ಒಂದು ಇನ್ಸ್ಸ್ಟಾಗ್ರಾಂ ಪೋಸ್ಟ್ನಿಂದ 82 ಲಕ್ಷ ಸಂಪಾದಿಸುವ ಕೊಹ್ಲಿ!

ಜಗತ್ತಿನ ಅತ್ಯಂತ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣಗಳಲ್ಲೂ ಆಗೊಮ್ಮೆ-ಈಗೊಮ್ಮೆ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಈ ಮೂಲಕ ರನ್ ಬದಲು ಹಣ ಹರಿಸುತ್ತಿದ್ದಾರೆ!
ವಿರಾಟ್ ಕೊಹ್ಲಿ ಇನ್ಸ್ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ಗೆ 1.20 ಲಕ್ಷ ಡಾಲರ್ (ಸುಮಾರು 82.35 ಲಕ್ಷ ರೂ.) ಗಳಿಸುತ್ತಿದ್ದಾರೆ. ಈ ಮೂಲಕ ಇನ್ಸ್ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ನಿಂದ ಇಷ್ಟು ದೊಡ್ಡ ಮೊತ್ತದ ಆದಾಯ ಪಡೆಯುತ್ತಿರುವ ಏಕೈಕ ಭಾರತೀಯ ಕ್ರಿಡಾಪಟು ಎನಿಸಿಕೊಂಡಿದ್ದಾರೆ.
ಹೂಪರ್ ಎಚ್ಕ್ಯೂ ಸಂಸ್ಥೆ ಕ್ರೀಡಾಪಟುಗಳು ಸಾಮಾಜಿಕ ಜಾಲತಾಣಗಳಲ್ಲಿ ಗಳಿಸುತ್ತಿರುವ ಆದಾಯದ ಪಟ್ಟಿ ಬಿಡುಗಡೆ ಮಾಡಿದೆ. ವಿರಾಟ್ ಕೊಹ್ಲಿ ವಿಶ್ವದಲ್ಲೇ ಅತೀ ಹೆಚ್ಚು ಆದಾಯ ಗಳಿಸುವ ಕ್ರೀಡಾಪಟುಗಳ ಪಟ್ಟಿಯಲ್ಲಿ 11ನೇ ಸ್ಥಾನ ಪಡೆದಿದ್ದಾರೆ.
ಅಮೆರಿಕದ ರೂಪದರ್ಶಿ ಹಾಗೂ ರಿಯಾಲಿಟಿ ಶೋ ನಡೆಸಿಕೊಡುವ ಕೈಲಿ ಜೆನ್ನೆರ್ ಒಂದು ಪೋಸ್ಟ್ಗೆ 1.1 ದಶಲಕ್ಷ ಡಾಲರ್ ಗಳಿಸುತ್ತಿದ್ದಾರೆ. ಇವರಿಗೆ ಹೋಲಿಸಿದರೆ ಕೊಹ್ಲಿ ಆದಾಯ 9ನೇ ಒಂದು ಭಾಗ. ಗಾಯಕಿ ಸೆಲೆನಾ ಗೊಮೆಜ್ ಎರಡನೇ ಸ್ಥಾನದಲ್ಲಿದ್ದಾರೆ.
ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಒಂದು ಪೋಸ್ಟ್ಗೆ 75 ಸಾವಿರ ಡಾಲರ್ ಗಳಿಸುವ ಮೂಲಕ 3ನೇ ಸ್ಥಾನದಲ್ಲಿದ್ದರೆ, ಬ್ರೆಜಿಲ್ನ ನೇಮರ್ ಮತ್ತು ಅರ್ಜೆಂಟೀನಾದ ಲಿಯೊನೆಲ್ ಮೆಸ್ಸಿ ಕ್ರಮವಾಗಿ 60 ಸಾವಿರ ಮತ್ತು 50 ಸಾವಿರ ಡಾಲರ್ ಪಡೆಯುತ್ತಿದ್ದಾರೆ. ಇವರಿಬ್ಬರು ಕ್ರಮವಾಗಿ 8 ಮತ್ತು9ನೇ ಸ್ಥಾನದಲ್ಲಿದ್ದಾರೆ.
ಪ್ರಸ್ತುತ ವಿರಾಟ್ ಕೊಹ್ಲಿಗೆ 23 ಸಾವಿರ ಇನ್ಸ್ಸ್ಟಾಗ್ರಾಂನಲ್ಲಿ ಹಿಂಬಾಲಕರು ಇದ್ದಾರೆ. ಕೊಹ್ಲಿ ಕನಿಷ್ಠ ವಾರಕ್ಕೊಮ್ಮೆ ಒಂದು ಪೋಸ್ಟ್ ಮಾಡುತ್ತಾರೆ. ಅದರಲ್ಲೂ ಬಾಲಿವುಡ್ ನಟಿ ಅನುಷ್ಕಾ ಶರ್ಮ ಜೊತೆಗಿರುವ ಫೋಟೋಗಳನ್ನು ಕೊಹ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ.