Top

ಸುಗಮ ಆಡಳಿತಕ್ಕೆ ಸರ್ಕಾರದ ಚಾಟಿ : ಎಲ್ಲಾ ಡಿಸಿ, ಸಿಇಒಗಳಿಗೆ ಸೂಚನೆ

ಬೆಂಗಳೂರು : ರಾಜ್ಯದ ಆಡಳಿತಕ್ಕೆ ಚುರುಕು ಮುಟ್ಟಿಸುವ ಸಲುವಾಗಿ, ರಾಜ್ಯ ಸರ್ಕಾರ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದೆ. ಪ್ರತಿ ತಿಂಗಳು ಸಾರ್ವಜನಿಕ ಸಂಪರ್ಕ ಸಭೆ ನಡೆಸುವಂತೆ ಸೂಚಿಸಿದೆ.

ಈ ಕುರಿತು ಸುತ್ತೋಲೆ ಹೊರಡಿಸಿರುವ ರಾಜ್ಯ ಸರ್ಕಾರ, ಎಲ್ಲಾ ಜಿಲ್ಲೆಯ ಡಿಸಿ, ಜಿಲ್ಲಾಪಂಚಾಯ್ತಿ ಸಿಇಒಗಳಿಗೆ ಆದೇಶಿಸಿದೆ.

ತಿಂಗಳಲ್ಲಿ ಒಂದು ದಿನ ಸಾರ್ವಜನಿಕ ಸಂಪರ್ಕ ಸಭೆ, ತಾಲ್ಲೂಕು ಪ್ರವಾಸ, ಒಂದು ದಿನ ಹೋಬಳಿ ವಾಸ್ತವ್ಯ, ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ರಚಿಸುವುದು ಸೇರಿದಂತೆ 19 ಸೂಚನೆಗಳನ್ನು ರವಾನಿಸಿದೆ.

ರಾಜ್ಯ ಸರ್ಕಾರ ತ್ವರಿತ ಆಡಳಿತಕ್ಕೆ ಅಧಿಕಾರಿಗಳಿಗೆ ಸೂಚಿಸಿದ 19 ಸೂಚನೆಗಳು..

