Top

ಏರೋ ಶೋ ಬೆಂಗಳೂರಿನಲ್ಲಿಯೇ ನಡೆಯುತ್ತಾ? ಉತ್ತರ ಪ್ರದೇಶ ಪಾಲಾಗುತ್ತಾ?

ಏರೋ ಶೋ ಬೆಂಗಳೂರಿನಲ್ಲಿಯೇ ನಡೆಯುತ್ತಾ? ಉತ್ತರ ಪ್ರದೇಶ ಪಾಲಾಗುತ್ತಾ?
X

ಏರೋ ಶೋ ಬೆಂಗಳೂರಿನಿಂದ ಲಖ್ನೌಗೆ ಶಿಫ್ಟ್ಆಗೋ ವಿಚಾರ ದಿನೇ ದಿನೇ ರಾಜಕೀಕರಣಗೊಳ್ಳುತ್ತಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಏರೋ ಶೋ ಯಾವುದೇ ಕಾರಣಕ್ಕೂ ಬೆಂಗಳೂರಿನಿಂದ ಉತ್ತರ ಪ್ರದೇಶಕ್ಕೆ ಶಿಫ್ಟ್ಆಗಲ್ಲ ಎಂದು ಬಿಜೆಪಿ ನಾಯಕರು ಸಮಜಾಯಿಷಿ ನೀಡುತ್ತಿದ್ದಾರೆ. ಕಾಂಗ್ರೆಸ್ ಮುಖಂಡರು ರಾಜ್ಯ ಮತ್ತು ರಾಷ್ಟ್ರೀಯ ಬಿಜೆಪಿ ಮುಖಂಡರನ್ನು ಇದೇ ವಿಷಯವಾಗಿ ಹಣಿಯುತ್ತಿದ್ದಾರೆ.

ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಏರೋ ಶೋ ಬಗ್ಗೆಯೇ ಚರ್ಚೆಯಾಗುತ್ತಿದೆ. ಲೋಹದ ಹಕ್ಕಿಗಳ ಕಲರವವನ್ನು ವೀಕ್ಷಿಸಲು ಭಾರತ ಮತ್ತು ದಕ್ಷಿಣ ಏಷ್ಯಾದ ವಿವಿಧ ದೇಶಗಳ ಜನ ಮತ್ತು ಉದ್ಯಮಿಗಳು ಬೆಂಗಳೂರಿಗೆ ಬರುತ್ತಾರೆ. ವರ್ಷದಿಂದ ವರ್ಷಕ್ಕೆ ಏರೋ ಶೋ ತನ್ನ ವೈಭವ ಮತ್ತು ಪ್ರಖ್ಯಾತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. ವಿಶ್ವದಲ್ಲಿ ಶಕ್ತಿಶಾಲಿ ಯುದ್ಧ ವಿಮಾನಗಳನ್ನು ತಯಾರಿಸುವ ಅಮೆರಿಕ, ರಷ್ಯಾ, ಫ್ರಾನ್ಸ್ದೇಶಗಳು ತಮ್ಮ ಯುದ್ಧ ವಿಮಾನ ಮಾರಾಟಕ್ಕಾಗಿ ಈ ಏರೋ ಶೋವನ್ನು ಬಹುವಾಗಿ ನಂಬಿವೆ.

ಆದರೆ ಈ ಏರೋ ಶೋ ಈಗ ಬೆಂಗಳೂರು ಬಿಟ್ಟು ಉತ್ತರ ಪ್ರದೇಶದ ಪಾಲಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೇಂದ್ರದಲ್ಲಿರುವ ಎನ್‌ಡಿಎ ಸರ್ಕಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಒತ್ತಡಕ್ಕೆ ಮಣಿದು ಏರೋ ಶೋ ವನ್ನು ಲಖ್ನೌಗೆ ಶಿಫ್ಟ್ ಮಾಡಲು ಮುಂದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದೇ ವಿಚಾರ ಈಗ ರಾಜಕೀಕರಣಗೊಂಡಿದೆ. ಅವಕಾಶಕ್ಕಾಗಿ ಕಾಯುತ್ತಿದ್ದ ಕಾಂಗ್ರೆಸ್ಮುಖಂಡರು ಈ ವಿಷಯವನನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ವಿರುದ್ಧ ಹರಿ ಹಾಯುತ್ತಿದ್ದಾರೆ.

