Top

ಮಕ್ಕಳ ಜೊತೆ ಶೌಚಾಲಯ ಶುಚಿಗೊಳಿಸಿದ ಶಿಕ್ಷಕರು.!!

ಮಕ್ಕಳ ಜೊತೆ ಶೌಚಾಲಯ ಶುಚಿಗೊಳಿಸಿದ ಶಿಕ್ಷಕರು.!!
X

ಶಿರಸಿ : ನಾವು ಸ್ವಚ್ಛ ಭಾರತದ ಕನಸು ಕಾಣುತ್ತಿದ್ದೇವೆ. ಶೌಚಾಲಯವೇ ಇಲ್ಲದ ಅದೆಷ್ಟೋ ಕುಟುಂಬಗಳು ಇನ್ನೂ ಇವೆ. ಆದರೂ ಸ್ವಚ್ಛ ಭಾರತದ ಕನಸು ನನಸಾಗೋ ಭರವಸೆ ಅಂತೂ ಇದ್ದೇ ಇದೆ. ಸ್ವಚ್ಛ ಭಾರತದ ಕನಸು ನನಸಾಗ ಬೇಕು ಅಂದ್ರೆ ಭವಿಷ್ಯದ ಮಕ್ಕಳು ಬದಲಾಗಬೇಕು. ಮಕ್ಕಳು ಪಾಠ ಕಲಿಬೇಕು ಅಂದ್ರೆ ಉತ್ತಮ ಶಿಕ್ಷಣ ಬೇಕು. ಈ ನಿಟ್ಟಿನಲ್ಲಿ ಮಕ್ಕಳೊಂದಿಗೆ ಬೆರೆತು ಸ್ವಚ್ಛತೆಯ ಪಾಠ ಹೇಳುತ್ತಿರುವ ಈ ಶಾಲೆ ಶಿಕ್ಷಕರು ನಿಜಕ್ಕೂ ಸ್ವಚ್ಛ ಭಾರತದ ರೂವಾರಿಗಳು.

ಹೌದು, ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗಣೇಶ ನಗರದಲ್ಲಿರುವ ಸರ್ಕಾರಿ ಪ್ರೌಢ ಶಾಲೆಯ ಸ್ವಚ್ಛತೆಯ ಪಾಠ ಇದು. ಇಲ್ಲಿನ ಶಿಕ್ಷಕರು ಕೇವಲ ಪಾಠಮಾಡಿ ಹೋಗೋದಿಲ್ಲ. ಮಕ್ಕಳ ಕೈಲೇ ತಮ್ಮ ಮನೆಯ ಟಾಯ್ಲೆಟ್ ಕ್ಲೀನ್ ಮಾಡಿಸೋ ಶಿಕ್ಷಕರಿರುವ ಈ ಕಾಲದಲ್ಲಿ ಮಕ್ಕಳ ಟಾಯ್ಲೆಟ್ ನ್ನು ಶಿಕ್ಷಕರೇ ಸ್ವಚ್ಛ ಮಾಡೋ ಮೂಲಕ ಇವರು ಮಾದರಿಯಾಗಿದ್ದಾರೆ.

ತೀರಾ ಹಿಂದುಳಿದ ವರ್ಗದ ಮಕ್ಕಳೇ ವಾಸವಿರೋ ಗಣೇಶನಗರದ ಶಾಲೆಯಲ್ಲಿ 120ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಸ್ವಚ್ಛತೆಯ ಅರಿವೇ ಇಲ್ಲದ ಈ ಮಕ್ಕಳಿಗೆ ನಿತ್ಯ ಸ್ನಾನ ಮಾಡೋದು, ಕೂದಲು ಬಾಚೋದು, ಬಟ್ಟೆಗೆ ಇಸ್ತ್ರಿ ಮಾಡೋದು, ಉಗುರನ್ನ ತೆಗೆಯೋ ಸಣ್ಣ ಪುಟ್ಟ ಸಂಗತಿಗಳನ್ನೂ ತಿಳಿ ಹೇಳುವ ಮೂಲಕ ಸ್ವಚ್ಛತೆಯಿಂದ ಇರಬೇಕೆಂದು ತಿಳಿಸಿಕೊಡಲಾಗುತ್ತದೆ. ಅಷ್ಟಕ್ಕೇ ಸುಮ್ಮನಾಗದೆ ಸ್ವತಃ ಬ್ರೆಶ್ ಹಿಡಿದು ಟಾಯ್ಲೆಟ್ ಕ್ಲೀನ್ ಮಾಡೋ ಮೂಲಕ ತಮ್ಮ ಬದ್ಧತೆಯನ್ನೂ ಇಲ್ಲಿನ ಶಿಕ್ಷಕರು ತೋರಿದ್ದಾರೆ.

