ಈ ಗ್ರಾಮದಲ್ಲಿ ರಾತ್ರಿ ಆದ್ರೆ ಸಾಕು ಜನರಲ್ಲಿ ಏನೋ ಆತಂಕ.!!

ಬೆಳಗಾವಿ : ರಾತ್ರಿ ಆದ್ರೆ ಸಾಕು ಆ ಗ್ರಾಮದ ಜನರಲ್ಲಿ ಏನೋ ಆತಂಕ. ಯಾವಾಗ ಎಲ್ಲಿ ಕಲ್ಲು ಬೀಳುತ್ತೊ ಅನ್ನೊ ಭಯ. ಇದು ಭಾನಾಮತಿ ಕಾಟವೋ, ಅಥವಾ ಕಿಡಿಗೇಡಿಗಳ ಕಾಟವೊ ಎಂಬ ಗೊಂದಲದಲ್ಲಿ ರಾತ್ರಿ ಕಳೆಯುತ್ತಿದ್ದಾರೆ ಗ್ರಾಮಸ್ಥರು.
ಹೌದು ಹೀಗೆ ಆತಂಕದಲ್ಲಿ ದಿನದೂಡುತ್ತಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಮಾತಂಗಿ ಗಲ್ಲಿಯಲ್ಲಿ ನಡೆದಿದೆ. ಈ ಗ್ರಾಮದಲ್ಲಿ ರಾತ್ರಿ ಯಾದರೆ ಸಾಕು, ಗಲ್ಲಿಯ ಮನೆಗಳ ಮೇಲೆ ಕಲ್ಲು, ನಿಂಬೆಹಣ್ಣು, ಚಪ್ಪಲಿಗಳು ಬೀಳುತ್ತಿವೆ. ಇದರಿಂದ ಭಯಭೀತ ರಾಗಿರುವ ಜನರು ರಾತ್ರಿಯಿಡಿ ನಿದ್ರೆ ಮಾಡದೆ ಹೆದರಿಕೊಂಡು ಕಾಲ ಕಳೆಯುತ್ತಿದ್ದಾರೆ.
ಅಂದಾಹಾಗೇ, ಇಂತಹ ವಸ್ತುಗಳನ್ನು ಯಾರು ಏಸೆಯುತ್ತಿದ್ದಾರೆ ಎಂಬುದರ ಬಗ್ಗೆ ಯಾರಿಗೂ ಗೊತ್ತಿಲ್ಲ. ಇದು ಭಾನಾಮತಿಯ ಕಾಟ ಅಂತ ಕೆಲವರು ಅಂದ್ರೇ, ಮತ್ತೆ ಕೆಲವರು ಯಾರೋ ಮನುಷ್ಯರೇ ಹೀಗೆ ಮಾಡ್ತಾ ಇದ್ದಾರೆ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಮನುಷ್ಯರ ಬಗ್ಗೆ ಅನುಮಾನ ವ್ಯಕ್ತ ಪಡಿಸುವ ಗ್ರಾಮದ ವ್ಯಕ್ತಿಗಳ ಮನೆಯ ಮೇಲೆ ಅಂದು ರಾತ್ರಿ ಕಲ್ಲು, ನಿಂಬೆಹಣ್ಣು, ಚಪ್ಪಲಿಗಳೋ ಬೀಳುತ್ತಿವೆಯಂತೆ. ಹೀಗಾಗಿ ಕಲ್ಲು ಬೀಳುತ್ತಿರುವ ಬಗ್ಗೆ ಯಾರೂ ಚಕಾರ ಎತ್ತುವುದಿಲ್ಲ. ಈ ಮೂಲಕ ಗ್ರಾಮದಲ್ಲಿ ಭಯದಿಂದ ಜನರು ರಾತ್ರಿ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹಿಂದೆಯೂ ಕೆಲ ವರ್ಷಗಳ ಹಿಂದೆ ಇಂತದ್ದೇ ಘಟನೆ ನಡೆದಿತ್ತು. ಇದರಿಂದ ಹೆದರಿದ ಇಲ್ಲಿನ ನಿವಾಸಿಗಳು ಮನೆಯನ್ನೇ ತೊರೆದಿದ್ದರು. ಇದೀಗ ಇಂತಹ ಘಟನೆ ಮರುಕಳಿಸುವ ಮೂಲಕ, ಮತ್ತೆ ಆತಂಕವನ್ನು ಸೃಷ್ಠಿಸಿದೆ. ಈ ಮೂಲಕ ಜನರಲ್ಲಿ ಭಯವನ್ನು ಹುಟ್ಟು ಹಾಕಿದೆ.
ಈ ಬಗ್ಗೆ ಚಿಕ್ಕೋಡಿ ಪೊಲೀಸರಿಗೆ ಮಾಹಿತಿ ನೀಡಿದರೂ ರಾತ್ರಿ ಪೊಲೀಸರು ಬಂದು ಹೋಗುತ್ತಾದೆ. ಆನಂತ್ರ ಮನೆಗಳ ಮೇಲೆ ಕಲ್ಲುಗಳು, ಲಿಂಬೆ ಹಣ್ಣು ಹಾಗೂ ಚಪ್ಪಲಿಗಳು ಬೀಳುತ್ತಿವೆ ಎಂದು ಗ್ರಾಮದ ಜನರು ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಿನಲ್ಲಿ ಇದು ಭಾನಾಮತಿ ಕಾಟವೋ, ಇಲ್ಲಾ ಕಿಡಿಗೇಡಿಗಳ ಕೃತ್ಯವೋ ಗೊತ್ತಿಲ್ಲ. ಚಿಕ್ಕೋಡಿ ಪಟ್ಟಣದ ಮಾತಂಗಿ ಗಲ್ಲಿಯ ಜನರಂತು ಭಯ-ಭಿತರಾಗಿದ್ದಾರೆ. ಇನ್ನಾದರೂ ಪೊಲೀಸರು ತನಿಖೆ ನಡೆಸಿ ಪ್ರಕರಣದ ಸತ್ಯಾಸತ್ಯತೆಯನ್ನ ಬಯಲಿಗೆಳೆಯಬೇಕಾಗಿದೆ.
ವರದಿ : ರವೀಂದ್ರ ಚೌಗುಲೆ, ಟಿವಿ5 ಚಿಕ್ಕೋಡಿ