Top

ಉಕ್ಕಡಗಾತ್ರಿ ಸಂಪರ್ಕ ಸೇತುವೆ ಮುಳುಗಡೆ

ಉಕ್ಕಡಗಾತ್ರಿ ಸಂಪರ್ಕ ಸೇತುವೆ ಮುಳುಗಡೆ
X

ದಾವಣಗೆರೆ : ಮಳೆನಾಡು ಭಾಗದಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿದ್ದು, ನದಿಗಳೆಲ್ಲಾ ಮೈದುಂಬಿ ಹರಿಯುತ್ತಿದ್ದು, ಜಲಾಶಯಗಳಿಗೆ ಜೀವಕಳೆ ಬಂದಿದೆ. ತುಂಗಭದ್ರಾ ನದಿ ಕೂಡ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ಮೂಲಕ ಪ್ರಸಿದ್ದ ದೇವಾಲಯ ಸಂಪರ್ಕ ಕಳೆದು ಕೊಳ್ಳುವ ಹಂತ ತಲುಪಿದೆ.

ಹೌದು, ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಉಕ್ಕಡಗಾತ್ರಿ ತುಂಗಭದ್ರಾ ನದಿಯ ಹೊರ ಹರಿವಿನಿಂದಾಗಿ, ಸಂಪರ್ಕ ಕಳೆದುಕೊಳ್ಳುವ ಹಂತಕ್ಕೆ ತಲುಪಿದೆ. ಇದಕ್ಕೆ ಕಾರಣ ಹರಿಹರ ತಾಲ್ಲೂಕಿನ ನಂದಿಗ್ರಾಮದಿಂದ ಉಕ್ಕಡಗಾತ್ರಿಗೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿರುವುದು.

ಮಲೆನಾಡ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಕಾರಣ, ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಇದರಿಂದಾಗಿ, ಹರಿಹರದ ಬಳಿ ಉಕ್ಕಡಗಾತ್ರಿಗೆ ಸಂಪರ್ಕ ಕಲ್ಪಿಸಿಕೊಡುವ ಸೇತುವೆ ಮುಳುಗಡೆಯಾಗಿದೆ. ಈ ಮೂಲಕ ಜನರು ದೇವಾಲಯಕ್ಕೆ ಪ್ರಾಣಭಯದಲ್ಲಿ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ತುಂಗಭದ್ರಾ ನದಿಯ ತಟದಲ್ಲಿ ಉಕ್ಕಡಗಾತ್ರಿ ಕರಿಬಸಜ್ಜಯ್ಯನ ದೇವಾಲಯವಿದ್ದು, ಇದೀಗ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ, ನದಿಯ ನೀರು ದೇವಾಲಯದ ಆವರಣಕ್ಕೆ ನುಗ್ಗಿದೆ. ಅಷ್ಟೇ ಅಲ್ಲದೇ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ಈ ಮೂಲಕ ಪ್ರಸಿದ್ದ ದೇವಾಲಯ ಸಂಪರ್ಕ ಕಳೆದುಕೊಳ್ಳುವ ಹಂತಕ್ಕೆ ತಲುಪಿದೆ.

ನದಿ ನೀರು ಆವರಣಕ್ಕೆ ನುಗ್ಗದಂತೆ ತಡೆಗೊಡೆ ಕಟ್ಟಿ ಕೊಡುವಂತೆ ದೇವಸ್ಥಾನ ಮಂಡಳಿಯವರು ಅಧಿಕಾರಿಗಳಿಗೆ ಸಾಕಷ್ಟು ಬಾರೀ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದಾಗಿ ನೀರು ದೇವಸ್ಥಾನದ ಆವರಣಕ್ಕೆ ನುಗ್ಗಿದ್ದು ಕರಿಬಸಜ್ಜಯ್ಯನ ದರ್ಶನಕ್ಕೆ ಬರಲು ಭಕ್ತರು ಪರದಾಡ ಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಂಡು ನದಿಗೆ ಅಡ್ಡಲಾಗಿ ತಡೆಗೋಡೆ ನಿರ್ಮಿಸಿ, ಸೇತುವೆಯನ್ನು ಮೇಲ್ದರ್ಜೆಗೆ ಏರಿಸುವ ಮೂಲಕ ಮುಂದಾಗ ಬಹುದಾದ ಅನಾಹುತ ತಡೆಯಲಿ ಎಂಬುದು ನಮ್ಮ ಆಶಯ.

ವರದಿ : ಪ್ರವೀಣ್ ಬಾಡ, ಟಿವಿ5 ದಾವಣಗೆರೆ

Next Story

RELATED STORIES