  1. ಎಲ್ಲಾ ಜಿಲ್ಲಾಧಿಕಾರಿಗಳು ತಿಂಗಳಿಗೆ ಪ್ರತಿ ತಾಲ್ಲೂಕಿನಲ್ಲಿ ಒಂದು ಸಮೀಕ್ಷಾ ಸಭೆಯನ್ನು ಹಾಗೂ ಸಾರ್ವಜನಿಕ ಸಂಪರ್ಕ ಸಭೆಯನ್ನು ನಡೆಸಬೇಕು.
  2. ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಪ್ರತಿ ತಿಂಗಳಲ್ಲಿ ಒಂದು ವಾರ ತಾಲ್ಲೂಕುಗಳಿಗೆ ಪ್ರವಾಸ ಕೈಗೊಳ್ಳಬೇಕು
  3. ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಪ್ರತಿ ತಿಂಗಳಲ್ಲಿ ಒಂದು ದಿನ ಹೋಬಳಿ ವಾಸ್ತವ್ಯ ಮಾಡಬೇಕು.
  4. ಎಲ್ಲ ಜಿಲ್ಲಾಧಿಕಾರಿಗಳು ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗಕ್ಕಾಗಿ ಜಿಲ್ಲಾ ಮಟ್ಟದ ಒಂದು ಸಮನ್ವಯ ಸಮಿತಿಯನ್ನು ರಚಿಸಿ, ಸಭೆಗಳನ್ನು ನಡೆಸಬೇಕು.
  5. ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ವಸತಿ ಶಾಲೆಗಳಿಗೆ ತಿಂಗಳಿಗೆ ಒಂದು ದಿನ ಆಕಸ್ಮಿಕ ಭೇಟಿ ನೀಡಿ, ಮೂಲಭೂತ ಸೌಕರ್ಯಗಳನ್ನು ಕುರಿತು ಪರಾಮರ್ಶಿಸಬೇಕು.
  6. ಎಲ್ಲಾ ಜಿಲ್ಲಾಧಿಕಾರಿಗಳು ಬಂಡವಾಳ ಹೂಡಿಕೆಗಾರರಿಗೆ ಬೇಕಾಗುವ ಜಮೀನಿನ ಭೂ ಸ್ವಾಧೀನ ಪ್ರಕ್ರಿಯೆ ತ್ವರಿತಗೊಳಿಸಬೇಕು.
  7. ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಶಾಲ-ಕಾಲೇಜುಗಳ ಕಟ್ಟಡ ಮತ್ತು ಶಿಕ್ಷಕರ ಕೊರತೆ ಕುರಿತು ಪರಾಮರ್ಶಿಸಬೇಕು.
  8. ಎಲ್ಲ ಜಿಲ್ಲಾಧಿಕಾರಿಗಳು ನ್ಯಾಯಾಲಯ ಪ್ರಕರಣಗಳನ್ನು ಬೇಗ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು.
  9. ಎಲ್ಲ ಜಿಲ್ಲಾಧಿಕಾರಿಗಳು ನಿವೇಶನ ರಹಿತ ವ್ಯಕ್ತಿಗಳಿಗೆ ನಿವೇಶನ ನೀಡಲು ಸರ್ಕಾರಿ ಜಮೀನನ್ನು ಕಾಯ್ದಿರಿಸಬೇಕು.
  10. ಎಲ್ಲಾ ಜಿಲ್ಲಾಧಿಕಾರಿಗಳು ವಸತಿ ಯೋಜನೆಗಳಿಗೆ ಬೇಕಾಗುವ ಭೂ ಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಹಾಗೂ ಎರಡು ತಿಂಗಳಲ್ಲಿ ಅಂದರೇ 30ನೇ ಸೆಪ್ಟಂಬರ್ 2018ರೊಳಗೆ ಎಷ್ಟು ಜಮೀನು ಬೇಕೆಂಬ ವರದಿಯನ್ನು ವಸತಿ ಇಲಾಖೆಯ ಕಾರ್ಯದರ್ಶಿಗೆ ನೀಡಬೇಕು.
  11. ಎಲ್ಲ ಜಿಲ್ಲಾಧಿಕಾರಿಗಳು ವಸತಿ ಶಾಲೆ, ಆಸ್ಪತ್ರೆ ಇತ್ಯಾದಿಗಳಿಗೆ ಜಮೀನು ಒದಗಿಸುವುದಕ್ಕಾಗಿ 31ನೇ ಆಗಸ್ಟ್‌ 2018ರೊಗಳೆ ಗುರುತಿಸಬೇಕು
  12. ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಮಳೆ ಅನಾಹುತದಿಂದ ಹಾನಿಗೀಡಾದ ಬಾಕಿ ಮನೆಗಳಿಗೆ ತುರ್ತಾಗಿ ಪರಿಹಾರ ನೀಡುವುದು.
  13. ರಸ್ತೆ, ರೈಲ್ವೆ ಇತ್ಯಾದಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂ ಸ್ವಾಧೀನ ತ್ವರಿತಗೊಳಿಸಬೇಕು.
  14. ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಸರ್ಕಾರಿ ಶಾಲೆಗಳ ಪ್ರದೇಶಗಳಲ್ಲಿ ಎರಡು ಅಥವಾ ಹೆಚ್ಚಿನ ಮಹಡಿಯ ಹಾಸ್ಟೆಲ್‌ಗಳನ್ನು ನಿರ್ಮಿಸಲು ನಿವೇಶನ ಒದಗಿಸಬೇಕು.
  15. ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ತಮ್ಮ ಕಚೇರಿಗಳಲ್ಲಿನ ಅತಿ ಅಗತ್ಯವಿರುವ ಖಾಲಿ ಹುದ್ದೆಗಳ ಪಟ್ಟಿಯನ್ನು ಕಳುಹಿಸಬೇಕು.
  16. ಎಲ್ಲಾ ಪ್ರಾದೇಶಿಕ ಆಯುಕ್ತರು ಮಾಸಿಕ ಸಮೀಕ್ಷಾ ಸಭೆಗಳನ್ನು ನಡೆಸಬೇಕು.
  17. ಎಲ್ಲಾ ಜಿಲ್ಲಾಧಿಕಾರಿಗಳು ಒತ್ತುವರಿ ತೆರವುಗೊಳಿಸಿದ ಜಮೀನುಗಳಿಗೆ ಬೇಲಿ ಹಾಕುವುದು.
  18. ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಎಸ್‌ಡಿಆರ್‌ಎಫ್‌ ಅಡಿ, ಕಾಲು ಸಂಕಗಳ ರಪೇರಿಯನ್ನು ಕೈಗೆತ್ತಿಕೊಳ್ಳುವುದು.
  19. ಘನತ್ಯಾಜ್ಯ ಘಟಕಗಳಿಗೆ ನಗರ/ಪಟ್ಟಣಗಳ ಸುತ್ತಮುತ್ತ ಜಮೀನು ಮಂಜೂರು ಮಾಡುವುದು.

ಈ ಎಲ್ಲಾ ಅಂಶಗಳನ್ನು ಕಳೆದ 30-07-2018ರಿಂದ 31-07-2018ರಂದು ನಡೆದ ಎಲ್ಲಾ ಜಿಲ್ಲಾಧಿಕಾರಿಗಳ ಹಾಗೂ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿಲಾಗಿದೆ. ಹೀಗಾಗಿ ಇಂತಹ ಅಂಶಗಳನ್ನು ತ್ವರಿತ ಕ್ರಮಕ್ಕಾಗಿ ಇದೀಗ ಸರ್ಕಾರ ಸೂತ್ತೋಲೆ ಹೊರಡಿಸಿ ಸೂಚಿಸಿದೆ.

ಈ ಮೂಲಕ ರಾಜ್ಯದ ಸುಗಮ ಆಡಳಿತಕ್ಕೆ, ತ್ವರಿತ ಸರ್ಕಾರಿ ಕೆಲಸಗಳು ಸಾರ್ವಜನಿಕ ಸ್ನೇಹಿ ಆಗುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ಆದರೇ ಈ ಎಲ್ಲಾ ಅಂಶಗಳನ್ನು ಅಧಿಕಾರಿಗಳು ಪಾಲಿಸುತ್ತಾರಾ.? ಈ ಮೂಲಕ ಜನಸ್ನೇಹಿ ಆಡಳಿತಕ್ಕೆ ಕೈ ಜೋಡಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Next Story

RELATED STORIES