Top

ಭಾರತರತ್ನ 'ಅಟಲ್ ಬಿಹಾರಿ ವಾಜಪೇಯಿ' ಪರಿಚಯ

ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಪರಿಚಯ
X

ಈ ದೇಶ ಕಂಡ ಸರಳ, ಸಜ್ಜನಿಕೆಯ ರಾಜಕಾರಣಿ... ಮಾಜಿ ಪ್ರಧಾನಿ ದಿವಂಗತ ಅಟಲ್‌ ಬಿಹಾರಿ ವಾಜಪೇಯಿ. ಇಂತಹ ರಾಜಕಾರಣಿ, ಇಂದು ನಮ್ಮನ್ನು ಅಗಲಿದ್ದಾರೆ.

ನಮ್ಮನ್ನು ಅಗಲಿರುವ ಭಾರತರತ್ನ, ಅಟಲ್ ಬಿಹಾರಿ ವಾಜಪೇಯಿಯ ಜೀವನ, ಬದುಕು, ರಾಜಕೀಯ ಚದುರಂಗದಾಟದ ಏಳು ಬೀಳುಗಳನ್ನು ನೆನಪು ಮಾಡಿಕೊಳ್ಳಲೇ ಬೇಕು.

ಸುಮಾರು 50 ವರ್ಷಗಳ ಕಾಲ ಸ್ವಚ್ಛ ರಾಜಕೀಯ ಬದುಕು ಕಂಡ ಕವಿ ಹೃದಯದ ಶ್ರೇಷ್ಠ ವಾಗ್ಮಿ. ಚಿಂತಕ, ಮಾನವತಾವಾದಿ ನಮ್ಮನ್ನು ಅಗಲಿದ್ದರೂ, ಅವರ ಸಾಧನೆಯ ಹಾದಿಯ ಬದುಕು, ಮರೆಯುವಂತಿಲ್ಲ.

ದೇಶದ ಪ್ರಧಾನಿಯಾಗಿ ಎರಡು ಬಾರಿ ಕಾರ್ಯ ನಿರ್ವಹಿಸಿದ ಮೊದಲ ಅವಿವಾಹಿತರಾಗೇ ಉಳಿದಿದ್ದರು. ಇಂತಹ ರಾಜಕಾರಣಿ, 2005ರಲ್ಲಿ ಸಕ್ರಿಯ ರಾಜಕೀಯದಿಂದ ದೂರ ಉಳಿದಿದ್ದು ಮಾತ್ರ ವಿಪರ್ಯಾಸವೇ ಸರಿ.

ಅಂದಹಾಗೇ, ಪ್ರೋಖ್ರಾನ್ ಅಣು ಪರೀಕ್ಷೆ, ಪಾಕಿಸ್ತಾನದೊಂದಿಗೆ ಬಾಂಧವ್ಯ ಬೆಸೆಯುವ ಸಾರಿಗೆ ವ್ಯವಸ್ಥೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಸುವರ್ಣ ಚತುಷ್ಪಥ ಯೋಜನೆ, ಸರ್ವ ಶಿಕ್ಷಾ ಅಭಿಯಾನ ಮುಂತಾದವು ವಾಜಪೇಯಿ ದೂರದೃಷ್ಟಿತ್ವದ ಫಲವಾಗಿದೆ.

ಅಟಲ್ ಜೀ ಅವರ ಜೀನವನದ ಹಿನ್ನೋಟ..

