Top

ನೀವೂ ಒಮ್ಮೆ ಭೇಟಿ ನೀಡಿ ಈ ನಕ್ಷತ್ರದ ಕೋಟೆಗೆ

ನೀವೂ ಒಮ್ಮೆ ಭೇಟಿ ನೀಡಿ ಈ ನಕ್ಷತ್ರದ ಕೋಟೆಗೆ
X

‘ಹಿತ್ತಲ ಗಿಡ ಮದ್ದಲ್ಲ’ ಅನ್ನೋ ಗಾದೆಯಂತೆ ನಾವು ಆಕರ್ಷಕ, ಕಣ್ಣಿಗೆ ಹಬ್ಬ ಅನಿಸುವ ಸ್ಥಳಗಳನ್ನು ನೋಡಲು ದೇಶ – ವಿದೇಶಗಳನ್ನೆಲ್ಲಾ ಸುತ್ತುತ್ತೇವೆ. ಆದ್ರೆ ನಮ್ಮ ಮನೆಯಿಂದ ಕೆಲವೇ ಕಿ.ಮೀಗಳಷ್ಟು ದೂರವಿರುವ ಹಲವು ಆಕರ್ಷಣೀಯ ಸ್ಥಳಗಳ ಬಗ್ಗೆ ನಮಗೆ ಗೊತ್ತೇ ಇರುವುದಿಲ್ಲ.. ಅದಕ್ಕೆ ಒಂದು ನಿದರ್ಶನ ಈ ಮಂಜರಾಬಾದ್ ಕೋಟೆ.

ಬೆಂಗಳೂರಿನಿಂದ 221 ಕಿಮೀ ದೂರ ಮತ್ತು ಸಕಲೇಶಪುರದಿಂದ ಕೇವಲ 5 ಕಿಮೀ ದೂರದಲ್ಲಿರುವ ಈ ಕೋಟೆಯನ್ನು ಮೇಲ್ಭಾಗದಿಂದ ಪುನೀತ್ ಚಿತ್ರದ ಪರವಶನಾದೆನು ಎಂಬ ಹಾಡಿನಲ್ಲಿ ತೋರಿಸಿದ್ದಾರೆ. ನಂತರ ಇದನ್ನು ನೋಡಲು ದೂರದೂರಿನಿಂದ ಪ್ರವಾಸಿಗರು ಬರಲು ಪ್ರಾರಂಭಿಸಿದ್ದಾರೆ. ಹಚ್ಚಹಸುರಿನ ಮಧ್ಯೆ ಇರುವ ಈ ಕೋಟೆಯನ್ನು ನೋಡುವುದೇ ಕಣ್ಣಿಗೊಂದು ಹಬ್ಬ.

ಸಮುದ್ರ ಮಟ್ಟದಿಂದ 3240 ಅಡಿ ಎತ್ತರದಲ್ಲಿ ಈ ಕೋಟೆಯನ್ನು ನಕ್ಷತ್ರದ ಆಕಾರದಲ್ಲಿ ಸುಮಾರು 5 ಎಕರೆ ಜಾಗದಲ್ಲಿ ಕಟ್ಟಲಾಗಿದೆ, ಇದನ್ನು ಹತ್ತಲು 250 ಮೆಟ್ಟಿಲುಗಳನ್ನು ಹತ್ತಿ ಹೋಗಬೇಕು.

ಕೋಟೆಯ ಹಿನ್ನೆಲೆ:

ಈ ಕೋಟೆಯನ್ನು ಟಿಪ್ಪುಸುಲ್ತಾನ್ ತನ್ನ ಸಾಮ್ರಾಜ್ಯದ ಗಡಿಭಾಗಗಳ ರಕ್ಷಣೆಗೋಸ್ಕರ ಕಟ್ಟಿಸಿದ್ದಂತೆ, ಅಲ್ಲಿ ಸೈನಿಕರು ಆಪತ್ಕಾಲದಲ್ಲಿ ಅನುಕೂಲವಾಗಲು ಮದ್ದುಗುಂಡುಗಳನ್ನು ಸಂಗ್ರಹಿಸಿಡಲು ಮತ್ತು ಸೈನಿಕರು ವಿಶ್ರಾಂತಿ ತೆಗೆದುಕೊಳ್ಳಲು ನಿರ್ಮಾಣ ಮಾಡಿದ್ದನಂತೆ. ಈ ಕೋಟೆಯೊಳಗೆ ಎಲ್ಲಾ ಸುರಕ್ಷಿತ ವ್ಯವಸ್ಥೆಗಳನ್ನು ಮಾಡಿ ಶತ್ರುಗಳನ್ನು ಸದೆಬಡಿಯಲು ಅನುಕೂಲವಾಗುವಂತೆ ಕಟ್ಟಿರುವ ಈ ಕೋಟೆಯ ವಿನ್ಯಾಸವೇ ಅದ್ಭುತ.

ಆಗಿನ ಕಾಲದಲ್ಲೇ ಟಿಪ್ಪು ಫ್ರೆಂಚ್ ಎಂಜಿನಿಯರ್ ಸಹಾಯದೊಂದಿಗೆ 8 ಮೂಲೆಗಳಿರುವಂತೆ, ಮೇಲಿನಿಂದ ನೋಡಿದರೆ ನಕ್ಷತ್ರಾಕಾರದಲ್ಲಿ ಕಾಣುವಂತೆ ಇಸ್ಲಾಮಿಕ್ ಶೈಲಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಇನ್ನು ಈ ಕೋಟೆಯೊಳಗೆ ಅಲ್ಲಲ್ಲಿ ಸುರಂಗ ಮಾರ್ಗಗಳಿದ್ದು, ಕೋಟೆಯ ಮಧ್ಯದಲ್ಲಿ ಒಂದು ಬಾವಿಯಿದೆ. ಅಲ್ಲದೆ, ಇಲ್ಲಿ ಸ್ನಾನಗೃಹ, ಊಟದ ಕೋಣೆ, ನೀರಿನ ಕೊಳ ಮುಂತಾದವುಗಳನ್ನೂ ಕಾಣಬಹುದು.

ಮಂಜರಾಬಾದ್ ಹೆಸರು ಯಾಕೆ?

ಈ ಕೋಟೆಯು ಹಚ್ಚಹಸುರಿನ ಮಧ್ಯೆ ಇದೆ. ಟಿಪ್ಪುಸುಲ್ತಾನ್ ಇಲ್ಲಿಗೆ ಬಂದಾಗ ಅಲ್ಲಿನ ಪ್ರಕೃತಿ ವೈಭವವನ್ನು ನೋಡಿ ‘ಮನ್ ಅಬಾದ್’ ಎಂದು ಎಂದು ಕೂಗಿಕೊಂಡನಂತೆ. ‘ಮನ್ ಅಬಾದ್’ ಅಂದ್ರೆ ‘ಮನಸ್ಸು ಸಂತೃಪ್ತವಾಯಿತು’ ಎಂದರ್ಥ. ಅದಕ್ಕೆ ಈ ಕೋಟೆಗೆ ಮಂಜರಾಬಾದ್ ಎನ್ನುವ ಹೆಸರು ಬಂತಂತೆ.

Next Story

RELATED STORIES