Top

ಇದು ಮೂರು ಹಳ್ಳಿಗಳ ಜನರ ಗೋಳಿನ ಕಥೆ.!

ಇದು ಮೂರು ಹಳ್ಳಿಗಳ ಜನರ ಗೋಳಿನ ಕಥೆ.!
X

ಶಿರಸಿ : ಇದು ದಟ್ಟ ಕಾಡಿನ ನಡುವೆ ಇರುವ ಊರು. ಮಳೆ ಅಬ್ಬರಿಸಿದರೆ ಮಕ್ಕಳು ಶಾಲೆಗೆ ರಜೆ ಮಾಡುವುದು ಅನಿವಾರ್ಯ. ಇನ್ನು ಮಳೆಗಾಲ ಆರಂಭವಾಯಿತೆಂದರೇ ಜನ ತಮ್ಮ ವಾಹನಗಳನ್ನು ಮನೆಯ ಮೂಲೆಗೆ ತಳ್ಳುತ್ತಾರೆ. ಇಂದಿನ ಹೈಟೆಕ್ ಯುಗದಲ್ಲೂ ಇರುವ ಕುಗ್ರಾಮ ಅದ್ಯಾವ್ದು ಅಂತೀರಾ.?? ಈ ಸ್ಟೋರಿ ಓದಿ. ನಿಮಗೆ ಗೊತ್ತಾಗುತ್ತದೆ..

ಉತ್ತರಕನ್ನಡ ಜಿಲ್ಲೆ ಶಿರಸಿ ತಾಲೂಕು ಕೇಂದ್ರದಿಂದ 30 ಕಿಮೀ ದೂರದ ಕುಗ್ರಾಮಗಳೇ ಕರೂರು, ಕೆಳಾಸೆ ಮತ್ತು ಕುದ್ರಗೋಡ. ಹಿಂದಿನಿಂದ ಹಿಡಿದು, ಇಂದಿನ ಕಾಲದ ವರೆಗೆ ಈ ಗ್ರಾಮಗಳ ಜನ ಅನುಭವಿಸುತ್ತಿರುವ ಕಷ್ಟಕ್ಕೆ ಮುಕ್ತಿಯೇ ಇಲ್ಲಾ. ಮುಕ್ತಿ ಸಿಗುವ ಲಕ್ಷಣಗಳೂ ಸಹಾ ಕಾಣಿಸ್ತಾ ಇಲ್ಲಾ.

ಯಾಕೆಂದರೇ, ಮಳೆಗಾಲ ಶುರುವಾಯಿತೆಂದರೆ ಇಲ್ಲಿನ ಸುತ್ತಮುತ್ತಲಿನ ಹಳ್ಳಿಯವರು ಹೊರ ಜಗತ್ತಿನಿಂದ ಸಂಪರ್ಕವನೇ ಕಳೆದು ಕೊಳ್ಳುತ್ತವೆ. ಈ ಮೂಲಕ ಇಲ್ಲಿನ ಜನರು ಪರದಾಡುವ ಸ್ಥಿತಿ ಯಾರಿಗೂ ಬೇಡ ಎನಿಸುವಂತಿದೆ.

ಶಿರಸಿ-ಮತ್ತಿಘಟ್ಟ ಮುಖ್ಯರಸ್ತೆಯಿಂದ 8 ಕಿ.ಮೀ.ಗಿಂತ ದೂರದ ಕರೂರು, ಕೆಳಾಸೆ, ಕುದ್ರಗೋಡ ಈ ಗ್ರಾಮಗಳಿಗೆ ತೆರಳಲು ಭರತನಹಳ್ಳಿಗದ್ದೆ ಹೊಳೆ ದಾಟುವುದು ಅನಿವಾರ್ಯ. ದುರಂತದ ಸಂಗತಿಯೆಂದರೆ ಈ ಹೊಳೆಗೆ ಇನ್ನೂ ಸೇತುವೆಯೇ ಇಲ್ಲ.

ಮಳೆ ಅಬ್ಬರ ಜಾಸ್ತಿ ಆಯ್ತೆಂದರೇ, ಈ ಗ್ರಾಮಗಳ ಜನರ ಪಾಡು ದೇವರಿಗೂ ಪ್ರೀತಿಯಿಲ್ಲದಂತೆ. ಅಲ್ಲದೇ ಶಾಲೆಗೆ ಹೋಗುವ ವಿದ್ಯಾರ್ಥಿಗಳು, ಕೆಲಸಕ್ಕೆ ತೆರಳುವ ಗ್ರಾಮಸ್ಥರು, ವಾಹನ ಸವಾರರು ಕೂಡ ತಮ್ಮ ತಮ್ಮ ಚಟುವಟಿಕೆಗಳಿಗೆ ರಜೆ ಹಾಕಬೇಕಾದ ಅನಿವಾರ್ಯತೆ ಇದೆ. ಸ್ವಲ್ಪ ಯಾಮಾರಿದರೂ ಮಕ್ಕಳು ಹೊಳೆ ಪಾಲಾಗುವ ಸಂಭವವೇ ಹೆಚ್ಚು.

ದೇವನಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಕರೂರು, ಕುದ್ರಗೋಡ, ಕೆಳಾಸೆಯ ಜನ ಮಳೆಗಾಲದಲ್ಲಿ ಹೊರ ಊರಿನ ಸಂಪರ್ಕದಿಂದ ವಂಚಿತವಾರಾಗುತ್ತಿದ್ದಾರೆ. ಯಾಕೆಂದರೇ, ಈ ಊರುಗಳಿಗೆ ಸಂಪರ್ಕ ಕಲ್ಪಿಸುವ ಹೊಳೆಗೆ ಸೇತುವೆ ಇಲ್ಲದೇ ಇರುವುದು ಈ ಎಲ್ಲಾ ಸಮಸ್ಯೆಗೆ ಮೂಲವಾಗಿದೆ.

ಈ ಕುರಿತು ಮಾಹಿತಿ ಹಂಚಿಕೊಂಡ ಕರೂರು ಗ್ರಾಮಸ್ಥ ರಾಮಾ ಗೌಡ, ಮಳೆ ಹೆಚ್ಚಿದ್ದರೆ ಈ ಗ್ರಾಮದ ಜನರು ಹೊರ ಊರಿಗೆ ತೆರಳಲು ಸಾಧ್ಯವಿಲ್ಲ. ಒಂದೆಡೆ ದಟ್ಟಾರಣ್ಯವಾದರೆ, ಇನ್ನೊಂದೆಡೆ ಹೊಳೆ. ಸ್ಥಳೀಯರೇ ನಿರ್ಮಿಸಿಕೊಂಡ ದಬ್ಬೆಯ ಕಾಲುಸಂಕ ಹೊಳೆ ದಾಟಲು ಆಸರೆಯಾಗುತ್ತೆ. ಸ್ವಲ್ಪ ನೀರು ಹೆಚ್ಚಿದರೂ ಸಂಪರ್ಕ ಕಡಿತವಾಗುತ್ತದೆ. ಹೊಳೆಯ ಅತ್ತಲಿನವರು ಅತ್ತ. ಇತ್ತಲಿನವರು ಇತ್ತವೇ ಇರುವ ಅನಿವಾರ್ಯತೆ ಇದೆ. ವಾಹನವಿದ್ದರೂ ಮಳೆಗಾಲ ಮುಗಿಯುವ ತನಕ ಬಳಸಲಾಗದೇ ಸಂಪೂರ್ಣ ಮೂಲೆಗೆ ತಳ್ಳಬೇಕು ಎನ್ನುತ್ತಾರೆ.

ಇನ್ನು ಸೇತುವೆಯಿಲ್ಲದ ಕಾರಣ ಹೊಳೆ ದಾಟಲಾರದ ವಿದ್ಯಾರ್ಥಿಗಳು ಮಳೆಗಾಲದ ಸಂದರ್ಭದಲ್ಲಿ ಹೆಚ್ಚಿನ ದಿನ ಶಾಲೆಯ ಕಲಿಕೆಯಿಂದ ವಂಚಿತರಾಗುತ್ತಾರೆ. ಈ ಮೂಲಕ ಕಲಿಕೆಯಿಂದ ಮಳೆ ಕಡಿಮೆ ಆಗುವವರೆಗೂ ದೂರ ಉಳಿಯುವ ಪರಿಸ್ಥಿತಿ ಅನಿವಾರ್ಯಾವಾಗಿದೆ.

ಇನ್ನೂ ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ, ಕೆಲವೊಮ್ಮೆ ಪಾಲಕರೇ ಹೊಳೆ ದಾಟಿಸಿ ವಾಪಸ್ ಕರೆದುಕೊಂಡು ಬರುವ ಅನಿರ್ವಾಯತೆ ಬಂದೊಂದಗಿದೆ. ಕೆಲ ದಿನ ವಿದ್ಯಾರ್ಥಿಗಳೇ ಅಪಾಯ ಮೈಮೇಲೆ ಎಳೆದುಕೊಂಡು ಸಂಕದಲ್ಲಿ ಹೊಳೆ ದಾಟಬೇಕಾದ ಅನಿವಾರ್ಯತೆ ಇದೆ.

ಈ ಸಮಸ್ಯೆ ಬಗೆಹರಿಸುವಂತೆ ಸಾಕಷ್ಟು ಬಾರಿ ಸರ್ಕಾರಕ್ಕೆ ಮನವಿ ಮಾಡಿದರೂ ಯಾರು ಇಲ್ಲಿಯವರೆಗೆ ಸ್ಪಂದಿಸಿಲ್ಲ ಎಂಬುದು ಕರೂರು, ಕೆಳಾಸೆ ಮತ್ತು ಕುದ್ರಗೋಡ ಗ್ರಾಮಸ್ಥರ ಅಳಲಾಗಿದೆ.

ಒಟ್ಟಾರೆಯಾಗಿ ಇಂದಿನ ಹೈಟೆಕ್ ಯುಗದಲ್ಲೂ ರಸ್ತೆ, ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಈ ಮೂರು ಹಳ್ಳಿಗಳು ಕುಗ್ರಾಮವಾಗಿಯೇ ಉಳಿದಿರುವುದು ಶೋಚನೀಯ. ಇನ್ನಾದರೂ ಆಡಳಿತಾರೂಢ ಸರ್ಕಾರ ಇತ್ತ ಗಮನಹರಿಸಿ ಇಂತಹ ಹಳ್ಳಿಗಳ ಸಮಸ್ಯೆಗಳ ನಿವಾರಿಸುವತ್ತ ಕ್ರಮ ಕೈಗೊಳ್ಳಬೇಕಿದೆ.

ವರದಿ : ವಿನಾಯಕ್ ಹೆಗಡೆ, ಟಿವಿ5 ಶಿರಸಿ

Next Story

RELATED STORIES