Top

ಮಹದಾಯಿ ನ್ಯಾಯಾಧಿಕರಣ ತೀರ್ಪು : ಸಮಾಲೋಚಿಸಿ ಸೂಕ್ತ ತೀರ್ಮಾನ-ಸಿಎಂ

ಬೆಂಗಳೂರು : ಮಹದಾಯಿ ವಿವಾದ ನ್ಯಾಯಾಧಿಕರಣವು ಮಹದಾಯಿ ನೀರು ಹಂಚಿಕೆಯ ಕುರಿತು ಶಿಫಾರಸನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ಅದರಲ್ಲಿರುವ ಅಂಶಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಪ್ರತಿಕ್ರಿಯಿಸುವುದಾಗಿ ಮುಖ್ಯಮಂತ್ರಿ ಹೆಚ್‍.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ನಾನು ಈಗಾಗಲೇ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಹಾಗೂ ಕಾನೂನು ತಜ್ಞರೊಂದಿಗೆ ಈ ವಿಷಯ ಚರ್ಚಿಸಿದ್ದು, ನ್ಯಾಯಾಧಿಕರಣದ ತೀರ್ಪು 12 ಸಂಪುಟಗಳಷ್ಟಿದ್ದು, ಅದನ್ನು ಕೂಲಂಕಷವಾಗಿ ಅಧ್ಯಯನ ನಡೆಸಿದ ನಂತರ ಎಲ್ಲರೊಂದಿಗೆ ಸಮಾಲೋಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮತ್ತೊಂದೆಡೆ, ಮಹದಾಯಿ ನ್ಯಾಯಾದೀಕರಣದ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ, ಡಾ.ಜಿ.ಪರಮೇಶ್ವರ್, ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ನ್ಯಾಯಾಲಯ ನೀಡಿರುವ ತೀರ್ಪು ರಾಜ್ಯದ ಜನರಿಗೆ ಕೊಂಚ ನಿರಾಳತೆ‌ ನೀಡಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ 36.4 ಟಿಎಂಸಿ ನೀರನ್ನು ಕೇಳಿತ್ತು.‌ ಆದರೆ, 13.5 ಟಿಎಂಸಿ ನೀರು ಹಂಚಿಕೆ ಮಾಡಿ, ತೀರ್ಪು ನೀಡಲಾಗಿದೆ.‌ ಇಷ್ಟು ವರ್ಷದ ಹೋರಾಟಕ್ಕೆ ಈ ತೀರ್ಪು ಸ್ವಲ್ಪ ಮಟ್ಟಿಗೆ ನಿರಾಳತೆ ನೀಡಿದೆ. ಆದರೆ ಇನ್ನು 10 ಟಿಎಂಸಿ‌ ನೀರು ಹೆಚ್ಚುವರಿ ನೀಡಿದ್ದರೆ ಸಂತೋಷವಿತ್ತು. ಈ ತೀರ್ಪಿನ ಕುರಿತು ಸರಕಾರದ ಮಟ್ಟದಲ್ಲಿ ಚರ್ಚೆ ಮಾಡಿ, ಮರುಅರ್ಜಿ ಸಲ್ಲಿಕೆ ಬಗ್ಗೆಯೂ ಚಿಂತನೆ ಮಾಡಲಾಗುವುದು ಎಂದರು.

ಹಲವು ವರ್ಷದಿಂದ ಮಹದಾಯಿ ವಿಚಾರವಾಗಿ ಸಾಕಷ್ಟು ಹೋರಾಟ, ಸಭೆ ನಡೆದಿದೆ. ಈ‌ ವಿವಾದ ಪರಿಹರಿಸಲು ಪ್ರಧಾನಿ‌ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸುವಂತೆ ಕೇಳಿದ್ದೆವು. ಆದರೆ ಅವರು ನ್ಯಾಯಾಲಯದ ಮುಂದೆ ಹೋಗುವಂತೆ ಹೇಳಿದ್ದರು. ಗೋವಾ ಸರಕಾರ ಈ ತೀರ್ಪಿಗೆ ಬೇಸರ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಗೋವಾಗೆ 24 ಟಿಎಂಸಿ ಹಂಚಿಕೆ ಮಾಡಿದೆ. ಅವರು ಈ ತೀರ್ಪಿಗೆ ತೃಪ್ತಿ ಪಟ್ಟುಕೊಳ್ಳಬೇಕು ಎಂದು ಹೇಳಿದರು.

Next Story

RELATED STORIES