Top

ಬುದ್ದಿಮಾಂದ್ಯನ ವಿಳಾಸ ಹುಡುಕಿಕೊಟ್ಟ ಆಧಾರ್.!

ಬುದ್ದಿಮಾಂದ್ಯನ ವಿಳಾಸ ಹುಡುಕಿಕೊಟ್ಟ ಆಧಾರ್.!
X

ಶಿವಮೊಗ್ಗ : ಯುವಕನನ್ನು ಬಸ್ ನಿಲ್ದಾಣದಲ್ಲಿ ರಕ್ಷಿಸಿದ್ದ ಸಾಗರದ ಯುವಕರು ಆತನ ವಿಳಾಸ ಪತ್ತೆಗೆ ಅನುಸರಿಸಿದ ವಿಧಾನ ಕೇಳಿದರೆ ಆಶ್ಚರ್ಯವಾಗದೇ ಇರದು. ಬಸ್ ನಿಲ್ದಾಣದಲ್ಲಿ ಅರೆಪ್ರಜ್ಞವಸ್ತೆಯಲ್ಲಿ ಬಿದ್ದಿದ್ದ ಬುದ್ದಿಮಾಂದ್ಯ ಯುವಕನನ್ನು ರಕ್ಷಿಸಿದ ಸಾಗರ ನಗರಸಭೆ ಸದಸ್ಯ ತಸ್ರೀಫ್ ಹಾಗೂ ಸ್ನೇಹಿತರು ಆತನಿಗೆ ಅಗತ್ಯ ಚಿಕಿತ್ಸೆಯನ್ನೂ ಕೊಡಿಸಿದ್ದರು. ಬಳಿಕ ಹೊಸನಗರ ತಾಲೂಕಿನ ಚಿಕ್ಕಜೇನಿಯಲ್ಲಿರುವ ಪ್ರಭಾಕರ್ ಎಂಬುವರ ಅನಾಥಾಶ್ರಮದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದರು.

ಅನಾಥಾಶ್ರಮದಲ್ಲಿ ಚೇತರಿಸಿಕೊಂಡ ಬುದ್ದಿಮಾಂದ್ಯ ಯುವಕ ತನ್ನ ಹೆಸರನ್ನು ಗೌರವ್ ಮಿಲಿಂದ್ ಪಾಟೀಲ್ ಎಂದು ಬರೆಯಲಾರಂಭಿಸಿದ್ದಾನೆ. ಬಳಿಕ ತನ್ನ ತಾಯಿ ಹೆಸರು ನಿರ್ಮಲಾ ಎಂದು ಹೇಳಿದ್ದಾನೆ. ಅದರ ಹೊರತಾಗಿ ಬುದ್ದಿಮಾಂದ್ಯನಿಗೆ ಏನೂ ಹೇಳಲು ಹಾಗೂ ಬರೆಯಲು ಬರುತ್ತಿರಲಿಲ್ಲ. ಆಗ ಬುದ್ದಿಮಾಂದ್ಯನನ್ನು ರಕ್ಷಿಸಿದವರು ಆತನ ವಿಳಾಸ ಪತ್ತೆಗೆ ಮುಂದಾಗಿದ್ದಾರೆ. ಅತನಿಗೆ ಕನ್ನಡ ಅರ್ಥವಾಗದಿದ್ದರಿಂದ ಆತ ಕರ್ನಾಟಕದವನಲ್ಲ ಎಂಬುದಂತೂ ಸ್ಪಷ್ಟವಾಗಿತ್ತು. ಪಾಟೀಲ್ ಎಂಬ ಸರ್ ಸೇಮ್ ಇದ್ದಿದ್ದರಿಂದ ಆತ ಮಹಾರಾಷ್ಟ್ರದವನು ಎಂದು ಅಂದಾಜಿಸಿದರು.

