Top

ಗುಡ್ಡ ಕುಸಿದು, ಕಾಡಲ್ಲಿ ಸಿಲುಕಿದ್ದ 12 ರೈಲ್ವೆ ಸಿಬ್ಬಂದಿಗಳ ರಕ್ಷಣೆ

ಗುಡ್ಡ ಕುಸಿದು, ಕಾಡಲ್ಲಿ ಸಿಲುಕಿದ್ದ 12 ರೈಲ್ವೆ ಸಿಬ್ಬಂದಿಗಳ ರಕ್ಷಣೆ
X

ಹಾಸನ : ಭಾರಿ ಮಳೆಯಲ್ಲೂ ರೈಲ್ವೆ ಕಾರ್ಯದಲ್ಲಿ ತೊಡಗಿದ್ದ 12 ರೈಲ್ವೆ ಸಿಬ್ಬಂದಿಗಳು ಗುಡ್ಡ ಕುಸಿತಗೊಂಡ ಪರಿಣಾಮ, ಹೊರ ಜಗತ್ತಿನಿಂದ ಸಂಪರ್ಕ ಕಳೆದುಕೊಂಡಿದ್ದರು. ಇಂತಹ ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ.

ಸಕಲೇಶಪುರ ತಾಲ್ಲೂಕು ಎಡಕಮರಿ ಸ್ಥಳಕ್ಕೆ ರೈಲ್ವೆ ಕಾರ್ಯಕ್ಕಾಗಿ ತೆರಳಿದ್ದ 12 ರೈಲ್ವೆ ಸಿಬ್ಬಂದಿಗಳು ಭಾರಿ ಮಳೆಯಿಂದಾಗಿ 40 ರಿಂದ 50 ಕಡೆ ಗುಡ್ಡ ಕುಸಿತಗೊಂಡು ಸಂಪರ್ಕ ಕಡಿದುಕೊಂಡಿದ್ದರು.

ಕಳೆದ ಎರಡು ದಿನಗಳಿಂದ ಅನ್ನ, ಆಹಾರ, ನೀರು ಇಲ್ಲದೇ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಹತ್ತಿರದ ರೈಲ್ವೆ ಸ್ಟೇಶನ್‌ ಮಾಸ್ತರ್‌ಗೆ ಮಾಹಿತಿ ತಿಳಿಸಿದ್ದ ಸಿಬ್ಬಂದಿಗಳು ನೆರವಿಗಾಗಿ ಹಾತೊರೆಯುತ್ತಿದ್ದರು.

ಈ ಮಾಹಿತಿಯನ್ನು ಎಡಕಮರಿ ಬಳಿಯ ರೈಲ್ವೆ ಸ್ಟೇಶನ್ ಮಾಸ್ಟರ್‌ ದಕ್ಷಿಣ ರೈಲ್ವೆ ಕಚೇರಿಗೆ ಮುಟ್ಟಿಸಿದರು. ಬಳಿಕ ರೈಲ್ವೆ ಇಲಾಖೆಯ ಅಧಿಕಾರಿಗಳು ಹಾಸನ ಡಿಸಿಗೆ ಮಾಹಿತಿ ಮುಟ್ಟಿಸಿ ಸಿಬ್ಬಂದಿಗಳ ರಕ್ಷಣೆಗೆ ನೆರವಾಗುವಂತೆ ಕೋರಲಾಗಿತ್ತು.

ರೈಲ್ವೆ ಇಲಾಖೆಯ ಮಾಹಿತಿಯ ಮೇರೆಗೆ ಹಾಸನ ಜಿಲ್ಲಾಡಳಿತ ಮೂರು ತಂಡಗಳನ್ನು ರಚಿಸಿ, 12 ರೈಲ್ವೆ ಸಿಬ್ಬಂದಿಗಳ ರಕ್ಷಣಾ ಕಾರ್ಯಕ್ಕೆ ತೆರಳಿತು. ಸುಮಾರು 10ರಿಂದ 12 ಕಿಲೋಮೀಟರ್ ಸಾಗಿದ ತಂಡ, ಸಿಬ್ಬಂದಿಗಳನ್ನು ರಕ್ಷಿಸಿದೆ.

ಕಡಿದಾದ ದಾರಿ, ದುರ್ಗಮ ಗುಡ್ಡಗಳ ಮೂಲಕವೇ ನಡೆದುಕೊಂಡು ಬಂದ ರಕ್ಷಣ ತಂಡ, ಸುರಕ್ಷಿತವಾಗಿ 12 ರೈಲ್ವೆ ಸಿಬ್ಬಂದಿಗಳನ್ನು ರಕ್ಷಿಸಿ ಕರೆತರುವಲ್ಲಿ ಸಫಲವಾಗಿದೆ.

ಈ ಬಗ್ಗೆ ಟಿವಿ5 ಕನ್ನಡದ ಜೊತೆಗೆ ತಮ್ಮ ಮಾಹಿತಿ ಹಂಚಿಕೊಂಡ ರೈಲ್ವೆ ಸಿಬ್ಬಂದಿ ನಾವು ಬದುಕಿ ಬರುತ್ತೇವೆ ಎಂಬ ನಂಬಿಕೆ ಇರಲಿಲ್ಲ. ದೇವರ ದಯೆಯಿಂದ ಬದುಕಿ ಬಂದಿದ್ದೇವೆ. ಟಿವಿ5 ಕನ್ನಡ ಸಕಲೇಶ್ವರ ಎಸಿ ಲಕ್ಷ್ಮೀಕಾಂತ ರೆಡ್ಡಿ ಜೊತೆಗೆ ಸಂಪರ್ಕ ಸಾಧಿಸಿ, ನಮ್ಮನ್ನು ರಕ್ಷಿಸಲು ಸಹಾಯ ಮಾಡಿತು ಎಂದಿದ್ದಾರೆ.

ಒಟ್ಟಾರೆ ಮಳೆಯಿಂದ ಗುಡ್ಡ ಕುಸಿದು, ಸಂಪರ್ಕ ಕಳೆದುಕೊಂಡು ಕಳೆದ 2 ಮೂರು ದಿನಗಳಿಂದ ಆಹಾರವಿಲ್ಲದೇ ತೊಂದರೆಗೆ ಸಿಲುಕಿದ್ದ 12 ರೈಲ್ವೆ ಸಿಬ್ಬಂದಿಗಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಈ ಮೂಲಕ ನಮ್ಮ ಹಾಸನದ ಪ್ರತಿನಿಧಿ, ಟಿವಿ5 ಕನ್ನಡದ ಫಲಶೃತಿಗೆ ಯಶಸ್ಸು ಸಿಕ್ಕಿ, ಪ್ರಶಂಸೆಗೆ ಪಾತ್ರವಾಗುವಂತಾಗಿದೆ.

ವರದಿ : ಪ್ರಕಾಶ್ ಬೆಳವಾಡಿ, ಟಿವಿ5 ಕನ್ನಡ ಹಾಸನ

Next Story

RELATED STORIES