Top

ರಾಯರ ಸನ್ನಿಧಿಯಲ್ಲಿ ರಣವ್ಯೂಹ ರಚನೆ : ದಕ್ಷಿಣಾಧಿಪತ್ಯಕ್ಕೆ ಬಿಜೆಪಿ ತಯಾರಿ

ರಾಯರ ಸನ್ನಿಧಿಯಲ್ಲಿ ರಣವ್ಯೂಹ ರಚನೆ : ದಕ್ಷಿಣಾಧಿಪತ್ಯಕ್ಕೆ ಬಿಜೆಪಿ ತಯಾರಿ
X

ಬೆಂಗಳೂರು : 2019 ಪ್ರಧಾನಿ ನರೇಂದ್ರ ಮೋದಿ ಪಾಲಿಗೆ ಅಗ್ನಿಪರೀಕ್ಷೆಯ ಸಂವತ್ಸರ. ಯಾಕಂದ್ರೆ 2019ರ ಲೋಕಸಭೆ ಚುನಾವಣೆ ಸನ್ನಿಹಿತವಾಗಿದೆ.ಗೆದ್ದರೆ ದೆಹಲಿ ಗದ್ದುಗೆ, ಸೋತರೆ ಮನೆ ಕಡೆಗೆ. ಈ ಬಾರಿ ನಮೋ ಮತ್ತೊಮ್ಮೆ ಪ್ರಧಾನಿಯಾಗಬೇಕು ಅಂತ ಸಂಘ ಪರಿವಾರ ಲೋಕಸಭೆ ಅಖಾಡಕ್ಕಿಳಿದಿದೆ. ರಾಯರ ಸನ್ನಿಧಿಯಲ್ಲಿ ರಣತಂತ್ರ ರೂಪಿಸಲು ಕೇಸರಿ ಪಡೆ ಸಜ್ಜಾಗಿದೆ.

ಲೋಕಸಭೆ ಸಮರಕ್ಕೆ ಕಾಲ ಸನ್ನಿಹಿತವಾಗ್ತಿದೆ. ಪ್ರಧಾನಿ ಮೋದಿ – ಅಮಿತ್ ಷಾ ಜೋಡಿ ಈ ಬಾರಿಯೂ ಪ್ರಚಂಡ ಗೆಲುವಿಗೆ ರಣವ್ಯೂಹ ರೆಡಿಯಾಗ್ತಿದೆ. ಎರಡನೇ ಬಾರಿ ಮೋದಿ ಪ್ರಧಾನಿ ಆಗೋದನ್ನ ತಪ್ಪಿಸೋಕೆ ತೃತಿಯ ರಂಗವೂ ಹಲವು ತಯಾರಿಗಳನ್ನು ಮಾಡಿಕೊಳ್ತಿದೆ. ಹೀಗಾಗಿ ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಲು ಆರ್.ಎಸ್ .ಎಸ್ ಪಣತೊಟ್ಟಿದೆ.

ಕರ್ನಾಟಕದ ಗಡಿ ಪ್ರದೇಶದಲ್ಲಿರುವ ಗುರು ರಾಯರ ಸನ್ನಿಧಿಯಲ್ಲಿ ಸಂಘ ಪರಿವಾರ ಹಾಗೂ ಬಿಜೆಪಿ ಅಖಿಲ ಭಾರತ ಸಮನ್ವಯ ಸಭೆ ಆಗಸ್ಟ್ 29ರಂದು ನಡೆಯಲಿದೆ. ಮಂತ್ರಾಲಯದಲ್ಲಿ ನಡೆಯಲಿರುವ ಸಮನ್ವಯ ಸಭೆಯಲ್ಲಿ, ಮುಂಬರುವ ಲೋಕಸಭೆ ಚುನಾವಣೆ ಕುರಿತು ಮಹತ್ವ ವಿಚಾರಗಳು ಚರ್ಚೆಗೊಳ್ಳಲಿವೆ.

ಆರ್.ಎಸ್.ಎಸ್ ನೇರವಾಗಿ ಯಾವುದೇ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಲ್ಲ. ಆದರೆ ಬಿಜೆಪಿ ಪರ ಪರೋಕ್ಷ ಪ್ರಚಾರ ನಡೆಸುತ್ತದೆ. ಮತದಾನ ಪ್ರಮಾಣ ಹೆಚ್ಚಿಸುವುದು, ಮತದಾನ ಜಾಗೃತಿ ಮೂಡಿಸುವುದು, ರಾಷ್ಟ್ರೀಯ ವಿಚಾರಗಳಿಗೆ ಮನ್ನಣೆ ನೀಡುವ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಥರ್ಡ್ ಪಾರ್ಟಿ ಕ್ಯಾಂಪೇನ್ ಮಾಡೋದೇ ಆರ್.ಎಸ್ ಎಸ್ ಉದ್ದೇಶವಾಗಿದೆ.