ಇದಾಗ ಬಳಿಕ ಆತನನ್ನು ಸಾಗರದ ಆಧಾರ್ ನೋಂದಣಿ ಕೇಂದ್ರಕ್ಕೆ ಕರೆದುಕೊಂಡು ಹೋಗಿ ವಿಳಾಸ ಪತ್ತೆ ಮಾಡಲು ಪ್ರಯತ್ನಿಸಿದರಾದರೂ ಅದು ಸಾಧ್ಯವಾಗಲಿಲ್ಲ. ಬಳಿಕ ಬುದ್ದಿಮಾಂದ್ಯ ಯುವಕನನ್ನು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಗೆ ಕರೆತಂದು ಜಿಲ್ಲಾಧಿಕಾರಿಗೆ ಆತನ ಮಾಹಿತಿ ನೀಡಲಾಯಿತು. ಜೊತೆಗೆ ಆಧಾರ್ ನಲ್ಲಿ ಯುವಕನ ಥಂಬ್ ಇಂಪ್ರೆಷನ್ ಮೂಲಕ ಆತನ ವಿಳಾಸ ಪತ್ತೆ ಮಾಡಲು ಸಾಧ್ಯವಿದೆಯೇ ಎಂಬುದನ್ನು ಪರಿಶೀಲಿಸಬೇಕೆಂದು ವಿನಂತಿಸಲಾಯಿತು.

ಆಗ ಜಿಲ್ಲಾಧಿಕಾರಿ ಲೊಕೇಶ್ ಅವರು ಆಧಾರ್​ ಕೇಂದ್ರದ ಅಧಿಕಾರಿಯನ್ನು ಕರೆದು ಆಧಾರ್ ಮೂಲಕ ಯುವಕನ ವಿಳಾಸ ಪತ್ತೆ ಮಾಡಲು ಸೂಚಿಸಿದರು. ಬುದ್ದಿಮಾಂದ್ಯ ಯುವಕ ಆಧಾರ್ ನಲ್ಲಿ ಥಂಬ್ ಇಂಪ್ರೆಷನ್ ಮಾಡಿದಾಗ ಅದು ಆಕ್ಸೆಸ್ ಆಗುತ್ತಿತ್ತು. ಆದರೆ ಹೆಸರು ಮ್ಯಾಚ್ ಆಗದಿದ್ದರಿಂದಾಗಿ ವಿಳಾಸ ಪ್ರಕಟವಾಗುತ್ತಿರಲಿಲ್ಲ. ಹಲವು ಬಾರಿ ಪ್ರಯತ್ನಿಸಿದರೂ ಯಾವುದೇ ಯಶಸ್ಸು ಸಿಗಲಿಲ್ಲ. ಆದರೆ ಯುವಕನಿಗೆ ಆಧಾರ್ ಕಾರ್ಡ್ ಮಾಡಿಸಲಾಗಿದೆ ಎಂಬುದಂತೂ ಸ್ಪಷ್ಟವಾಗಿತ್ತು. ಆಗ ಬುದ್ದಿಮಾಂದ್ಯ ಯುವಕನ ಹೆಸರಿನಲ್ಲೇ ಇನ್ನೊಂದು ಆಧಾರ್ ಕಾರ್ಡ್ ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಆಧಾರ್ ಕಾರ್ಡ್ ಕೇಂದ್ರದಲ್ಲೇ ಅರ್ಜಿ ಹಾಕಲಾಯಿತು.

ಒಮ್ಮೆ ಆಧಾರ್ ಕಾರ್ಡ್ ಜೆನರೇಟ್ ಆಗಿದ್ದರೆ ಮತ್ತೆ ಆಧಾರ್ ಕಾರ್ಡ್ ಮಾಡಿಸಲು ಬರುವುದಿಲ್ಲ. ಒಂದು ವೇಳೆ ಮತ್ತೆ ಅರ್ಜಿ ಹಾಕಿದರೂ ಅರ್ಜಿ ಅಂತರ್ಜಾಲದಲ್ಲೇ ವಜಾ ಆಗುತ್ತದೆ. ಜೊತೆಗೆ ವಜಾ ಆಗಲು ಸೂಕ್ತ ಕಾರಣವನ್ನೂ ನೀಡಲಾಗುತ್ತದೆ. ಇನ್ನೊಮ್ಮೆ ಆಧಾರ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದರೆ ಅರ್ಜಿ ಹೇಗೂ ವಜಾ ಆಗುತ್ತದೆ. ಜೊತೆಗೆ ಈ ಥಂಬ್ ಇಂಪ್ರೆಷನ್ ನಲ್ಲಿ ಯಾವ ಊರಿನಲ್ಲಿ ಆಧಾರ್ ಕಾರ್ಡ್ ಪಡೆಯಲಾಗಿದೆ ಎಂಬ ವಿಳಾಸ ಸಿಗುತ್ತದೆ ಎಂಬ ನಿರೀಕ್ಷೆ ಮೇರೆಗೆ ಅರ್ಜಿ ಸಲ್ಲಿಸಲಾಯಿತು.