 1. 1924ರಲ್ಲಿ ಕೃಷ್ಣದೇವಿ ಹಾಗೂ ಕೃಷ್ಣ ಬಿಹಾರಿ ವಾಜಪೇಯಿ ಅವರ ಮಗನಾಗಿ ಮಧ್ಯ ಪ್ರದೇಶದ ಗ್ವಾಲಿಯರ್ ಹತ್ತಿರದ 'ಶಿಂದೆ ಕಿ ಚವ್ವಾಣಿ'ಎನ್ನುವ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ಜನಿಸಿದರು.
 2. ಬಳಿಕ 1939ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರ್ಪಡೆಗೊಂಡು, ಆರ್‌ಎಸ್‌ಎಸ್‌ನ ಪ್ರಭಾವಕ್ಕೆ ಒಳಗಾದರು.
 3. 1942ರಲ್ಲಿ ಕ್ವಿಟ್ ಇಂಡಿಯ (ಬ್ರಿಟಿಷರೇ ಭಾರತ ಬಿಟ್ಟು ತೊಲಗಿ) ಚಳವಳಿಯಲ್ಲಿ ಭಾಗವಹಿಸಿದರು. ಈ ಮೂಲಕ ಸ್ವಾತಂತ್ರ್ಯ ಚಳುವಳಿಯಲ್ಲಿಯೂ ಧುಮುಕಿದರು.
 4. ಇನ್ನೂ 1951ರಲ್ಲಿ ಭಾರತೀಯ ಜನ ಸಂಘಕ್ಕೆ ಸೇರಿದ ಅಟಲ್‌ ಜೀ, ರಾಜಕೀಯ ಚದುರಂಗದಾಟಕ್ಕೆ ಧುಮುಕಿದರು.
 5. 1953ರಲ್ಲಿ ಇದೇ ಸಂದರ್ಭದಲ್ಲಿ ಭಾರತೀಯ ಜನ ಸಂಘದ ಮೂಲಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪರಿಚಯ. ಹೀಗಾಗಿ ರಾಜಕೀಯ ರಂಗದ ಒಲವು, ಏರಿಳಿತಗಳ ಪರಿಚಯ ಅಟಲ್ ಬಿಹಾರಿ ವಾಜಪೇಯಿಗೆ ಆಯಿತು.
 6. ಈ ರಾಜಕೀಯ ರಂಗದ ಅನುಭವ, ರಾಜಕೀಯ ವ್ಯಕ್ತಿಗಳ ಪರಿಚಯವೇ, 1957ರಲ್ಲಿ ಮೊದಲ ಬಾರಿಗೆ ಲೋಕಸಭೆಯ ಸದಸ್ಯರಾಗಿ ಆಯ್ಕೆಯಾಗುವಂತೆ ಮಾಡಿತು.
 7. ಇನ್ನೂ 1975ರಲ್ಲಿ ರಾಜಕೀಯ ಅಸ್ಥಿರತೆ ದೇಶದಲ್ಲಿ ಕಾಣಿಸಿಕೊಂಡಿತು. ಈ ಮೂಲಕ ತುರ್ತು ಪರಿಸ್ಥಿತಿ ದೇಶದಲ್ಲಿ ಘೋಷಿಸಲ್ಪಟ್ಟಿತು. ಈ ಸಂದರ್ಭದಲ್ಲಿ ಇದನ್ನು ವಿರೋಧಿಸಿದ ಪ್ರತಿಭಟಿಸಿದ ಸಂದರ್ಭದಲ್ಲಿ ಜೈಲುಪಾಲಾದರು.
 8. 1977ರಲ್ಲಿ ಜನತಾ ಸಂಘದ ಮೊದಲ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ಆಯ್ಕೆಯಾದ ಅಟಲ್ ಜೀ, ಅದೇ ವರ್ಷ ಅಮೆರಿಕದ ಅಸೆಂಬ್ಲಿ ಉದ್ದೇಶಿಸಿ ಮಾತನಾಡಿ, ಇಡೀ ವಿಶ್ವವೇ ಬೆರಗುಗೊಳಿಸುವಂತೆ ಮಾಡಿದರು. ಅಟಲ್‌ ಬಿಹಾರಿ ವಾಜಪೇಯಿ ಮೇಲೆ ಎಲ್ಲರಿಗೂ ಅಭಿಮಾನ ಮೂಡುವಂತೆ ಮಾಡಿದ್ರು.
 9. ರಾಜಕೀಯ ನಾಟಕರಂಗದಲ್ಲಿ, ಏಳುಬೀಳುಗಳು ಸಹಜ. ಹೀಗಾಗಿ 1979 ಮುರಾರ್ಜಿ ದೇಸಾಯಿ ಅವರ ಸರ್ಕಾರ ಪತನಗೊಂಡಿತು. ಇದೇ ಸಂದರ್ಭದಲ್ಲಿ ಜನತಾ ಪಾರ್ಟಿವಿಸರ್ಜನೆಗೊಂಡು, ಪಾರ್ಟಿಯಿಂದ ಹೊರ ನಡೆಯುವಂತ ಪರಿಸ್ಥಿತಿ ನಿರ್ಮಾಣಗೊಂಡಿತು.
