Top

ಅಶ್ಲೇಷ ಮಳೆಯ ಅಬ್ಬರಕ್ಕೆ ಉಕ್ಕಿದ 17 ನದಿಗಳು, ಹಲವೆಡೆ ಭೂ ಕುಸಿತ.!

ಅಶ್ಲೇಷ ಮಳೆಯ ಅಬ್ಬರಕ್ಕೆ ಉಕ್ಕಿದ 17 ನದಿಗಳು, ಹಲವೆಡೆ ಭೂ ಕುಸಿತ.!
X

ಬೆಂಗಳೂರು : ರಾಜ್ಯದಲ್ಲಿ ವರುಣನ ಅಬ್ಬರ ಮುಂದುವರೆದಿದೆ. ಅಶ್ಲೇಷ ಮಳೆಯ ಅಬ್ಬರ ಎಲ್ಲೆಲ್ಲೂ ಅವಾಂತರವನ್ನೇ ಸೃಷ್ಠಿಸುತ್ತಿದೆ.

ರಾಜ್ಯದ ವಿವಿಧ ಭಾಗಗಳಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ, ಕರಾವಳಿ-ಮಲೆನಾಡಿನ ಸುಮಾರು 17ಕ್ಕೂ ಹೆಚ್ಚು ನದಿಗಳು, ಉಪನದಿಗಳು ಉಕ್ಕಿ ಹರಿಯುತ್ತಿವೆ.

ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಮೈಸೂರು, ಹಾಸನ, ಮಂಡ್ಯ, ದಾವಣಗೆರೆ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ವರುಣನ ಅಬ್ಬರ ಮುಂದುವರೆದಿದೆ.

ಎಡಬಿಡದೇ ಸುರಿಯುತ್ತಿರುವ ಅಶ್ಲೇಷ ಮಳೆಯ ಅಬ್ಬರಕ್ಕೆ, ಜನರು ಮನೆಯಿಂದ ಹೊರಗೆ ಬರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡಿದೆ.

ಇನ್ನೂ ಕಾವೇರಿ, ಕಪಿಲೆ, ಹೇಮಾವತಿ, ತುಂಗೆ, ಭದ್ರೆ, ಶರಾವತಿ, ವರದಾ, ಧರ್ಮಾ, ನೇತ್ರಾವತಿ, ಕುಮಾರಧಾರ, ಗಂಗಾವಳಿ, ಕಷ್ಣಾ, ಕೆಂಪಹೊಳೆ, ಶಿರೂರು, ಮಾಲತಿ, ಚಕ್ರಾ ಮತ್ತು ಬ್ರಹ್ಮಕುಂಡ ನದಿ ತೀರದಲ್ಲಿ ನೆರೆ ಹೆಚ್ಚಾಗಿದೆ.

ಧಾರಾಕಾರ ಮಳೆಯಿಂದಾಗಿ, ಬೆಂಗಳೂರು-ಮಂಗಳೂರನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿನಲ್ಲಿ ಭೂ ಕುಸಿತಗೊಂಡು ಪ್ರಯಾಣಿಕರು ಪರದಾಡುವಂತಾಗಿದೆ.

ಇದೇ ರೀತಿಯಲ್ಲಿ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ, ಮಡಿಕೇರಿ ಸಮೀಪ, ಹಾಸನ-ಮಂಗಳಊರು ರೈಲು ಮಾರ್ಗದ ಎಡಕುಮೇರಿ, ಸಿರಿವಾಗಿಲು ಮಾರ್ಗಮಧ್ಯ ಕೂಡ ಭೂ ಕುಸಿತ ಉಂಟಾಗಿದೆ.

ಪ್ರಯಾಣಿಕರೇ ಗಮನಿಸಿ, ಈ ರಸ್ತೆಗಳು ಬಂದ್‌

ಹೌದು ಪ್ರಯಾಣಿಕರೇ ಮಳೆಯ ಅಬ್ಬರದಿಂದಾಗಿ, ಮಲೆನಾಡಿದ ಪ್ರದೇಶಗಳಲ್ಲಿ ತೆರಳುತ್ತಿದ್ದರೇ ನೀವು ಗಮನಿಸಲೇ ಬೇಕಾದದ್ದು, ಈ ಕೆಳಗಿನ ರಸ್ತೆ ಮಾರ್ಗಗಳು ಬಂದ್ ಆಗಿವೆ ಅನ್ನೋದು.

