Top

ರಾಜ್ಯ ಕಾಂಗ್ರೆಸ್ ನಾಯಕರಿಗೆ ಆಪರೇಷನ್ ಕಮಲದ ಭಯ.?

ವಿಶೇಷ ವರದಿ : ಶಿವಕುಮಾರ್ ಜೋಹಳ್ಳಿ, ಪೊಲಿಟಿಕಲ್ ಬ್ಯೂರೋ, ಟಿವಿ5 ಬೆಂಗಳೂರು

ಒಂದು ಕಡೆ ಸಂಪುಟ ವಿಸ್ತರಣೆ ಮಾಡಲಿಲ್ಲವೆಂಬ ಸ್ವಪಕ್ಷೀಯ ಶಾಸಕರ ಒತ್ತಡ.. ಮತ್ತೊಂದು ಕಡೆ ಬಿಜೆಪಿಯ ಆಪರೇಷನ್ ಕಮಲದ ಭಯ ಕಾಂಗ್ರೆಸ್ ನಾಯಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.. ಯಾವ ಕ್ಷಣದಲ್ಲಿ ಏನಾಗುತ್ತದೋ,ಸಮ್ಮಿಶ್ರ ಸರ್ಕಾರಕ್ಕೆ ಎಲ್ಲಿ ಧಕ್ಕೆ ಬರುತ್ತದೋ, ನಮ್ಮ ಶಾಸಕರು ಎಲ್ಲಿ ಬಿಜೆಪಿ ಕಡೆ ಮುಖಮಾಡ್ತಾರೋ ಎಂಬ ಅನುಮಾನ ತೀರ್ವ ಚಿಂತೆಗೀಡು ಮಾಡಿದೆ. ಈ ಎಲ್ಲ ಅನುಮಾನ, ಆತಂಕಗಳಿಗೆ ತಡೆಯೊಡ್ಡೋದು ಹೇಗೆ ಅಂತ ಕೈನಾಯಕರು ರಹಸ್ಯ ಕಾರ್ಯತಂತ್ರಗಳಿಗೆ ಮುಂದಾಗಿದ್ದಾರೆ.

ದೋಸ್ತಿ ಸರ್ಕಾರ ಉರುಳಿಸಲು ಬಿಜೆಪಿ ಮಾಸ್ಟರ್ ಪ್ಲಾನ್ : ನಾಯಕರಿಗೆ ಬಿಜೆಪಿ ಹೈಕಮಾಂಡ್ ಬಿಗ್ ಟಾಸ್ಕ್

ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ರಾಷ್ಟ್ರೀಯ ನಾಯಕರು ಮಾಸ್ಟರ್ ಪ್ಲಾನ್ ರೆಡಿಮಾಡಿದ್ದಾರೆ.. ಸೆಪ್ಟಂಬರ್ ಮಾಸಾಂತ್ಯದೊಳಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ನ 15 ಶಾಸಕರನ್ನ ಮನವೊಲಿಸುವಂತೆ ಐವರು ಬಿಜೆಪಿ ನಾಯಕರಿಗೆ ಟಾರ್ಗೆಟ್ ನೀಡಿದ್ದಾರೆಂಬ ಮಾಹಿತಿ ಹೊರಬಿದ್ದಿದೆ.. ಉತ್ತರದ ಮೂವರು ಹಾಗೂ ದಕ್ಷಿಣದ ಇಬ್ಬರು ಬಿಜೆಪಿ ಮುಖಂಡರಿಗೆ ಕಾರ್ಯಾಚರಣೆ ನಡೆಸುವಂತೆ ರಾಷ್ಟ್ರೀಯ ನಾಯಕರು ಸೂಚಿಸಿದ್ದಾರೆನ್ನಲಾಗಿದೆ..

ಅನ್ಯ ಪಕ್ಷಗಳ ಶಾಸಕರ ಮನೋಸ್ಥಿತಿ ಅರಿತು, ಅವರ ಆಕಾಂಕ್ಷೆ ಪೂರೈಸಲು ಸಾಧ್ಯವಾಗುವಂತವರನ್ನ ಕರೆತರುವಂತೆ ತಿಳಿಸಲಾಗಿದೆಯಂತೆ.. ಜೊತೆಗೆ ಯಾವುದೇ ಕಾರಣಕ್ಕೂ ಬಲವಂತದ ರಾಜೀನಾಮೆ ನೀಡದೆ ಸ್ವಯಂಪ್ರೇರಿತರಾಗಿ ಬರುವಂತವರನ್ನ ಆಹ್ವಾನಿಸುವಂತೆ ಸೂಚನೆಯನ್ನೂ ನೀಡಲಾಗಿದೆ.. ಸೆಪ್ಟಂಬರ್ ಮಾಸಾಂತ್ಯದೊಳಗೆ ರಾಜ್ಯನಾಯಕರು ಶಿಕಾರಿ ನಡೆಸೋಕೆ ಸಾಧ್ಯವಾಗದಿದ್ದರೆ,ಹೈಕಮಾಂಡ್ ನೇರ ಎಂಟ್ರಿ ಕೊಡೋಕೆ ಮುಂದಾಗಿದೆಯಂತೆ...

