ಗೋಕರ್ಣ ದೇವಾಲಯ ಹಸ್ತಾಂತರ ವಿಚಾರ : ರಾಮಚಂದ್ರಪುರ ಮಠಕ್ಕೆ ಹಿನ್ನಡೆ

ಬೆಂಗಳೂರು : ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿ, ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಈ ಕುರಿತು ಶುಕ್ರವಾರ ಪ್ರಕರಣ ವಿಚಾರಣೆಯನ್ನು ಕೈಗೆತ್ತಿಕೊಂಡ ಹೈಕೋರ್ಟ್ ವಿಭಾಗೀಯ ಪೀಠ, ಸರ್ಕಾರ ದೇಗುಲವನ್ನು ರಾಮಚಂದ್ರಾಪುರಕ್ಕೆ ಹಸ್ತಾಂತರಿಸುವ ಆದೇಶವನ್ನು ರದ್ದುಗೊಳಿಸಿ, ಮಹತ್ವದ ತೀರ್ಪನ್ನು ಕಾಯ್ದಿರಿಸಿದೆ.
2018ರಂದು ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿ ಸರ್ಕಾರ ಆದೇಶ ಹೊರಡಿಸಿತ್ತು.
ಈ ಕುರಿತು ಬಾಲಚಂದರ ದೀಕ್ಷಿತ್, ನರಹರಿ ಕೃಷ್ಣ ಹೆಗಡೆ ಎಂಬುವರು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು.
ಈ ಅರ್ಜಿಯಲ್ಲಿ ಧಾರ್ಮಿಕ ದತ್ತಿ ಇಲಾಖೆ ಪಟ್ಟಿಯಿಂದ ಗೋಕರ್ಣ ಮಹಾಬಲೇಶ್ವರ ದೇವಾಲಯ ಸರ್ಕಾರ ಕೈ ಬಿಟ್ಟಿದ್ದು ಸರಿಯಲ್ಲ. ರಾಜ್ಯ ಸರ್ಕಾರದ ಆದೇಶದಲ್ಲಿ ಲೋಪದೋಷಗಳಿವೆ ಎಂದು ಪ್ರಶ್ನಿಸಲಾಗಿತ್ತು.
ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ನ ನ್ಯಾಯಮೂರ್ತಿ ಅರವಿಂದ್ ಕುಮಾರ್, ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ, ಗೋಕರ್ಣ ಧಾರ್ಮಿಕ ದತ್ತಿ ದೇಗುಲವಾಗಿ ಮುಂದುವರೆಯಬೇಕು ಎಂದು ತಿಳಿಸಿದೆ. ಅಲ್ಲದೇ ತಕ್ಷಣವೇ ಉಸ್ತುವಾರಿ ಸಮಿತಿ ರಚಿಸಲು ಆದೇಶಿಸಿದೆ.
ಈ ಸಂಬಂಧ ತಕ್ಷಣವೇ ಗೋಕರ್ಣ ದೇವಸ್ಥಾನಕ್ಕೆ ಉಸ್ತುವಾರಿ ಸಮಿತಿಯನ್ನು ರಚಿನೆ ಮಾಡಿದ ಹೈಕೋರ್ಟ್, ಗೋಕರ್ಣ ದೇವಸ್ಥಾನಕ್ಕೆ ಡಿಸಿ ನೇತೃತ್ವದಲ್ಲಿ ಉಸ್ತುವಾರಿ ಸಮಿತಿ ರಚಿಸಿದೆ. ಈ ಸಮಿತಿಗೆ ಸಲಹೆಗಾರರನ್ನಾಗಿ ಸುಪ್ರೀಂ ಕೋರ್ಟ್ನ ನಿವೃತ್ಯ ನ್ಯಾಯಮೂರ್ತಿ ಬಿ ಎನ್ ಶ್ರೀಕೃಷ್ಣ ನೇಮಕ ಮಾಡಿದೆ.
ಈ ಸಮಿತಿ ಸೆಪ್ಟಂಬರ್ 10ರಿಂದ ಅಸ್ತಿತ್ವಕ್ಕೆ ಬರುತ್ತಿದ್ದು, ಸಮಿತಿಯ ಕೆಳಗೆ ಬರುವವರೆಗೆ ಮಠದ ಉಸ್ತುವಾರಿಯಲ್ಲಿಯೇ ಮುಂದುವರೆಯುವಂತೆ ಸೂಚಿಸಿದೆ.
ಹೀಗಾಗಿ ದೇವಾಲಯದ ಸ್ಥಿರಾಸ್ತಿ, ಚರಾಸ್ಥಿ ಪಟ್ಟಿ ತಯಾರಿಸಿ, ಎರಡು ವಾರದಲ್ಲಿ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಹೈಕೋರ್ಟ್ ವಿಭಾಗೀಯ ಪೀಠ ಆದೇಶಿಸಿದೆ.
ಈ ಹಿನ್ನಲೆಯಲ್ಲಿ ಗೋಕರ್ಣದ ಮಹಾಬಲೇಶ್ವರ ದೇವಾಲಯದ ಲೆಕ್ಕಪತ್ರಗಳನ್ನು ಸಮಿತಿಗೆ ನೀಡುವಂತೆಯೂ ರಾಮಚಂದ್ರಾಪುರ ಮಠಕ್ಕೆ ನ್ಯಾಯಮೂರ್ತಿ ಅರವಿಂದ್ ಕುಮಾರ್, ನ್ಯಾ.ಬಿ.ವಿ.ನಾಗರತ್ನ ಅವರಿದ್ದ ಪೀಠ ಸೂಚಿಸಿದೆ.
ಈ ಮೂಲಕ ಹೈಕೋರ್ಟ್ನಲ್ಲಿ ರಾಮಚಂದ್ರಾಪುರ ಮಠಕ್ಕೆ ಹಿನ್ನಲೆಯಾಗಿದ್ದು, ಮರಳಿ ಗೋಕರ್ಣ ಮಹಾಬಲೇಶ್ವರ ದೇವಾಲಯ ಸರ್ಕಾರದ ಅಡಿಯಲ್ಲೇ ನಡೆದುಕೊಂಡು ಹೋಗುವಂತಾಗಿದೆ.
ಇದೀಗ ಸದ್ಯಕ್ಕೆ ರಾಮಚಂದ್ರಾಪುರ ಮಠದ ಮುಂದಿರುವ ಆಯ್ಕೆ, ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುವುದು. ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದು, ಅರ್ಜಿಯನ್ನು ತಿರಸ್ಕರಿಸಿದರೇ, ಮಠದಿಂದ ಗೋಕರ್ಣ ದೇವಾಲಯ ಮರಳಿ ಸರ್ಕಾರದ ಕೈ ಸೇರಲಿದೆ.