Top

ಸೋರುವ ಕೊಠಡಿಯಲ್ಲೇ ಪಾಠ, ವಿದ್ಯಾರ್ಥಿಗಳ ಜೀವದ ಜೊತೆ ಆಟ.!!

ಸೋರುವ ಕೊಠಡಿಯಲ್ಲೇ ಪಾಠ, ವಿದ್ಯಾರ್ಥಿಗಳ ಜೀವದ ಜೊತೆ ಆಟ.!!
X

ಶಿರಸಿ : ಉತ್ತರಕನ್ನಡ ಜಿಲ್ಲೆ ಸಿದ್ದಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದುಃಸ್ಥಿತಿಯ ಕತೆ ಇದು. ಈ ಕಾಲೇಜಿಗೆ ಸ್ವಂತ ಕಟ್ಟಡವಿಲ್ಲದೇ ಇದ್ದಾಗ, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಕಾಲೇಜಿಗೆ ಜಾಗ ಮಂಜೂರಿ ಮಾಡಿಸಿ ಕಟ್ಟಡ ನಿರ್ಮಾಣಕ್ಕೆ ಅನುದಾನವನ್ನೂ ದೊರಕಿಸಿಕೊಟ್ಟಿದ್ದರು. ದೇಶಪಾಂಡೆ ಉನ್ನತ ಶಿಕ್ಷಣ ಸಚಿವರಿದ್ದಾಗ ಪ್ರಾರಂಭವಾದ ಕಾಮಗಾರಿ ಕಳಪೆಯಾಗಿ ಕಟ್ಟಡವನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದುಃಸ್ಥಿತಿ

ಅನಂತರ ಬೇರೆ ಗುತ್ತಿಗೆದಾರರು ಉಳಿದರ್ಧ ಕಾಮಗಾರಿಯನ್ನು ಮಾಡಿ ಮುಗಿಸಿದ್ದಾರೆ. ಅದಾದ ನಂತರ ಆಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಶಿರಸಿಗೆ ಬಂದಾಗ ಕಟ್ಟಡವನ್ನು ನೋಡದೇ ಶಿರಸಿಯಲ್ಲಿಯೇ ಉದ್ಘಾಟಿಸಿದ್ದರು. ಕಾಲೇಜಿನ ಪಕ್ಕದಲ್ಲೇ ವಿದ್ಯಾರ್ಥಿಗಳಿಗೆ ವಸತಿಗೃಹವನ್ನು ನಿರ್ಮಿಸಿದ್ದು ಅದೂ ಕೂಡ ಯಾರ ಸುಪರ್ದಿಗೆ ಸೇರುತ್ತದೆ ಎನ್ನುವ ಗೊಂದಲದಲ್ಲೇ ಇದೆ. ಈ ಮೂಲಕ ವಿದ್ಯಾರ್ಥಿಗಳಿಗೆ ದೊರೆತೇ ಇಲ್ಲ.

ಮಳೆಗಾಲದಲ್ಲಿ ನೀರಿನ ತೊಟ್ಟಿಯಾಗುವ ಕೊಠಡಿಗಳು

ಇದು ಕಾಲೇಜಿನ ನಿರ್ಮಾಣದ ಕಥೆ ಆದ್ರೆ ಕಾಲೇಜಿನ ಒಳಗಡೆ ಹೋದ್ರೆ ಸಾಕು ನೀರು ತೊಟ್ಟಿಕ್ಕುವ ಗೋಡೆಗಳ ದರ್ಶನವಾಗುತ್ತೆ. ಕೆಲವೊಂದು ಕ್ಲಾಸ್ ರೂಮ್ ಗಳ ಪರಿಸ್ಥಿತಿ ಸ್ವಿಮ್ಮಿಂಗ್ ಫೂಲ್ ಗೆ ಕಡಿಮೆಯೇನಿಲ್ಲ. ವಿದ್ಯಾರ್ಥಿಗಳು ಸೋರುವ ತರಗತಿಗಳಲ್ಲೇ ಕುಳಿತು ಪಾಠ ಕೇಳುವಂತ ದುಸ್ಥಿತಿ ನಿರ್ಮಾಣವಾಗಿರೋದು ವಿದ್ಯಾರ್ಥಿಗಳ ವ್ಯಥೆ. ಇನ್ನೂ ಕಾಲೇಜ್ ಕಟ್ಟಿ ಸರಿಯಾಗಿ 1 ವರ್ಷ ಕೂಡ ಆಗಿಲ್ಲ, ಈಗ್ಲೇ ಗೋಡೆಗಳೆಲ್ಲಾ ಬಾಯ್ತೆರೆದು ನಿಂತಿವೆ. ಯಾವಾಗ ಬೀಳುತ್ತವೋ ಎಂಬ ಸ್ಥಿತಿಗೆ ಬಂದು ನಿಂತಿವೆ.

