Top

6 ಮಂದಿಗೆ ಜೀವ ತುಂಬಿದ ಕಾರ್ಮಿಕ : ಹೇಗೆ ಗೊತ್ತಾ.?

6 ಮಂದಿಗೆ ಜೀವ ತುಂಬಿದ ಕಾರ್ಮಿಕ : ಹೇಗೆ ಗೊತ್ತಾ.?
X

ಮೈಸೂರು : ಮನೆಯೊಂದರ ಚಾವಣಿ ದುರಸ್ತಿ ಮಾಡುವಾಗ ಆಯತಪ್ಪಿ ಕೆಳಗೆ ಬಿದ್ದು ತೀವ್ರ ಗಾಯಗೊಂಡ ಕಾರ್ಮಿಕನಿಗೆ ಮತ್ತೆ ಮೇಲೆಳಲು ಸಾಧ್ಯವಾಗಲೇ ಇಲ್ಲ. ಆಸ್ಪತ್ರೆಯ ಬೆಡ್‌ನಲ್ಲಿ ಜೀವಚ್ಛವವಾಗಿ ಮಲಗಿದ್ದ ಆತ ಉಸಿರು ನಿಲ್ಲಿಸುವ ಮುನ್ನ ಆರು ಮಂದಿಗೆ ಬೆಳಕಾಗಿ ಸಾರ್ಥಕ್ಯ ಮೆರೆದರು.

ಬನ್ನೂರಿನ ಕೇತುಪುರ ಗ್ರಾಮದ ಕೂಲಿ ಕಾರ್ಮಿಕ 44 ವರ್ಷದ ಪುಟ್ಟೇಗೌಡ ಎಂಬವರೇ ತಮ್ಮ ಹೃದಯ ಸೇರಿದಂತೆ ದೇಹದ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಆರು ಮಂದಿಗೆ ಮರುಜನ್ಮ ನೀಡಿದವರು.

ಯಾವ್ಯಾವ ಅಂಗಾಂಗ ದಾನ ಗೊತ್ತಾ..?

ವೈದ್ಯರ ತಂಡ ಪುಟ್ಟೇಗೌಡ ಅವರ ಎರಡು ಕಾರ್ನಿಯಾ(ಕಣ್ಣುಗಳು), ಕೃತ್(ಲಿವರ್), ಎರಡು ಮೂತ್ರ ಪಿಂಡ(ಕಿಡ್ನಿ) ಮತ್ತು ಹೃದಯವನ್ನು ಬೇರ್ಪಡಿಸಿ ಎರಡು ಕಣ್ಣು ಮತ್ತು ಒಂದು ಮೂತ್ರ ಪಿಂಡವನ್ನು ಆಸ್ಪತ್ರೆಯಲ್ಲೇ ಉಳಿಸಿಕೊಂಡು, ಮತ್ತೊಂದು ಮೂತ್ರಪಿಂಡವನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ, ಯಕೃತ್ ಅನ್ನು ಆಸ್ಟರ್ ಆಸ್ಪತ್ರೆಗೆ, ಜೀವಂತ ಹೃದಯವನ್ನು ರಾಮಯ್ಯ ಆಸ್ಪತ್ರೆಗೆ ಕಳುಹಿಸಲಾಗಿದೆ.

ಭಾನುವಾರ ಬೆಳಗ್ಗೆ ಪುಟ್ಟೇಗೌಡರ ಜೀವಂತ ಹೃದಯ ಮತ್ತು ಇತರ ಅಂಗಾಂಗಗಳನ್ನು ಮೈಸೂರಿಂದ ಗ್ರೀನ್ ಕಾರಿಡಾರ್‌ನಲ್ಲಿ ಬೆಂಗಳೂರಿಗೆ ಆಂಬ್ಯುಲೆನ್ಸ್ ಮೂಲಕ ಕೊಂಡೊಯ್ಯಲಾಯಿತು. 140 ಕಿ.ಮೀ. ದೂರವನ್ನು ಕೇವಲ ಒಂದು ಗಂಟೆ 35 ನಿಮಿಷದೊಳಗೆ ಕ್ರಮಿಸಲಾಯಿತು. ದಾರಿಯುದ್ದಕ್ಕೂ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸುವ ಮೂಲಕ ಪೊಲೀಸರು ಈ ಪುಣ್ಯಕಾರ್ಯದಲ್ಲಿ ಭಾಗಿಯಾದರು.

ಘಟನೆ ನಡೆದದ್ದು ಹೀಗೆ...

ಜುಲೈ 27ರಂದು ನಜರ್‌ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಘವೇಂದ್ರನಗರದಲ್ಲಿ ಕೆಲಸ ಮಾಡುತ್ತಿದ್ದಾಗ 12 ಅಡಿ ಎತ್ತರದಿಂದ ಆಯತಪ್ಪಿ ಕೆಳಗೆ ಬಿದ್ದಿದ್ದ ಪುಟ್ಟೇಗೌಡ ಅವರ ತಲೆಗೆ ಗಂಭೀರ ಗಾಯವಾಗಿತ್ತು. ಅವರನ್ನು ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ಮೂತ್ರಪಿಂಡ ಶಾಸ್ತ್ರದ ಮುಖ್ಯಸ್ಥರಾದ ಡಾ.ಮಂಜುನಾಥ್ ಶೆಟ್ಟಿ ನೇತೃತ್ವದಲ್ಲಿ ವೈದ್ಯರು ಶ್ರಮ ವಹಿಸಿ ಚಿಕಿತ್ಸೆ ನೀಡಿದರೂ ಪುಟ್ಟೇಗೌಡ ಅವರ ಆರೋಗ್ಯ ಸ್ಥಿತಿಯಲ್ಲಿ ಸುಧಾರಿಸಲಿಲ್ಲ. ಶನಿವಾರ ಮಧ್ಯಾಹ್ನ ಅವರ ಮೆದುಳು ನಿಷ್ಕ್ರಿಯವಾಯಿತು.

