Top

ಶ್ರಾವಣ ಮಾಸದಿಂದ ಬಿ.ಎಸ್.ವೈ ದಂಡಯಾತ್ರೆ ಆರಂಭ

ಶ್ರಾವಣ ಮಾಸದಿಂದ ಬಿ.ಎಸ್.ವೈ ದಂಡಯಾತ್ರೆ ಆರಂಭ
X

ಬೆಂಗಳೂರು : ಅಧಿಕಾರ ಸಿಗದೇ ಏಟು ತಿಂದ ಹುಲಿಯಂತಾಗಿದ್ದ ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ ಸಜ್ಜಾಗಿದ್ದಾರೆ. ಆಷಾಡ ಮಾಸ ಮುಗಿದ ಕೂಡಲೇ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿರುವ ಬಿ.ಎಸ್.ವೈ ಮೈತ್ರಿ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಲಿದ್ದಾರೆ. ಜೊತೆಗೆ ಲೋಕಸಭೆ ಚುನಾವಣೆಗೆ ಕೇಸರಿ ಸೈನ್ಯವನ್ನು ಸಜ್ಜುಗೊಳಿಸಲಿದ್ದಾರೆ.

ಸದ್ಯ ರಿಲ್ಯಾಕ್ಸ್ ಮೂಡ್ ನಲ್ಲಿ ಬಿ.ಎಸ್.ವೈ

ಶ್ರಾವಣ ಮಾಸದಿಂದ ರಾಜ್ಯ ಪ್ರವಾಸ ಆರಂಭಿಸಿ ಎಂದು ಜ್ಯೋತಿಷಿಗಳು ಬಿ.ಎಸ್.ವೈ ಗೆ ಸಲಹೆ ನೀಡಿದ್ದಾರೆ. ಹೀಗಾಗಿ ಶ್ರಾವಣ ಮಾಸದಿಂದ ರಾಜ್ಯ ಪ್ರವಾಸ ಆರಂಭಿಸಲು ಯಡಿಯೂರಪ್ಪ ನಿರ್ಧರಿಸಿದ್ದಾರೆ. ಸದ್ಯ ಜಿಂದಾಲ್ ನಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಯಡಿಯೂರಪ್ಪ ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಪೃಕೃತಿ ಚಿಕಿತ್ಸೆ ಬಳಿಕ ಹೊಸ ಹುರುಪಿನೊಂದಿಗೆ ಬಿ.ಎಸ್.ವೈ ರಾಜ್ಯದ ಉದ್ದಗಲಕ್ಕೂ ಮೈತ್ರಿ ಸರ್ಕಾರದ ವಿರುದ್ಧ ಪ್ರವಾಸ ನಡೆಸಲಿದ್ದಾರೆ.

ಯಡಿಯೂರಪ್ಪ ಮುಂದಿರುವ ಸವಾಲುಗಳು

ತೃತಿಯ ರಂಗದ ಬಲ ಪ್ರದರ್ಶನಕ್ಕೆ ವೇದಿಕೆಯಾದ ಕರ್ನಾಟಕದಲ್ಲಿ ದೋಸ್ತಿಗಳಿಗೆ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲುಣಿಸಬೇಕೆಂಬುದೇ ಹೈಕಮಾಂಡ್ ಮಹಾದಾಸೆ. ಹೀಗಾಗಿ ಚುನಾವಣೆಗೆ ಸಜ್ಜಾಗುವಂತೆ ಅಮಿತ್ ಷಾ ರಣಕಹಳೆ ಊದಿದ್ದಾರೆ. ಆದರೆ ಬಿಜೆಪಿ ಜಿಲ್ಲಾ ಘಟಕಗಳಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಾಗಿವೆ.

