Top

ಕನ್ನಡದಲ್ಲೂ ಬ್ಯಾಂಕಿಂಗ್‌ ಪರೀಕ್ಷೆ ನಡೆಸಿ : ಕೇಂದ್ರಕ್ಕೆ ಡಿಸಿಎಂ ಪರಮೇಶ್ವರ್ ಪತ್ರ

ಬೆಂಗಳೂರು : ಬ್ಯಾಂಕಿಂಗ್‌ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂಬ ಕೂಗು ಹಲವು ದಿನಗಳಿಂದ ಕೇಳಿ ಬರುತ್ತಿದೆ. ಇಂತಹ ನೇಮಕಾತಿ ಕುರಿತು ಡಿಸಿಎಂ ಪರಮೇಶ್ವರ್ ಕೂಡ ಎತ್ತಿದ್ದಾರೆ.

ಕೇಂದ್ರ ಸರ್ಕಾರದಿಂದ ನಡೆಸುವ ಇನ್ಸ್‌ಟಿಟ್ಯೂಟ್‌ ಆಫ್‌ ಬ್ಯಾಂಕಿಂಗ್‌ ಪರ್ಸನಲ್‌ ಸೆಲೆಕ್ಷನ್‌(ಐಬಿಪಿಎಸ್‌) ಪರೀಕ್ಷೆಯನ್ನು ಪ್ರಾದೇಶಿಕ ಭಾಷೆಯಲ್ಲೂ ಬರೆಯಲು ಅವಕಾಶ ನೀಡವಂತೆ ಡಿಸಿಎಂ ಡಾ.ಜಿ.ಪರಮೇಶ್ವರ್ ಕೇಂದ್ರಕ್ಕೆ ಪತ್ರ ಬರೆದು, ಆಗ್ರಹಿಸಿದ್ದಾರೆ.

ಈ ಸಂಬಂಧ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರಿಗೆ ಪತ್ರ ಬರೆದಿರುವ ಡಿಸಿಎಂ ಡಾ.ಜಿ.ಪರಮೇಶ್ವರ್, ಐಬಿಪಿಎಸ್‌ ನಿಯಮಕ್ಕೆ ತಿದ್ದುಪಡಿ ತರಬೇಕು. ಹೀಗೆ ತಂದಾಗ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ದೊರೆಯುತ್ತದೆ.

ಹೀಗಾಗಿ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಹೆಜ್ಜೆ ಇರಿಸಿ, ಐಬಿಪಿಎಸ್‌ ಪರೀಕ್ಷೆ ನಿಯಮಕ್ಕೆ ತಿದ್ದುಪಡಿ ತಂದು, ಸ್ಥಳೀಯ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.

ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದರೇ, ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ಸಿಗಲಿದೆ. ಇದರಿಂದ ಕರ್ನಾಟಕ ಮಾತ್ರವಲ್ಲದೇ, ಬೇರೆ ರಾಜ್ಯಗಳ ಯುವಜನರಿಗೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬ್ಯಾಂಕ್‌ಗಳಲ್ಲಿ ಸ್ಥಳೀಯ ಭಾಷಾ ವಿರೋಧಿ ಧೋರಣೆಯಿಂದ ಜನರು ಬೇಸತಿದ್ದು, ಪರಿಸ್ಥಿತಿ ಕೈಮೀರುವ ಮುನ್ನ ಐಬಿಪಿಎಸ್ ನಿಯಮಗಳಿಗೆ ಕೂಡಲೇ ತಿದ್ದುಪಡಿ ಮಾಡಬೇಕು ಎಂದು ಡಿಸಿಎಂ ಪರಮೇಶ್ವರ್‌ ಆಗ್ರಹಿಸಿದ್ದಾರೆ.

Next Story

RELATED STORIES