Top

ಕ್ರಿಕೆಟ್ ದಂತಕತೆ ಅಜಿತ್ ವಾಡೇಕರ್ ಇನ್ನಿಲ್ಲ

ಕ್ರಿಕೆಟ್ ದಂತಕತೆ ಅಜಿತ್ ವಾಡೇಕರ್ ಇನ್ನಿಲ್ಲ
X

ಮುಂಬೈ: ನಾಯಕ, ಮ್ಯಾನೇಜರ್ ಆಗಿ ಭಾರತ ತಂಡವನ್ನು ಗೆಲುವಿನ ಹಳಿಗೆ ತಂದು ನಿಲ್ಲಿಸಿದ ಮಾಜಿ ಕ್ರಿಕೆಟಿಗ ಅಜಿತ್ ವಾಡೇಕರ್ (77) ವಯೋಸಹಜ ಅಸ್ವಸ್ಥತೆಯಿಂದ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

1966ರಲ್ಲಿ ವಿಂಡೀಸ್ ವಿರುದ್ಧ ಆಡುವ ಮೂಲಕವೇ ಟೆಸ್ಟ್ ಕ್ರಿಕೆಟ್​ಗೆ ಪಾದರ್ಪಣೆ ಮಾಡಿದ ಅಜಿತ್ ವಾಡೇಕರ್, 1971ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ತಂಡವನ್ನು ಮುನ್ನಡೆಸಿದರು. ವಿಶ್ವದ ಕ್ರಿಕೆಟ್​ ದೈತ್ಯರು ಎಂದೇ ಹೆಸರಾಗಿದ್ದ ವಿಂಡೀಸ್ ತಂಡವನ್ನು ಮೊದಲ ಬಾರಿ ಅದರದ್ದೇ ನೆಲದಲ್ಲಿ ಸೋಲಿಸಿದ ಕೀರ್ತಿ ವಾಡೇಕರ್ ಅವರಿಗೆ ಸಲ್ಲುತ್ತದೆ.

1990ರಲ್ಲಿ ಮೊಹಮದ್ ಅಜರುದ್ದೀನ್ ನಾಯಕತ್ವದ ಭಾರತ ತಂಡಕ್ಕೆ ಮ್ಯಾನೇಜರ್ ಆಗಿದ್ದ ವಾಡೇಕರ್ ಮೈದಾನದ ಹೊರಗೆ ನಿಂತು ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದರು. ಇವರ ಕಾಲದಲ್ಲಿ ಭಾರತ ಹಲವು ಗೆಲುವಿನ ದಾಖಲೆಗಳನ್ನು ಬರೆಯಿತು.

Ajit Wadekar, India captain

ಎಡಗೈ ಬ್ಯಾಟ್ಸ್​ ಮನ್ ಆಗಿದ್ದ ವಾಡೇಕರ್ 37 ಟೆಸ್ಟ್ ಪಂದ್ಯಗಳನ್ನು ಆಡಿ 31.07ರ ಸರಾರಿಯಲ್ಲಿ 2,113 ರನ್‍ ಗಳಿಸಿದ್ದಾರೆ. ಇದರಲ್ಲಿ 1 ಶತಕ ಹಾಗೂ 14 ಅರ್ಧಶತಕ ಸೇರಿವೆ. 2 ಏಕದಿನ ಪಂದ್ಯಗಳನ್ನು ಆಡಿದ್ದು, 1 ಅರ್ಧಶತಕ ಸೇರಿದಂತೆ 73 ರನ್ ಗಳಿಸಿದ್ದಾರೆ. 1974ರಲ್ಲಿ ಇಂಗ್ಲೆಂಡ್ ವಿರುದ್ಧ ಬರ್ಮಿಂಗ್​ ಹ್ಯಾಮ್​ನಲ್ಲಿ ಕೊನೆಯ ಬಾರಿಗೆ ಟೆಸ್ಟ್ ಆಡಿದರು.

ಪ್ರಧಾನಿ ನರೇಂದ್ರ ಮೋದಿ, ಭಾರತ ತಂಡದ ಮಾಜಿ ಕ್ರಿಕೆಟಿಗರು ಅಜಿತ್ ವಾಡೇಕರ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.

19070ರಲ್ಲಿ ಅರ್ಜುನ ಪ್ರಶಸ್ತಿ, 1972ರಲ್ಲಿ ಪದ್ಮಶ್ರೀ ಹಾಗೂ ಜೀವಮಾನದ ಸಾಧನೆಗಾಗಿ ಬಿಸಿಸಿಐನ ಸಿ.ಕೆ. ನಾಯ್ಡು ಪ್ರಶಸ್ತಿಗಳಿಗೆ ಅಜಿತ್ ವಾಡೇಕರ್ ಭಾಜನರಾಗಿದ್ದಾರೆ.

Next Story

RELATED STORIES