ಹೆಣ್ಣು ಮಕ್ಕಳಿಗೆ ನೈಸರ್ಗಿಕವಾಗಿ ಇರುವ ಸಮಸ್ಯೆಗೂ ಪರಿಹಾರ ಕಂಡುಕೊಂಡಿವ ಶಿಕ್ಷಕರು ಪ್ಯಾಡ್ ಬರ್ನಿಂಗ್ ಯಂತ್ರವನ್ನೂ ಅಳವಡಿಸಿದ್ದಾರೆ. ಅದರ ಸಹಾಯದಿಂದ ಹೆಣ್ಣುಮಕ್ಕಳ ಗೌರವ ಕಾಪಾಡುವ ಕೆಲಸವನ್ನೂ ಮಾಡ್ತಿದ್ದಾರೆ. ಗಂಡು ಮಕ್ಕಳ ಶೌಚಾಲಯವನ್ನು ಶಿಕ್ಷಕರು, ಮಹಿಳೆಯರ ಶೌಚಾಲಯವನ್ನು ಶಿಕ್ಷಕಿಯರು ಸ್ವಚ್ಛ ಮಾಡುವ ಪರಿಪಾಠವನ್ನು ರೂಢಿಸಿಕೊಂಡಿದ್ದಾರೆ. ಪ್ರತಿ ಶನಿವಾರ ಸ್ವಚ್ಛತಾ ಕಾರ್ಯ ಮಾಡುತ್ತಿದ್ದಾರೆ. ನಮಗೆ ಟಾಯ್ಲೆಟ್ ಕ್ಲೀನ್ ಮಾಡೋದು ಅಂದ್ರೆ ನಮಗೆ ಹೇಸಿಗೆ ಅಲ್ಲ. ನಮ್ಮ ಮನೆಯ ಶೌಚಾಲಯ ಸ್ವಚ್ಛ ಮಾಡುವಂತೆ, ನಮ್ಮ ಮಕ್ಕಳು‌, ನಾವೆಲ್ಲ ಸೇರಿ ನಮ್ಮ ಶಾಲೆಯ ಶೌಚಾಲಯವನ್ನು ಸ್ವಚ್ಛ ಮಾಡೋದ್ರದಲ್ಲಿ ತಪ್ಪೇನಿಲ್ಲ ಅಂತಾರೆ ಶಿಕ್ಷಕರು.

ಸರ್ಕಾರ ನೀಡುವ ಅನುದಾನವನ್ನೇ ಬಳಸಿಕೊಂಡು ಫಿನಾಯಿಲ್, ಬ್ರೆಷ್ ಗಳನ್ನು ತರುತ್ತಾರೆ. ಶಾಲೆಯ ಆವರಣವನ್ನೂ ಕಸ ಮುಕ್ತ ಮಾಡಲಾಗಿದೆ. ಶಾಲೆಯಲ್ಲಿ ಬಾಳೆ, ಪೇರಲೆ, ಪಪ್ಪಾಯಿ ಹಣ್ಣಿನ ಗಿಡಗಳನ್ನೂ ಬೆಳೆಸಲಾಗಿದೆ. ಆ ಮೂಲಕ ಮಕ್ಕಳಿಗೆ ಜೀವನ ಪಾಠವನ್ನೂ ಕಲಿಸಲಾಗುತ್ತಿದೆ. ಗಾಂಧೀಜಿಯ ಸ್ವಚ್ಛತಾ ಆಶಯವೇ ನಮಗೆ ಸ್ಪೂರ್ತಿ. ನಮ್ಮ ಶಾಲೆ, ಮಕ್ಕಳು ಸ್ವಚ್ಛವಾಗಿರಬೇಕು ಎನ್ನುವ ಉದ್ದೇಶವೊಂದೇ ನಮ್ಮ ಆಶಯ ಎನ್ನುತ್ತಾರೆ ಶಾಲೆ ಮುಖ್ಯ ಶಿಕ್ಷಕ.

ಅದೇನೇ ಇರಲಿ ತಮ್ಮ ಮನೆಯ ಶೌಚಾಲಯವನ್ನೇ ಸ್ವಚ್ಚ ಮಾಡದ ಜನರಿರೋವಾಗ ಶಾಲೆಯ ಶಿಕ್ಷಕರ ಈ ನಡೆ ಮಾದರಿ. ಶಿಕ್ಷಕ ಬದಲಾದ್ರೆ ದೇಶ ಬದಲಾಗೋದು ಎನ್ನುವ ಮಾತು ಇಲ್ಲಿ ಸತ್ಯವಾಗಿ ಕಾಣುತ್ತಿದೆ. ಎಲ್ಲ ಶಾಲೆಯ ಶಿಕ್ಷಕರೂ ಇದೇ ರೀತಿ ಸ್ವಚ್ಛತೆಗೆ ಆದ್ಯತೆ ನೀಡಿದರೆ ಮೋದಿ ಕಂಡ ಸ್ವಚ್ಛ ಭಾರತ ನಿರ್ಮಾಣವಾಗೋದ್ರಲ್ಲಿ ಅನುಮಾನವೇ ಇಲ್ಲ.

ವರದಿ : ವಿನಾಯಕ್ ಹೆಗಡೆ ಟಿವಿ5, ಶಿರಸಿ.

Next Story

RELATED STORIES