ಕಾಂಗ್ರೆಸ್ ನಾಯಕರ ವಾಕ್ಸಮರಕ್ಕೆ ಬಿಜೆಪಿ ನಾಯಕರು ಉತ್ತರಿಸಿದ್ದಾರೆ. ಯಾವುದೇ ಕಾರಣಕ್ಕೂ ಏರೋ ಶೋ ಬೆಂಗಳೂರು ಬಿಟ್ಟು ಹೋಗಲ್ಲ. ಅದನ್ನು ಬೆಂಗಳೂರಿನಲ್ಲಿಯೇ ಇರುವಂತೆ ನೋಡಿಕೊಳ್ಳೋದಾಗಿ ಸಮಜಾಯಿಷಿ ನೀಡಿದ್ದಾರೆ.

ನಿರ್ಮಲಾ ಸೀತಾರಾಮನ್ ರಾಜ್ಯಸಭೆ ಸದಸ್ಯರು. ಕರ್ನಾಟಕದಿಂದಲೇ ಅವರು ರಾಜ್ಯಸಭೆ ಪ್ರವೇಶ ಮಾಡಿದ್ದಾರೆ. ಅವರು ಏರೋ ಶೋವನ್ನು ಬೆಂಗಳೂರಿನಲ್ಲಿಯೇ ಉಳಿಯುವಂತೆ ನೋಡಿಕೊಳ್ಳಬೇಕು. ಒಂದು ವೇಳೆ ಅವರು ಏರೋ ಶೋವನ್ನು ಬೇರೆಡೆ ಸ್ಥಳಾಂತರಿಸಲು ನಿರ್ಧಾರ ಕೈಗೊಂಡಿದ್ದೇ ಆದರೆ, ಇದು ಕರ್ನಾಟಕಕ್ಕೆ ಅವರು ಮಾಡುವ ದೊಡ್ಡ ದ್ರೋಹವಾಗ್ತದೆ. ಇದು ಕಾಂಗ್ರೆಸ್ನ ಎಚ್ಚರಿಕೆ. ಇದನ್ನೇ ಮುಂದಿಟ್ಟುಕೊಂಡು ಹೋರಾಟ ಮಾಡಲು ಕಾಂಗ್ರೆಸ್ ಸಜ್ಜಾಗುತ್ತಿದೆ.

ಚುನಾವಣೆ ಸಂದರ್ಭದಲ್ಲಿ ಇದು ಬಿಜೆಪಿಗೆ ಹಿನ್ನಡೆ ಉಂಟು ಮಾಡುವುದರಲ್ಲಿ ಅನುಮಾನವೇ ಇಲ್ಲ. ಕಾಂಗ್ರೆಸ್ ಪಕ್ಷ ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಳ್ಳಲು ಸಿದ್ಧವಾಗಿ ನಿಂತಿದೆ. ಚುನಾವಣೆ ಸಂದರ್ಭದಲ್ಲಿ ಇಂಥ ದೊಡ್ಡ ವಿರೋಧವನ್ನು ಬಿಜೆಪಿ ಎದುರಿಸುತ್ತಾ? ಈ ಪ್ರಶ್ನೆಗೆ ಉತ್ತರ ಏರೋ ಶೋ ಸ್ಥಳಾಂತರ ನಿರ್ಧಾರವನ್ನು ಅವಲಂಬಿಸಿದೆ.

ವರದಿ : ಗುರುಲಿಂಗಸ್ವಾಮಿ ಹೊಳಿಮಠ, ಪೊಲಿಟಿಕಲ್ ಎಡಿಟರ್, ಟಿವಿ5 ಬೆಂಗಳೂರು

Next Story

RELATED STORIES