ಆ್ಯಂಡರ್ಸನ್ ದಾಳಿಗೆ ಕುಸಿದ ಭಾರತ

ವೇಗಿ ಜೇಮ್ಸ್ ಆ್ಯಂಡರ್ಸನ್ ಮಾರಕ ದಾಳಿಗೆ ತತ್ತರಿಸಿದ ಭಾರತ ತಂಡ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 107 ರನ್ಗೆ ಸರ್ವಪತನ ಕಂಡು ಭಾರೀ ಹಿನ್ನೆಡೆ ಅನುಭವಿಸಿದೆ.
ದ್ವಿತೀಯ ದಿನ ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾಕ್ಕೆ ಜೇಮ್ಸ್ ಆಂಡರ್ಸನ್ ಆರಂಭಿಕ ಆಘಾತ ನೀಡಿದರು. ತಂಡ ರನ್ ಖಾತೆ ತೆರೆಯುವ ಮುನ್ನವೇ ಮುರಳಿ ವಿಜಯ್ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು.
8 ರನ್ ಗಳಿಸಿದ ಕನ್ನಡಿಗ ಕೆ.ಎಲ್.ರಾಹುಲ್ ಕೂಡ ವೇಗಿ ಆಂಡರ್ಸನ್ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಇನ್ನು ಮೊದಲ ಟೆಸ್ಟ್ನಿಂದ ಹೊರಗಿದ್ದ ಚೇತೇಶ್ವರ್ ಪೂಜಾರ್ 2ನೇ ಟೆಸ್ಟ್ನಲ್ಲಿ ಅವಕಾಶ ಪಡೆದಿದ್ರು ಕೂಡ ತಂಡಕ್ಕೆ ಯಾವುದೇ ಅನುಕೂಲವಾಗಲಿಲ್ಲ. ತಂಡದ ಮೊತ್ತ 15 ರನ್ ಆಗಿದ್ದಾಗ ಇಲ್ಲದ ರನ್ ಕದಿಯಲು ಮುಂದಾದ ಪರಿಣಾಮ ರನೌಟ್ ಆಗಿ ಪೆವಿಲಿಯನ್ ಸೇರಿಕೊಂಡರು.
ಬಳಿಕ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ಅಜಿಂಕ್ಯ ರಹಾನೆ ತಂಡಕ್ಕೆ ಆಸರೆಯಾಗುವ ಭರವಸೆ ಮೂಡಿಸಿದ್ದರಾದರು ಅದು ಹೆಚ್ಚು ಹೊತ್ತು ಉಳಿಯಲಿಲ್ಲ. ತಂಡದ ಮೊತ್ತ 49 ಆಗಿದ್ದಾಗ ಕ್ಯಾಪ್ಟನ್ ಕೊಹ್ಲಿ ವೇಗಿ ಕ್ರಿಸ್ ವೋಕ್ಸ್ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ನತ್ತ ಹೆಜ್ಜೆ ಹಾಕಿದರು.
ನಂತರ ಕ್ರೀಸ್ಗಿಳಿದ ಹಾರ್ದಿಕ್ ಪಾಂಡ್ಯ ಹಾಗೂ ದಿನೇಶ್ ಕಾರ್ತಿಕ್ ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಬಂದ ಪುಟ್ಟ ಹೋದ ಪುಟ್ಟ ಅಂತ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ್ರು. ನಂತರ ಅಜಿಂಕ್ಯ ರಹಾನೆ 18 ರನ್ ಸಿಡಿಸಿ ನಿರ್ಗಮಿಸಿದ್ರೆ, ಆರ್.ಅಶ್ವಿನ್ 29 ರನ್ ಗಳಿಸುವ ಮೂಲಕ ಭಾರತದ ಪರ ವೈಯಕ್ತಿಕ ಗರಿಷ್ಠ ರನ್ ಗಳಿಸಿದ್ರು.ಇಂಗ್ಲೆಂಡ್ ಪರ ಜೇಮ್ಸ್ ಆಂಡರ್ಸನ್ ಐದು ವಿಕೆಟ್ ಪಡೆಯುವ ಮೂಲಕ ಕೊಹ್ಲಿ ಪಡೆಯ ಬ್ಯಾಟಿಂಗ್ ಬೆನ್ನೆಲುಬು ಮುರಿದು ಸಂಭ್ರಮಿಸಿದ್ರು.