 10. ಇಂತಹ ಸಂದರ್ಭದಲ್ಲಿ 1980ರಲ್ಲಿ ಭಾರತೀಯ ಜನತಾ ಪಾರ್ಟಿ(ಬಿಜೆಪಿ) ಸ್ಥಾಪನೆಯಾಯಿತು. ಇಂತಹ ಪಕ್ಷದ ಮೊದಲ ರಾಷ್ಟ್ರೀಯ ಅಧ್ಯಕ್ಷರಾಗಿ ವಾಜಪೇಯಿ ಆಯ್ಕೆಯಾದರು.
 11. ಅಟಲ್ ಬಿಹಾರಿ ವಾಜಪೇಯಿ ಅವರ ಸಾಮಾಜಿಕ ಸೇವೆ, ಜನಪ್ರತಿನಿಧಿಯಾಗಿ ಮಾಡಿದ ಕಾರ್ಯಕ್ಕೆ 1992ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಯ ಗರಿಮೆ ಸಂದಿತು. ಅಲ್ಲದೇ 1993 ಕಾನ್ಪುರ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು.
 12. ರಾಜಕೀಯ ಚದುರಂಗದಾಟದಲ್ಲಿ 1996ರಲ್ಲಿ ದೇಶದ ಪ್ರಧಾನಿಯಾಗಿ ಹುದ್ದೆ ಅಲಂಕರಿಸಿದರು. ಆದರೇ ಕೇವಲ 13 ದಿನಗಳ ಕಾಲ ಮಾತ್ರ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು.
 13. ಆನಂತ್ರ, 1998ರಲ್ಲಿ ಎರಡನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾದ ಅಟಲ್‌ ಬಿಹಾರಿ ವಾಜಪಾಯಿ, ಪೂರ್ಣ ಅವಧಿ ಮುಗಿಸಿದ ಕಾಂಗ್ರೆಸ್ಸೇತರ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
 14. 1999ರಲ್ಲಿ 13ನೇ ಲೋಕಸಭೆಗೆ ಆಯ್ಕೆಯಾದರು. 2004ರ ತನಕ ಪ್ರಧಾನಿಯಾಗಿ ಕಾರ್ಯ ನಿರ್ವಹಣೆ ನಡೆಸಿದರು.
 15. 2004ರಲ್ಲಿ ಮತ್ತೆ 14ನೇ ಲೋಕಸಭೆಗೆ 10ನೇ ಬಾರಿ ಸಂಸತ್ ಸದಸ್ಯರಾಗಿ ಆಯ್ಕೆಯಾದರು.
 16. ಹೀಗೆ ರಾಜಕೀಯ ಬದುಕಿನ ಜೀವನದ ಆಟದಲ್ಲಿ, ಸುಧೀರ್ಘ ಪಯಣ ನಡೆಸಿದ ಅಟಲ್‌ ಜೀ, 2005ರಲ್ಲಿ ಸಕ್ರಿಯ ರಾಜಕಾರಣದಿಂದ ನಿವೃತ್ತರಾದರು.
 17. ಕೊನೆಗೆ ರಾಜಕೀಯದಿಂದ ಬಹು ದೂರ ಉಳಿದ ಅಟಲ್‌ ಜೀ, ಮತ್ತೆ ರಾಜಕೀಯ ರಂಗದ ತೆರೆ ಮರೆಯಲ್ಲೂ ಮುಖ ತೋರಲಿಲ್ಲ.

ಅಟಲ್ ಬಿಹಾರಿ ವಾಜಪೇಯಿ, ಕಳೆದ 9 ದಿನಗಳಿಂದ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ತುರ್ತು ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಸರಳ, ಸಜ್ಜನಿಕೆಯ ರಾಜಕಾರಣಿ, ನಮ್ಮಿಂದ ದೂರಾಗಿದ್ದು, ಇನ್ನೂ ನೆನಪು ಮಾತ್ರ..

Next Story

RELATED STORIES