್ರಸ್ತರಿಗೆ ತಲುಪಿಸೋ ಕೆಲಸಕ್ಕೆ TV5 ಮುಂದಾಗಿದೆ..…

TV5 ಅಭಿಯಾನಕ್ಕೆ ಸ್ಯಾಂಡಲ್​ವುಡ್​ ಸೆಲೆಬ್ರೆಟಿಗಳು ಸಾಥ್ ಕೊಟ್ಟಿದ್ದಾರೆ.. ರೂಪಿಕಾ, ನೀತು ಸೇರಿದಂತೆ ಸಾಕಷ್ಟು ಜನ ಬೆಂಬಲ ಸೂಚಿಸಿದ್ದಾರೆ..

ಚಂದನವನದಿಂದ ಅಗತ್ಯ ವಸ್ತುಗಳ ನೆರವು

ಇನ್ನೂ ನಿರ್ದೇಶಕ ಸಂತೋಷ್ ಆನಂದ್​ರಾಮ್​ ಸಹ ಕೊಡಗು ಜನರ ಸಹಾಯಕ್ಕೆ ಮುಂದಾಗಿದ್ದಾರೆ.. ನಟಿ ಹರ್ಷಿಕಾ ಪೂಣಚ್ಚ, ನಟ ಭುವನ್ ಪೊನ್ನಣ್ಣ ಮತ್ತವರ ತಂಡ ಒಂದಷ್ಟು ಅಗತ್ಯ ವಸ್ತುಗಳು ಮತ್ತು ತಿಂಡಿ ತಿನಿಸನ್ನ ಕೊಡಗಿನ ಜನರಿಗೆ ತಲುಪಿಸೋಕೆ ಮುಂದಾಗಿದ್ದಾರೆ..

ಒಟ್ಟಾರೆ ಇಡೀ ಸ್ಯಾಂಡಲ್​ವುಡ್​​ ಕೊಡಗಿನಲ್ಲಿರೋ ನಮ್ಮ ಸಹೋದರ ಸಹೋದರಿಯರ ಸಹಾಯಕ್ಕೆ ಧಾವಿಸಿದೆ.. ನೆಚ್ಚಿನ ನಟರ ಕರೆಗೆ ಅಭಿಮಾನಿಗಳು ಕೈ ಜೋಡಿಸಿದ್ದು, ನೆರವಿನ ಮಹಾಪೂರ ಹರಿದು ಬರ್ತಿದೆ.. ಬಣ್ಣದ ಲೋಕದ ಸಾಥ್​ನಿಂದ ಸಾಮಾಜಿಕ ಕಾರ್ಯಕ್ಕೆ ಆನೆ ಬಲ ಬಂದಂತಾಗಿದೆ.. ಮತ್ತಷ್ಟು ಮಗದಷ್ಟು ಶಕ್ತಿ ಸಿಗೋ ಭರವಸೆ ಮೂಡಿದೆ..

Next Story

RELATED STORIES