Top

ವಾಜಪಾಯಿ ನಿಧನಕ್ಕೆ ಗಣ್ಯರ ಕಂಬನಿ

ವಾಜಪಾಯಿ ನಿಧನಕ್ಕೆ ಗಣ್ಯರ ಕಂಬನಿ
X

93 ವರ್ಷದ ಅಟಲ್ ಬಿಹಾರಿ ವಾಜಪೇಯಿ, ಜೂನ್ 11ರಂದು ಕಿಡ್ನಿ ಸಮಸ್ಯೆ, ಹೃದಯ ಸಂಬಂಧಿ ಖಾಯಿಲೆ, ಮೂತ್ರಪಿಂಡ ಸಮಸ್ಯೆ ಕಾಣಿಸಿಕೊಂಡಿದ್ದಕ್ಕಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಅಜಾತಶತ್ರುವಿನ ಸಾವಿಗೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಸಿಎಂ ಕುಮಾರಸ್ವಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ರು. ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ಅಟಲ್ ರಂಥ ಮಹಾನ್ ಮುತ್ಸದ್ಧಿಯನ್ನು ದೇಶ ಕಳೆದುಕೊಂಡಿದೆ. ರಾಜಧರ್ಮ‌ ಪಾಲಿಸಿದ್ದ, ಅತ್ಯದ್ಭುತ ಸಂಸದೀಯ ಪಟುವನ್ನು ಕಳೆದುಕೊಂಡಿರುವುದು ನಮಗೆ ತೀವ್ರ ದುಖ: ತಂದಿದೆ ಎಂದು ಸಂತಾಪ ಸೂಚಿಸಿದರು.

ಭಾರತ ಪಾಕಿಸ್ತಾನ ಮಧ್ಯೆ ಭಾತೃತ್ವ ತರಲು ವಾಜಪೇಯಿ ಅವರು ಶ್ರಮಿಸಿದ್ದರು. ವಾಜಪೇಯಿಯವರ ಅಗಲಿಕೆ ನೋವು ತಂದಿದೆ. ಮಾಜಿ ಪ್ರಧಾನಿ ವಾಜಪೇಯಿಯವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು. ಇದೇ ವೇಳೆ ನಾಳೆ ವಾಜಪೇಯಿವರ ಅಂತಿಮ ದರ್ಶನಕ್ಕೆ ದೆಹಲಿಗೆ ಹೊರಡುತ್ತೇನೆ ಎಂದು ಸ್ಪಷ್ಟ ಪಡಿಸಿದರು. ದೇಶಾದ್ಯಂತ ಶೋಕಾಚರಣೆಯ ಪ್ರಕಾರ ರಾಜ್ಯದಲ್ಲೂ ಶೋಕಾಚರಣೆ ಮಾಡಲಾಗುವುದು. ಕೇಂದ್ರ ನಿರ್ದೇಶಿಸಿದರೆ ರಾಜ್ಯದಲ್ಲಿ ರಜೆ ಘೋಷಿಸಲಾಗುತ್ತದೆ ಎಂದು ಹೇಳಿದ್ರು .

ಈ ಬಗ್ಗೆ ಜೆ.ಪಿ.ಭವನದಲ್ಲಿ ಮಾತನಾಡಿದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು, ವಾಜಪೇಯಿ ಅವರ ನಿಧನ ವಾರ್ತೆ ಕೇಳಿ ಮನಸ್ಸಿಗೆ ಆಘಾತವಾಗಿದೆ. ನಾಲ್ಕು ದಶಕಗಳ ಕಾಲ ವಿದೇಶಾಂಗ ಮಂತ್ರಿ, ಪ್ರಧಾನ ಮಂತ್ರಿಯಾಗಿ ಅಪಾರವಾದ ಸೇವೆಯನ್ನು ಮಾಡಿದ್ದಾರೆ. ನನ್ನ ಭಾವನೆಯಲ್ಲಿ ಅವರೊಬ್ಬ ಶ್ರೇಷ್ಠ ನಾಯಕ ಎಂದು ಸಂತಾಪ ಸೂಚಿಸಿದ್ದಾರೆ.

ಇನ್ನು ವಾಜಪೇಯಿ ಅಗಲಿಕೆಗೆ ಕಂಬನಿ ಮಿಡಿದ ಕೆ.ಎಸ್.ಈಶ್ವರಪ್ಪ, ವಾಜಪೇಯಿ ಕಳೆದುಕೊಂಡಿದ್ದು ನಮ್ಮ ತಂದೆಯನ್ನೇ ಕಳೆದುಕೊಂಡಷ್ಟು ದುಃಖವಾಗಿದೆ. ಒಬ್ಬ ನಾಯಕ ಎಷ್ಟು ಸರಳವಾಗಿರಬೇಕು. ಅದನ್ನ ನಾನೂ ಅಟಲ್ ಜೀ ಅವರಿಂದ ಕಲಿತಿದ್ದೇನೆ. ಇಡೀ ದೇಶದಲ್ಲಿ ಎರಡನೇ ಸ್ಥಾನ ಗೆದ್ದಿದ್ದಾಗಲೂ ಎದೆಗುಂದದೇ ಪಕ್ಷ ಕಟ್ಟಿದ್ದಾರೆ‌. ದೇಶ ಮೊದಲು ಪಕ್ಷ, ವ್ಯಕ್ತಿ ನಂತರ ಎಂಬ ಧ್ಯೇಯ ಇಟ್ಟುಕೊಂಡಿದ್ದರು. ಅದನ್ನು ಸಾಮಾನ್ಯ ಕಾರ್ಯಕರ್ತರಿಗೂ ಹೇಳಿಕೊಟ್ಟಿದ್ದಾರೆ‌. ವಿರೋಧಿಗಳೂ ಮೆಚ್ಚುವಂತೆ ಬದುಕಿದ್ದು ವಾಜಪೇಯಿ ಅವರ ವ್ಯಕ್ತಿತ್ವ ಎಂದು ಹೇಳಿದ್ದಾರೆ.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅಜಾತಶತ್ರುವಿನ ಸಾವಿಗೆ ಸಂತಾಪ ಸೂಚಿಸಿದ್ದು, ಸಹೃದಯಿ ರಾಜಕಾರಣಿಯನ್ನ ಕಳೆದುಕೊಂಡು ಅನಾಥರಾಗಿದ್ದೇವೆ . ಇದು ಬಿಜೆಪಿಗೆ ತುಂಬಲಾರದ ನಷ್ಟ. ನನ್ನಂಥವರಿಗೆ ಅವರ ಜೊತೆ ಕೆಲಸ ಮಾಡಿದ್ದು ಪುಣ್ಯ. ಅಟಲ್ ಬಿಹಾರಿ ವಾಜಪೇಯಿಯವರು ಯಾವುದೇ ಸೌಲಭ್ಯ ಇಲ್ಲದ ಕಾಲದಲ್ಲಿ ಹೋರಾಟ ಮಾಡಿ ಪಕ್ಷವನ್ನ ಬೆಳೆಸಿದ್ದಾರೆ. ಕರ್ನಾಟಕದಲ್ಲಿ ಬೆಜೆಪಿ ಪಕ್ಷ ಬೆಳೆದಿದೆ ಅಂದರೆ ವಾಜುಪೇಯಿ ಅವರ ಶ್ರಮ ಬಹಳಷ್ಟಿದೆ ಎಂದರು.

Next Story

RELATED STORIES