ತೌಸ್ರೀಫ್ ಹಾಗೂ ಪ್ರಭಾಕರ್ ಅವರ ನಿರೀಕ್ಷೆಯಂತೆ ಅರ್ಜಿ ಸಲ್ಲಿಸಿದ ಏಳೇ ದಿನದಲ್ಲಿ ಬುದ್ದಿಮಾಂದ್ಯ ಯುವಕನ ಅರ್ಜಿ ವಜಾಗೊಂಡಿದೆ. ಜೊತೆಗೆ ಆ ಯುವಕನ ವಿಳಾಸ ಹಾಗೂ ಆತನ ಪಾಲಕರ ದೂರವಾಣಿ ಸಂಖ್ಯೆಯೂ ಪತ್ತೆಯಾಗಿದೆ. ಮಹಾರಾಷ್ಟ್ರ ರಾಜ್ಯದ ಜಲಂಗಾವ್ ಜಿಲ್ಲೆಯ ಬುದ್ದಿಮಾಂದ್ಯ ಯುವಕನ ಪಾಲಕರ ದೂರವಾಣಿ ಸಂಖ್ಯೆ ಸಿಗುತ್ತಿದ್ದಂತೆ ಆ ನಂಬರ್ ಗೆ ಕರೆ ಮಾಡಿದರೆ ಯಾರೂ ಫೋನ್ ರಿಸೀವ್ ಮಾಡಿಲ್ಲ. ಆಗ ಸ್ಥಳೀಯ ಪೊಲೀಸ್ ಠಾಣೆ ನಂಬರ್ ಪಡೆದು ಪೊಲೀಸರಿಗೆ ಮಾಹಿತಿ ನೀಡಿದಾಗ ಬುದ್ದಿಮಾಂದ್ಯ ಯುವಕ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಜತೆಗೆ ಬುದ್ದಿಮಾಂದ್ಯ ಯುವಕನ ಪಾಲಕರಿಗೂ ಪೊಲೀಸರೇ ವಿಷಯ ಮುಟ್ಟಿಸಿದ್ದಾರೆ.

ಕಳೆದು ಹೋದ ಮಗನನ್ನು ಹುಡುಕಿ ಹೈರಾಣಾಗಿ ಹೋಗಿದ್ದ ಆತನ ತಂದೆ ತಾಯಿ ಮಗನನ್ನು ಕರೆದುಕೊಂಡು ಹೋಗಲು ಶಿವಮೊಗ್ಗ ಜಿಲ್ಲೆಯ ಸಾಗರಕ್ಕೆ ಆಗಮಿಸುತ್ತಿದ್ದು ಬುಧವಾರ ಮಧ್ಯಾಹ್ನ ಮಗನನ್ನು ತಮ್ಮ ಸುಪರ್ಧಿಗೆ ತೆಗೆದುಕೊಂಡು ಕರೆದೊಯ್ಯಲಿದ್ದಾರೆ.

ಅರೆಪ್ರಜ್ಞವಸ್ತೆಯಲ್ಲಿದ್ದ ಯುವಕನ್ನು ರಕ್ಷಿಸಿದ್ದೂ ಅಲ್ಲದೆ ತಮ್ಮ ಜಾಣ್ಮೆಯ ಮೂಲಕ ಬುದ್ದಿಮಾಂದ್ಯ ಯುವಕನ ಬಳಿ ಯಾವುದೇ ದಾಖಲೆಗಳಿಲ್ಲದಿದ್ದರೂ ಆಧಾರ್ ತಂತ್ರಜ್ಞನದ ಮೂಲಕ ಆತನ ಪಾಲಕರನ್ನು ಹುಡುಕಿದ ಸಾಗರ ಯುವಕರ ಕಾರ್ಯ ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೊಳಗಾಗಿದೆ.

ವರದಿ : ನವೀನ್​ ಪುರದಾಳ್,​ ಟಿವಿ5 ಶಿವಮೊಗ್ಗ

Next Story

RELATED STORIES