ಕಳೆದ ಬಾರಿ ವಿಧಾನಸಬೆ ಟಿಕೇಟ್ ವಂಚಿತ ಮುಖಂಡರು ಮುನಿಸಿಕೊಂಡಿದ್ದಾರೆ. ಅವರನ್ನೆಲ್ಲಾ ಸಮಾಧಾನ ಪಡಿಸಿ ಮತ್ತೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಸವಾಲು ಬಿ.ಎಸ್.ವೈ ಮುಂದೆ ಇದೆ. ಮೊದಲು ಪಕ್ಷದ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುವತ್ತ ಯಡಿಯೂರಪ್ಪ ಚಿತ್ತವಿಟ್ಟಿದ್ದಾರೆ.

ರಾಜ್ಯ ಪ್ರವಾಸದ ವೇಳೆ ಪ್ರತಿ ಜಿಲ್ಲೆಗಳಿಗೂ ಭೇಟಿ ನೀಡಲಿರುವ ಯಡಿಯೂರಪ್ಪ ಆಯಾ ಜಿಲ್ಲಾ ಘಟಕಗಳ ವಿಶೇಷ ಸಭೆ ನಡೆಸಲಿದ್ದಾರೆ. ಈ ವೇಳೆ ಆಗಿರುವ ಭಿನ್ನಾಭಿಪ್ರಾಯಗಳನ್ನು ಮರೆತು ಲೋಕಸಭೆ ಚುನಾವಣೆಗೆ ಒಗ್ಗಟ್ಟಾಗಿ ಕೆಲಸ ಮಾಡುವಂತೆ ಅಸಮಾಧಾನಿತ ಮುಖಂಡರ ಮನವೊಲಿಸಲಿದ್ದಾರೆ. ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ, ಮೋದಿ ಸರ್ಕಾರದ ಸಾಧನೆಗಳ ಪ್ರಚಾರ ಹಾಗೂ ಮನವರಿಕೆ,ಅಮಿತ್ ಷಾ 23 ಅಂಶಗಳ ಅನುಷ್ಟಾನ ಕುರಿತು ಬಿ.ಎಸ್.ವೈ ಕಾರ್ಯಕರ್ತರಿಗೆ ಸೂಚನೆ ನೀಡಲಿದ್ದಾರೆ.

ಮೈತ್ರಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಬಿ.ಎಸ್.ವೈ ಪ್ಲಾನ್

ಪ್ರತಿ ಜಿಲ್ಲೆಗಳಿಗೆ ಭೇಟಿ ನೀಡಿದ ವೇಳೆ ಮೈತ್ರಿ ಸರ್ಕಾರದ ವಿರುದ್ಧ ಬಿ.ಎಸ್.ವೈ ಗುಡುಗಲಿದ್ದಾರೆ. ಮೈತ್ರಿ ಸರ್ಕಾರದ ವೈಫಲ್ಯಗಳನ್ನು ಎಳೆಎಳೆಯಾಗಿ ಜನರ ಮುಂದೆ ಬಿಚ್ಚಿಡಲು ನಿರ್ಧರಿಸಿದ್ದಾರೆ. ಮೈತ್ರಿ ಸರ್ಕಾರದ ಗೊಂದಲಗಳಿಂದ ಆಡಳಿತದ ಮೇಲಾಗಿರುವ ದುಷ್ಪರಿಣಾಮ, ಸಿಎಂ ಕುಮಾರಸ್ವಾಮಿ ಬಜೆಟ್‌ನಲ್ಲಿ ಮಾಡಿದ ಪ್ರಾದೇಶಿಕ ತಾರತಮ್ಯವನ್ನು ಜನರಿಗೆ ಮನವರಿಕೆ ಮಾಡಲಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಮೈತ್ರಿ ಸರ್ಕಾರದ ವೈಫಲ್ಯಗಳ ಬಗ್ಗೆ ದ್ವನಿ ಎತ್ತುವ ಕುರಿತು ಜಿಲ್ಲಾ ಕಾರ್ಯಕರ್ತರಿಗೆ ಸಲಹೆ ಸೂಚನೆ ನೀಡಲಿದ್ದಾರೆ.

ವರದಿ : ಪವನ್ ಕುಮಾರ್, ಪೊಲಿಟಿಕಲ್ ಬ್ಯುರೋ, ಟಿವಿ5

Next Story

RELATED STORIES