  1. ತೀರ್ಥಹಳ್ಳಿ-ಆಗುಂಬೆ, ಚಿಕ್ಕಮಗಳೂರು-ಕೊಪ್ಪ, ತೀರ್ಥಹಳ್ಳಿ-ಕುಂದಾಪುರ ರಸ್ತೆಗಳು ಬಂದಾಗಿವೆ
  2. ಮಡಿಕೇರಿ-ಮಂಗಳೂರು ರಸ್ತೆ ಕೂಡ ಬಂದ್ ಆಗಿದೆ. ಹೀಗಾಗಿ ಇನ್ನೂ ಎರಡು ದಿನಗಳ ಕಾಲ ಮಡಿಕೇರಿಯಿಂದ ಮಂಗಳೂರು ಭಾಗದಲ್ಲಿ ಸಂಚಾರ ಸಾಧ್ಯವಿಲ್ಲ.
  3. ಶಿರಾಡಿ ಘಾಟಿಯಲ್ಲಿ ಪದೇ ಪದೇ ಭೂ ಕುಸಿತಗೊಂಡು ಸಂಚಾರ ಅಸ್ತವ್ಯಸ್ಥ ಉಂಟಾದ ಕಾರಣ, ವಾಹನಗಳ ರಾತ್ರಿ ಸಂಚಾರಕ್ಕೆ ತಡೆ ನೀಡಲಾಗಿದೆ.
  4. ಬೆಂಗಳೂರು-ಮಂಗಳೂರು ನಡುವಿನ ಸಾರಿಗೆ ಬಸ್ ಸಂಚಾರ ಸ್ಥಗಿತಗೊಂಡಿದೆ.

ಈ ಮೇಲಿನ ರಸ್ತೆ ಮಾರ್ಗಗಳಲ್ಲಿ ಸಂಚಾರ ಸಾಧ್ಯವಿಲ್ಲ ಆಗಿರುವುದರಿಂದ, ವಾಹನ ಸವಾರರು ಪರ್ಯಾಯ ಮಾರ್ಗ ಬಳಸುವಂತೆ ಆಯಾ ಜಿಲ್ಲಾಡಳಿತ ಸೂಚಿಸಿದೆ.

ಮಲೆನಾಡಿನ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ, ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ನದಿ ತೀರದ ಅನೇಕ ಗ್ರಾಮಗಳು ಜಲಾವೃತ ಆಗುವ ಹಂತಕ್ಕೆ ತಲುಪಿವೆ. ಶರಾವತಿ ನೀರಿನ ಹರಿವು ಹೆಚ್ಚಿದೆ. ಜೋಗದ ಜಲಪಾತ ಜಲಲ ಜಲಧಾರೆಯ ದೃಶ್ಯ ವೈಭವ ಮೇಳೈಸಿದೆ.

ಇನ್ನೂ ಕೊಡಗಿನ ಭಾಗಮಂಡಲ, ನಾಪೋಕ್ಲು, ಶೃಂಗೇರಿಯ ಶಾರದಾಪೀಠ, ಮೈಸೂರು ಜಿಲ್ಲೆಯ ಸುತ್ತೂರು, ರಂಗನತಿಟ್ಟು, ಅಂಕೋಲಾ ತಾಲ್ಲೂಕಿನ ಮೊಟನ ಕೂರ್ವೆ, ಜೂಗಾ ಗ್ರಾಮಗಳು ದ್ವೀಪವಾಗಿ ಮಾರ್ಪಟ್ಟು, ಜಲಾವೃತ್ತವಾಗಿವೆ.

ಒಟ್ಟಾರೆಯಾಗಿ, ರಾಜ್ಯದ ಅನೇಕ ಕಡೆಯಲ್ಲಿ ಅಶ್ಲೇಷ ಮಳೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ಅಲ್ಲದೇ ಇನ್ನೂ ಎರಡು ದಿನಗಳ ಕಾಲ ಕರಾವಳಿ ಮತ್ತು ದಕ್ಷಿಣ ಒಳನಾಡು ಪ್ರದೇಶದಲ್ಲಿ ಭಾರಿ ಮಳೆಯಾಗುವ ಮುನ್ನೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

Next Story

RELATED STORIES