ವಿಷಕಂಠನ ಸನ್ನಧಿಯಲ್ಲಿ ಜಲಕಂಟಕ.!

ಮೈಸೂರು : ನೆರೆಯ ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಮೈಸೂರು ಕೂಡ ನಲುಗಿ ಹೋಗಿದೆ. ಮೈಸೂರು ಜಿಲ್ಲೆಯ ನಾಲ್ಕೈದು ತಾಲೂಕುಗಳಲ್ಲಿ ಪ್ರವಾಹ ಉಂಟಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ಮಧ್ಯೆ ದೇವರಿಗೂ ಜಲದಿಗ್ಭಂದನ ಉಂಟಾಗಿದ್ದು, ಸಂತ್ರಸ್ತರ ನೆರವಿಗೆ ಮೈಸೂರು ಜಿಲ್ಲಾಢಳಿತ ಗಂಜಿ ಕೇಂದ್ರ ತೆರದಿದೆ.
ಎತ್ತ ನೋಡಿದ್ರು ನೀರೋ ನೀರು. ನದಿಯಂತಾದ ರಸ್ತೆಗಳು. ತಮ್ಮನ್ನ ತಾವು ಕಾಪಾಡಿಕೊಳ್ಳೊದಕ್ಕೆ ತೆಪ್ಪದಲ್ಲಿ ಸಾಗುತ್ತಿರೋ ದೃಶ್ಯಗಳು. ಈ ಇದೆಲ್ಲಾ ದೃಶ್ಯಗಳು ಕಂಡು ಮೈಸೂರು ಜಿಲ್ಲೆಯಲ್ಲಿ. ಹೌದು, ಕೆಲ ದಿನಗಳಿಂದ ಕೇರಳದಲ್ಲಿ ಎಡಬಿಡದೆ ಸುರಿಯುತ್ತಿರುವ ಮಹಾಮಳೆಗೆ ಮೈಸೂರು ಜಿಲ್ಲೆಯ ಹಲವು ಗ್ರಾಮಗಳು ನಲುಗಿ ಹೋಗಿವೆ.
ಇಂದು ಸಹ ಕೇರಳದ ವೈನಾಡಿನಲ್ಲಿ ಭಾರೀ ಮಳೆ ಬೀಳುತ್ತಿರುವ ಹಿನ್ನಲೆಯಲ್ಲಿ ಹೆಚ್.ಡಿ,ಕೋಟೆಯ ಕಬಿನಿ ಜಲಾಶಯ ತುಂಬಿ ತುಳುಕುತ್ತಿದ್ದು, ಭಾರೀ ಪ್ರಮಾಣದ ನೀರನ್ನ ನದಿಗೆ ಬಿಡಲಾಗ್ತಿದೆ. ಇದರಿಂದ ಪ್ರವಾಹ ಉಂಟಾಗಿದ್ದು, ಸೇತುವೆಗಳ ಮೇಲೆಯೆ ನದಿಯ ನೀರು ಉಕ್ಕಿ ಹರಿಯುತ್ತಿದೆ..
ಕಬಿನಿಯಿಂದ 80 ಸಾವಿರ ಕ್ಯೂಸೆಕ್ಸ್ ನೀರನ್ನ ನದಿಗೆ ಬಿಟ್ಟ ಕಾರಣ ನಂಜನಗೂಡು, ಹೆಚ್,ಡಿ,ಕೋಟೆ ಭಾಗದಲ್ಲಿ ಪ್ರವಾಹ ಉಂಟಾಗಿದೆ. ಹಲವು ಗ್ರಾಮಗಳು ಮುಳುಗಡೆಯಾಗಿದ್ದು, ಹೆಚ್.ಡಿ.ಕೋಟೆಯ ಗಡಿಭಾಗದ ಗ್ರಾಮಗಳಾದ ಮಚ್ಚೂರು, ಡಿ.ಬಿ.ಕುಪ್ಪೆ, ವಡಕನಮಾಳ, ಆನೆಮಾಳ ಸೇರಿ ಅಕ್ಕಪಕ್ಕದ ಗ್ರಾಮಗಳ 35ಕ್ಕೂ ಹೆಚ್ಚು ಜನರನ್ನ ತೆಪ್ಪದ ಮೂಲಕ ಸುರಕ್ಷಿತವಾದ ಸ್ಥಳಕ್ಕೆ ಬಿಡಲಾಗಿದೆ. ಇವರಿಗಾಗಿ ತಾಲೂಕು ಆಡಳಿತದಿಂದ ಗಂಜಿ ಕೇಂದ್ರವನ್ನು ತೆರೆಯಲಾಗಿದೆ.
