Top

ಮಳೆ ಅಬ್ಬರ: ದೇವರ ಗರ್ಭಗುಡಿಗೂ ಬಂತು, ಸಿಎಂಗೂ ಅಡ್ಡಿಪಡಿಸಿತು!

ಮಳೆ ಅಬ್ಬರ: ದೇವರ ಗರ್ಭಗುಡಿಗೂ ಬಂತು, ಸಿಎಂಗೂ ಅಡ್ಡಿಪಡಿಸಿತು!
X

ಮುಂಗಾರು ಮಳೆಯ ಅಬ್ಬರ ಕರಾವಳಿ, ಮಲೆನಾಡು ಹಾಗೂ ಘಟ್ಟ ಪ್ರದೇಶಗಳಲ್ಲಿ ಮುಂದುವರಿದಿದ್ದು, ಬಹುತೇಕ ಕಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ಅಬ್ಬರ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರ ಪ್ರವಾಸಕ್ಕೂ ಅಡ್ಡಿಯುಂಟು ಮಾಡಿದೆ.

ಚಿಕ್ಕಮಗಳೂರಿನ ಮಳೆಯ ಅಬ್ಬರ ಹೆಚ್ಚಾಗಿದ್ದು, ಉಕ್ಕಿ ಹರಿಯತ್ತಿದ್ದ ಹಳ್ಳದಲ್ಲಿ ಹಸು ಕೊಚ್ಚಿ ಹೋಗಿದೆ. ಎನ್​.ಆರ್​.ಪುರ ತಾಲೂಕಿನ ಶೆಟ್ಟಿಕೊಪ್ಪದ ಸೇತುವೆ ಮೇಲೆ ನದಿ ಉಕ್ಕಿ ಹರಿದಿದ್ದರಿಂದ ಹಸು ಕೊಚ್ಚಿಹೋಗಿದ್ದು, ಮತ್ತೊಂದು ಹಸು ಸ್ವಲ್ಪದರಲ್ಲೇ ಪಾರಾಗಿದೆ.

ತುಂಗಾ ನದಿ ಪ್ರವಾಹಕ್ಕೆ ಶೃಂಗೇರಿ ತಾಲೂಕು ತತ್ತರಿಸಿತ್ತು, ಶೃಂಗೇರಿಯ ಪರ್ಯಾಯ ರಸ್ತೆ ಕೂಡ ಜಲಾವೃತಗೊಂಡಿದೆ. ಶಾರಾದ ಮಠದ ಗಾಂಧೀ ಮೈದಾನವೂ ಮುಳುಗಡೆಯಾಗಿದೆ. ಶ್ರೀಮಠದ ಕಪ್ಪೆ ಶಂಕರನಾರಾಯಣ ಮಂಟಪವೂ ಮುಳುಗಡೆಯಾಗಿದ್ದು, ಶಿವಮೊಗ್ಗ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರ ಕಡಿತಗೊಂಡಿದೆ.

ಭದ್ರಾ ನದಿ ಪ್ರವಾಹಕ್ಕೆ ಬಾಳೆಗಹೊನ್ನೂರಿನಲ್ಲಿ ತೋಟಗಳಿಗೆ ನೀರು ನುಗ್ಗಿದ್ದರಿಂದ ಅಡಿಕೆ ತೋಟ, ಕಾಫಿತೋಟಗಳು ಜಲಾವೃತಗೊಂಡಿವೆ. ಈ ಬಾರಿಯೇ ಸತತ 14ನೇ ಬಾರಿ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಇದರಿಂದ ಹೊರನಾಡು-ಕಳಸ, ಕಳಸ-ಬಾಳೆಹೊನ್ನೂರು ಕಳಸ- ಕೊಟ್ಟಿಗೆಹಾರ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಚಿಕ್ಕಮಗಳೂರಿನ 5 ತಾಲೂಕುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.

ಉಡುಪಿಯಲ್ಲಿ ಕೂಡ ಇಡೀ ದಿನ ಮಳೆಯಾಗಿದ್ದು, ರಾತ್ರಿಪೂರ್ತಿ ಸುರಿದ ಮಳೆಯಿಂದ ಕೃಷ್ಣ ಮಠದ ದೇವಸ್ಥಾನ ಜಲಾವ್ರತಗೊಂಡಿದೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಇದೇ ವೇಳೆ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಲು ತೆರಳಿದ್ದ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರಿಗೂ ಮಳೆ ಕಾಟ ಕೊಟ್ಟಿದೆ. ಗುಂಡ್ಯಾ ಮಳೆ ಭಾರೀ ಮಳೆಯಿಂದ ಗುಡ್ಡ ಕುಸಿದಿದ್ದರಿಂದ ಪರ್ಯಾಯ ಮಾರ್ಗವಾಗಿ ಪ್ರಯಾಣ ಬೆಳೆಸಿದರು. ಕುಕ್ಕೆಯಲ್ಲಿ ಸಿಎಂ ಮಂಗಳವಾರ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

Next Story

RELATED STORIES