ಇದನ್ನು ಗಮನಿಸಿದ ಡಾ.ಮಂಜುನಾಥ ಶೆಟ್ಟಿ ಅವರು ಪುಟ್ಟೇಗೌಡ ಅವರ ಕುಟುಂಬದವರಿಗೆ ಮಾಹಿತಿ ನೀಡಿ ಬದುಕುವ ಸಾಧ್ಯತೆ ಕಡಿಮೆ ಇರುವುದನ್ನು ತಿಳಿಸಿದ್ದಾರೆ. ಅಲ್ಲದೇ ಕುಟುಂಬದವರನ್ನು ಅಂಗಾಗ ದಾನ ಮಾಡುವಂತೆ ಮನವೊಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಪತ್ನಿ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿ ಪುಟ್ಟೇಗೌಡರ ಸಾವನ್ನು ಸಾರ್ಥಕಗೊಳಿಸಲು ಸಮ್ಮತಿಸಿದರು.

ಅಂಗಾಂಗ ರವಾನೆಗಾಗಿ ಗ್ರೀನ್‌ ಕಾರಿಡಾರ್‌

ಬೆಂಗಳೂರಿನ ರಾಮಯ್ಯ ಮತ್ತಿತರ ಆಸ್ಪತ್ರೆಗಳಲ್ಲಿನ ರೋಗಿಗಳಿಗೆ ಹೃದಯ ಸೇರಿದಂತೆ ವಿವಿಧ ಅಂಗಾಂಗಗಳು ಬೇಕಿದ್ದ ಹಿನ್ನೆಲೆಯಲ್ಲಿ ಆ ಆಸ್ಪತ್ರೆಗಳೊಂದಿಗೆ ಮಾತುಕತೆ ನಡೆಸಿ, ಅಂಗಾಂಗ ರವಾನೆಗೆ ಮೈಸೂರು ನಗರ ಪೊಲೀಸರ ಸಹಕಾರವನ್ನು ಕೋರಲಾಯಿತು.

ಭಾನುವಾರ ಮುಂಜಾನೆ 5 ಗಂಟೆಯಿಂದಲೇ ಮೈಸೂರು ನಗರ ಸಂಚಾರ ಪೊಲೀಸರು ಮೈಸೂರು ಜೆಎಸ್‌ಎಸ್ ಆಸ್ಪತ್ರೆಯಿಂದ ಬೆಂಗಳೂರು ರಸ್ತೆವರೆಗೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಜಾರಿಗೊಳಿಸಿ ಕರ್ತವ್ಯಕ್ಕೆ ಹಾಜರಾಗಿದ್ದರು. ಅಲ್ಲದೇ ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ ಹಾಗೂ ಬೆಂಗಳೂರು ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದು, ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಿಸಿದ್ದರು.

ಈ ಹಿನ್ನೆಲೆಯಲ್ಲಿ ಬೆಳಗ್ಗೆ 6.45ಕ್ಕೆ ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಯಿಂದ ಆ್ಯಂಬುಲೆನ್ಸ್‌ನಲ್ಲಿ ಹೊರಟ ಅಂಗಾಂಗಗಳು ಬೆಳಗ್ಗೆ 8.20ಕ್ಕೆ ಬೆಂಗಳೂರಿನ ರಾಮಯ್ಯ ಆಸ್ಪತ್ರೆ ತಲುಪಿತು.

ಕುಟುಂಬದ ಆಧಾರ ಸ್ತಂಭವಾಗಿದ್ದ ಪುಟ್ಟೇಗೌಡ

ಪುಟ್ಟೇಗೌಡರದು ಬಡ ಕೂಲಿ ಕಾರ್ಮಿಕ ಕುಟುಂಬವಾಗಿದ್ದು, ಕುಟುಂಬದ ಆಧಾರ ಸ್ತಂಭವನ್ನು ಕಳೆದುಕೊಂಡು ಪತ್ನಿ, ಮಕ್ಕಳು ತೀವ್ರ ದುಃಖದಲ್ಲಿದ್ದಾರೆ. ಕೂಲಿ ಮಾಡಿ ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಓದಿಸುತ್ತಿದ್ದರು. ಒಬ್ಬಳು ಎಸ್ಸೆಸ್ಸೆಲ್ಸಿ, ಮತ್ತೊಬ್ಬ ಪುತ್ರಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.

ವರದಿ : ಸುರೇಶ್‌, ಟಿವಿ5 ಮೈಸೂರು

Next Story

RELATED STORIES