ಕಳೆದ ಬಾರಿ 2014 ರ ಲೋಕಸಭೆ ಚುನಾವಣೆಯಲ್ಲಿ ಸಂಘ ಪರಿವಾದ ವಿವಿಧ ಸಂಘಟನೆಗಳು ಹೆಚ್ಚು ಗಂಭೀರತೆಯಿಂದ ಪ್ರಚಾರ ನಡೆಸಿದ್ದವು. ಆದರೆ ಈ ಬಾರಿ ಮೋದಿಯವರಿಗೆ ಚುನಾವಣೆಯಲ್ಲಿ ಕೊಂಚ ಮಟ್ಟಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಆರ್.ಎಸ್ ಎಸ್ ಆಂತರಿಕ ಸಮೀಕ್ಷೆಯಿಂದ ತಿಳಿದಿದೆ. ಹೀಗಾಗಿ ಈ ಬಾರಿ ಮತ್ತಷ್ಟು ಗಂಭೀರತೆಯಿಂದ ಕ್ಯಾಂಪೇನ್ ಮಾಡಲು ಆರ್.ಎಸ್ ಎಸ್ ನಿರ್ಧರಿಸಿದೆ ಎನ್ನಲಾಗ್ತಿದೆ.

ಅಗಸ್ಟ್ 29 ರಿಂದ ಆರಂಭವಾಗಲಿರುವ ಸಮನ್ವಯ ಸಭೆಯಲ್ಲಿ ಬಿಜೆಪಿ ಹಾಗೂ ಸಂಘಪರಿವಾರದ 35 ಕ್ಕೂ ಹೆಚ್ಚು ಸಂಘಟನೆಗಳು ಭಾಗಿಯಾಗಲಿವೆ. ಎಲ್ಲರೂ ಒಟ್ಟಿಗೆ ಸೇರಿ ರಣತಂತ್ರಗಳನ್ನು ರೂಪಿಸಲಾಗುತ್ತದೆ. ಆರ್.ಎಸ್ ಎಸ್ ಸರಸಂಘಚಾಲಕ ಮೋಹನ್ ಭಾಗವತ್, ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಅಮಿತ್ ಷಾ ಸೇರಿ ಅನೇಕ ನಾಯಕರು ಸಭೆಯಲ್ಲಿ ಚಿಂತನ ಮಂಥನ ನಡೆಸಲಿದ್ದಾರೆ.

ಈ ಸಭೆಯಲ್ಲಿ ಅಮಿತ್ ಷಾ ಲೋಕಸಭೆ ಚುನಾವಣೆಯ ನಡೆಸಿರುವ ತಯಾರಿ ವಿವರವನ್ನು ಸಭೆಯ ಮುಂದಿಡಲಿದ್ದಾರೆ. ದೇಶದ ಸಾಂಸ್ಕೃತಿಕ, ರಾಜಕೀಯ ಹಾಗೂ ಆರ್ಥಿಕ ವಿಧ್ಯಮಾನಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ದಕ್ಷಿಣ ಭಾರತದಲ್ಲಿ ಕಮಲ ಅರಳಿಸುವ ಕುರಿತು ಮಹತ್ವದ ಚರ್ಚೆ ನಡೆಯುವ ಸಾಧ್ಯತೆ ಇದೆ.

ಬೂತ್ ಮಟ್ಟದಲ್ಲಿ ಸಂಘಟನೆ, ಆರ್.ಎಸ್ ಎಸ್ ತತ್ವ ಸಿದ್ದಾಂತಗಳ ಯಶಸ್ವಿ ಅನುಷ್ಠಾನ ಇತ್ಯಾದಿ ವಿಚಾರಗಳ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ. ಕರ್ನಾಟಕದಲ್ಲಿ ಬಿಜೆಪಿ ಪ್ರಭಲವಾಗಿದೆ. ಆದರೆ ತಮಿಳುನಾಡು, ಆಂದ್ರ, ತೆಲಂಗಾಣ, ಕೇರಳದಲ್ಲಿ ಅಸ್ತಿತ್ವ ಬಲಪಡಿಸುವ ಬಗೆ ಹೇಗೆ ಎಂಬ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಗಳಿವೆ

ಅಲ್ಲದೇ ಕರ್ನಾಟಕದ ರಾಜಕೀಯದ ಬಗ್ಗೆ ಸಮನ್ವಯ ಸಭೆಯಲ್ಲಿ ಚರ್ಚೆಯಾಗೋದು ಪಕ್ಕಾ ಆಗಿದೆ. ಕಾಂಗ್ರೆಸ್ – ಜೆಡಿಎಸ್ ಮೈತ್ರಿಯಿಂದ ಪಕ್ಷಕ್ಕೆ ರಾಜ್ಯದಲ್ಲಿ ಎದುರಾಗುವ ಸವಾಲುಗಳ ಬಗ್ಗೆ ಮಹತ್ವದ ಚರ್ಚೆ ನಡೆಯಬಹುದು. ಸದ್ಯ ಅಪರೇಶನ್ ಕಮಲ ಮಾಡಿ ಮೈತ್ರಿ ಸರ್ಕಾರ ಕೆಡುವೋದು ಬೇಡ ಎಂಬ ಸೂಚನೆ ಅಮಿತ್ ಷಾರಿಂದ ಯಡಿಯೂರಪ್ಪನವರಿಗೆ ಸಿಕ್ಕಿದೆ. ಹೀಗಾಗಿ ಬಿ.ಎಸ್.ವೈ ಕೂಡಾ ಸದ್ಯ ಲೋಕಸಭೆ ಚುನಾವಣೆಯತ್ತ ಗಮನ ಹರೆಸಿದ್ದಾರೆ. ಈ ಎಲ್ಲಾ ಬೆಳವಣಿಗೆ ಎಲ್ಲಿಗೆ ಬಂದು ನಿಲ್ಲುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ವರದಿ : ಪವನ್‌ ಕುಮಾರ್, ಪೊಲಿಟಿಕಲ್ ಬ್ಯೂರೋ, ಟಿವಿ5

Next Story

RELATED STORIES