ಆಪರೇಷನ್ ಕಮಲಕ್ಕೆ ಬೆಚ್ಚಿಬಿದ್ದ ಕೈ ನಾಯಕರು : ಆಪರೇಷನ್ ಕಮಲ ತಡೆಯಲು ಕಾರ್ಯತಂತ್ರ

ಇನ್ನು ಬಿಜೆಪಿಯ ಮಾಸ್ಟರ್ ತಂತ್ರಗಳ ಸುಳಿವನ್ನ ಅರಿತ ಕೈ ನಾಯಕರು ಇದೀಗ ತರಾತುರಿಯಲ್ಲಿ ಸಭೆ ನಡೆಸಿದ್ದಾರೆ... ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ಅಧ್ಯಕ್ಷ,ಉಪಾಧ್ಯಕ್ಷರ ನೇಮಕಮಾಡದೆ ಹೋದರೆ ಪಕ್ಷಕ್ಕೆ ನಷ್ಟ ಅನ್ನೋದು ಖಚಿತವಾಗಿದೆ... ಜೊತೆಗೆ ಎಂಬಿ ಪಾಟೀಲ್, ಬಿ.ಸಿ.ಪಾಟೀಲ್, ನಾರಾಯಣ್ ರಾವ್ ಸೇರಿ ಐದಾರು ಮಂದಿ ಈಗಾಗಲೇ ಬಿಜೆಪಿ ನಾಯಕರ ಸಂಪರ್ಕದಲ್ಲಿರೋದು ಕೈನಾಯಕರಿಗೆ ನುಂಗಲಾರದ ಬಿಸಿತುಪ್ಪವಾಗಿದೆ.

ಹೀಗಾಗಿಯೇ ನಿನ್ನೆ ಡಿಸಿಎಂ ಪರಂ, ಡಿಕೆಶಿ, ದಿನೇಶ್ ಗುಂಡೂರಾವ್ ಹಾಗೂ ಆರ್.ವಿ.ದೇಶಪಾಂಡೆ ಸಭೆಯನ್ನ ನಡೆಸಿದ್ದಾರೆ. ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕ ಮಾಡುವಂತೆ ಹೈಕಮಾಂಡ್ ಗೆ ಮನವರಿಕೆ ಮಾಡಿಕೊಡಬೇಕೆಂದು ಚರ್ಚಿಸಿದ್ದಾರೆ.. ಸಚಿವ ಸಂಪುಟ ವಿಸ್ತರಣೆಗೆ ಇಲ್ಲಿಯವರೆಗೂ ಕೆ.ಸಿ.ವೇಣುಗೋಪಾಲ್ ತಡೆಯೊಡ್ಡುತ್ತಿದ್ದು, ಶೀಘ್ರದಲ್ಲೇ ಪರಂ, ಸಿದ್ದು, ದಿನೇಶ್ ದೆಹಲಿಗೆ ಹಾರಲಿದ್ದಾರೆ.. ಅಲ್ಲಿ ಆಪರೇಷನ್ ಕಮಲದ ಬಗ್ಗೆ ರಾಹುಲ್ ಗೆ ಮನವರಿಕೆ ಮಾಡಿಕೊಡಲು ಮುಂದಾಗಿದ್ದಾರೆ.

ನಿನ್ನೆ ನಡೆದ ಸಭೆಯಲ್ಲಿ ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಂಡ್ ರೈಸಿಂಗ್ ಬಗ್ಗೆಯೂ ಚರ್ಚೆಯಾಗಿದೆ.. ಲೋಕಸಭಾ ಚುನಾವಣೆಗೆ ನೀವೇ ಫಂಡ್ ಕಲೆಕ್ಟ್ ಉಸ್ತುವಾರಿ ವಹಿಸಬೇಕೆಂದು ಡಿಸಿಎಂ ಪರಂಗೆ ಹೈಕಮಾಂಡ್ ಜವಾಬ್ದಾರಿ ನೀಡಿದೆ.. ಹೀಗಾಗಿ ಸಚಿವರಿಂದ ಫಂಡ್ ಕಲೆಕ್ಟ್ ಮಾಡುವ ವಿಚಾರವನ್ನ ನಿನ್ನೆ ಪ್ರಸ್ತಾಪಿಸಲಾಗಿದೆ.. ಆದ್ರೆ ಸಿದ್ದು ಹೊರಗಿಟ್ಟು ಸಭೆ ನಡೆಸಿದ್ದಕ್ಕೆ ಜಾರ್ಜ್, ರಾಮಲಿಂಗಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ...

ಒಟ್ನಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ಇದೀಗ ಆಪರೇಷನ್ ಕಮಲದ ಭಯ ಪ್ರಾರಂಭವಾಗಿದೆ.. ತಮ್ಮವರನ್ನ ರಕ್ಷಿಸಿಕೊಳ್ಳುವ ಕೆಲಸವನ್ನ ಮಾಡಲೇಬೇಕಿದೆ.. ಹೀಗಾಗಿಯೇ ರಹಸ್ಯ ಸಭೆ ನಡೆಸಿದ್ದು, ರಾಹುಲ್ ಗಾಂಧಿ ಮುಂದೆ ಎಲ್ಲವನ್ನೂ ಪ್ರಸ್ತಾಪಿಸಲು ನಿರ್ಧರಿಸಿದ್ದಾರೆ.. ಮತ್ತೊಂದು ಕಡೆ ಎರಡೂ ಚುನಾವಣೆಗೆ ಫಂಡ್ ರೈಸಿಂಗ್ ಮಾಡುವ ವಿಚಾರದ ಬಗ್ಗೆಯೂ ತೀರ್ ತಲೆನೋವು ತಂದಿಟ್ಟಿದೆ.. ಕೆಲವರು ಫಂಡ್ ರೈಸಿಂಗ್ ಗೆ ಒಪ್ಪಿದ್ರೆ, ಕೆಲವರು ನಾವ್ಯಾಕೆ ಎಲ್ಲವನ್ನೂ ನೀಡ್ಬೇಕು ಅಂತ ಅಸಮಾಧಾನ ಹೊರಹಾಕಿದ್ದಾರಂತೆ.

Next Story

RELATED STORIES