ಇತ್ತ ನಂಜನಗೂಡಿನಲ್ಲಿ ಸಹ ಮನೆಗಳಿಗೆ ನೀರು ನುಗ್ಗಿದ್ದು, ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ. ಈ ಮಧ್ಯೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ನಂಜನಗೂಡಿಗೆ ಭೇಟಿ ಕೊಟ್ಟು, ಸ್ಥಳೀಯ ನಿವಾಸಿಗಳಿಗೆ ಸಂಜೆ ವೇಳೆಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ಕೊಟ್ಟಿದ್ದಾರೆ.
ಅಲ್ಲದೆ, ಕೆ.ಆರ್.ನಗರದ ಕಪ್ಪಡಿಯ ಸಿದ್ದಪಾಜಿ-ರಾಚಪಾಜಿ ದೇಗುಲಕ್ಕೆ ಕಾವೇರಿ ನದಿ ನೀರು ನುಗ್ಗಿದ್ದು ಭಕ್ತರು ದೇಗುಲಕ್ಕೆ ಆಗಮಿಸಲು ಪರದಾಡುತ್ತಿದ್ದಾರೆ. ಈ ಮಧ್ಯೆ ಮೈಸೂರು ಜಿಲ್ಲಾಢಳಿತ ಮಹಾನಗರ ಪಾಲಿಕೆಯ ಜೊತೆಗೂಡಿ, ಕೊಡಗಿನ ನೆರೆ ಸಂತ್ರಸ್ತರಿಗೆ ನೆರವಾಗಲು ಮುಂದಾಗಿದೆ.
ಇಂದಿನಿಂದ 24*7 ಕೇಂದ್ರ ಆರಂಭಿಸಿದ್ದು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಕೊಡಗಿನ ನೆರೆ ಸಂತ್ರಸ್ಥರಿಗೆ ಆಹಾರ ಪದಾರ್ಥ ಸೇರಿ ಬಟ್ಟೆಗಳನ್ನ ನೀಡಬಹುದಾಗಿದೆ. ಇದಕ್ಕಾಗಿ ಮೈಸೂರಿನ ಟೌನ್ ಹಾಲ್ನಲ್ಲಿ ಕೇಂದ್ರ ತೆರೆದಿದ್ದು, ಇದನ್ನ ಪಾಲಿಕೆ ವಾಹನದ ಮೂಲಕವೇ ಕೊಡಗಿಗೆ ರವಾನೆ ಮಾಡುವ ವ್ಯವಸ್ಥೆ ಕೂಡ ಸಿದ್ದಗೊಂಡಿದ್ದು, ನಾಗರೀಕರು ಇವರ ಮೂಲಕ ನೆರವು ನೀಡಬಹುದಾಗಿದೆ.
ಒಟ್ಟಾರೆ, ನೆರೆ ರಾಜ್ಯದ ವರುಣನ ಏಫೆಕ್ಟ್ ಮೈಸೂರು ಜಿಲ್ಲೆಯಲ್ಲಿ ಭಾರೀ ಅನಾಹುತವನ್ನುಂಟು ಮಾಡಿದೆ. ಆದ್ರೆ, ಮಳೆರಾಯ ಯಾವಾಗ ಬಿಡುವು ಕೊಡ್ತಾನೆ.? ನಮ್ಮ ಈ ಸಮಸ್ಯೆ ಯಾವಾಗ ನಿವಾರಣೆಯಾಗತ್ತೆ ಎಂದು ನೆರೆಯಿಂದ ನೊಂದವರು ಮಳೆರಾಯನ ಮೋರೆ ಹೋಗಿದ್ದಾರೆ.
ವರದಿ : ಸುರೇಶ್, ಟಿವಿ5 ಮೈಸೂರು