ಕೆಸರು ಗದ್ದೆಯಾದ ಕಾಲೇಜು ರಸ್ತೆ, ಪ್ರತಿನಿತ್ಯ ವಿದ್ಯಾರ್ಥಿಗಳ ಹರಸಾಹಸ

ಇನ್ನು ವಿದ್ಯಾರ್ಥಿಗಳು ಕಾಲೇಜ್ ಗೆ ಬರಬೇಕಂದ್ರೆ ಹರಸಾಹಸ ಮಾಡಿ ಕೆಸರು ರಸ್ತೆಯನ್ನೇ ದಾಟಿ ಬರಬೇಕು. ಈ ರಸ್ತೆ ಕೆಸರು ಗದ್ದೆಗೇನೂ ಕಡಿಮೆಯಿಲ್ಲ. ರಸ್ತೆಯೆಲ್ಲಾ ಗದ್ದೆಯಂತಾಗಿ ಮಾರ್ಪಟ್ಟಿದೆ. ನೀರು ಸಾಗಲು ಪೈಪ್ ಹಾಕದೇ ಕೊರಕಲು ಗುಂಡಿ ಬಿದ್ದಿರೋ ರಸ್ತೆಯಲ್ಲಿ ನಡೆದು ಹೋಗುವುದು ವಿದ್ಯಾರ್ಥಿಗಳ ಪಾಡು ಒಂದು ಸಾಹಸವೇ ಸರಿ.

ಕಾಲೇಜಿಗೆ ಬರೋಕೆ ಬಸ್‌ ಇಲ್ಲ, ಬಂದ್ರೆ ಕಾಲೇಜಲ್ಲಿ ಕೊರತೆಗೆ ಕಮ್ಮಿ ಇಲ್ಲ

ಅಂದಹಾಗೇ ಈ ಕಾಲೇಜು ಪಟ್ಟಣದಿಂದ 7 ಕಿಲೋಮೀಟರ್ ದೂರವಿದೆ. ಹೀಗಿದ್ದರೂ ಇಲ್ಲಿಗೆ ವಿದ್ಯಾರ್ಥಿಗಳು ಬರೋದಕ್ಕೆ ಬಸ್ ಸೌಲಭ್ಯ ಕೂಡ ಸರಿಯಾಗಿಲ್ಲ. ವಿದ್ಯಾರ್ಥಿಗಳು ಬಸ್ ಸಿಕ್ರೆ ಸಾಕಪ್ಪಾ ಎಂದು ಬಸ್‌ನ ಕೊನೆಯ ಮೆಟ್ಟಿಲಿನಲ್ಲಿ ಹರಸಾಹಸ ಪಟ್ಟು ಪ್ರಯಾಣಿಸುವ ದೃಶ್ಯ ಸರ್ವೇಸಾಮಾನ್ಯವಾಗಿದೆ.

ಮಾನ್ಯ ಮಾಜಿ ಶಿಕ್ಷಣ ಸಚಿವರೇ, ಹಾಲಿ ಶಾಸಕರಾದ ವಿಶ್ವೇಶ್ವರಹೆಗಡೆ ಕಾಗೇರಿ ಸಾರ್, ಮಾನ್ಯ ಶಿಕ್ಷಣ ಸಚಿವರಾದ ಜಿ ಟಿ ದೇವೇಗೌಡ ಸಾಹೇಬ್ರೇ, ನಮ್ಮ ಪಾಡು ನೋಡಿ. ನಮ್ಮ ಕಾಲೇಜಿನ ಸ್ಥಿತಿಗತಿ ನೋಡಿ. ನಮ್ಮನ್ನು ದಿನನಿತ್ಯದ ನರಕದಿಂದ ಪಾರು ಮಾಡಿ. ಒಂದೇ ವರ್ಷದಲ್ಲಿ ಸೋರುತ್ತಿರುವ ನಮ್ಮ ಕಾಲೇಜನ್ನು ಕನಿಷ್ಠ ರಿಪೇರಿ ಮಾಡಿಸಿ ಕೊಡಿ. ಇಲ್ಲವೇ ನವೀಕೃತ ಕಟ್ಟಡಕ್ಕಾದರೂ ವ್ಯವಸ್ಥೆ ಮಾಡಿ. ನಮ್ಮ ಕಾಲೇಜು ರಸ್ತೆಯನ್ನು ಸರಿಪಡಿಸಿಕೊಡಿ ಸ್ವಾಮಿ ಎನ್ನೋದು ಕಾಲೇಜಿನ ವಿದ್ಯಾರ್ಥಿಗಳ ವಿನಮ್ರ ಕೋರಿಕೆ..

ವರದಿ : ವಿನಾಯಕ್ ಹೆಗಡೆ, ಟಿವಿ5 ಶಿರಸಿ

Next Story

RELATED STORIES