Top

ಬಿಜೆಪಿ ಮೋರ್ಚಾಗಳ ಕಾರ್ಯವೈಖರಿಗೆ ಬಿ.ಎಸ್.ವೈ ಗರಂ

ಬಿಜೆಪಿ ಮೋರ್ಚಾಗಳ ಕಾರ್ಯವೈಖರಿಗೆ ಬಿ.ಎಸ್.ವೈ ಗರಂ
X

ಬೆಂಗಳೂರು : ಬಿ.ಎಸ್ ಯಡಿಯೂರಪ್ಪ ಬಿಜೆಪಿ ರಾಜ್ಯಾದ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದೇ ತಡ ಎಲ್ಲಾ ಮೋರ್ಚಾಗಳು ಫುಲ್ ಆಕ್ಟಿವ್ ಆಗಿದ್ವು.ಆದರೆ ವಿಧಾನಸಭೆ ಚುನಾವಣೆ ಬಳಿಕ ರಾಜ್ಯದ ಅಧಿಕಾರ ಹಿಡಿಯುವಲ್ಲಿ ಬಿಜೆಪಿ ವಿಫಲವಾದ ಕಾರಣ ಬಿಜೆಪಿಯ ಮೋರ್ಚಾಗಳು ಉತ್ಸಾಹ ಕಳೆದುಕೊಂಡಿವೆ. ಹೀಗಾಗಿ ಯಡಿಯೂರಪ್ಪ ಬಿಜೆಪಿಯ ಎಲ್ಲಾ ಮೋರ್ಚಾಗಳ ಕಾರ್ಯವೈಖರಿಗೆ ಗರಂ ಆಗಿದ್ದಾರೆ.

ಲೋಕಸಭೆ ಚುನಾವಣೆಗೆ ಸಿದ್ಧಗೊಳ್ಳಲು ಸೂಚನೆ

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಎಲ್ಲಾ ಮೋರ್ಚಾಗಳು ಒಟ್ಟಾಗಿ ರಾಜ್ಯಾದ್ಯಂತ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡ ಕಾರಣ ಬಿಜೆಪಿ 104 ಸೀಟು ಜಯಭೇರಿ ಬಾರಿಸಿತು. ಆದರೆ ಬಹುಮತ ಸಾಬೀತು ಪಡಿಸುವಲ್ಲಿ ಬಿಜೆಪಿ ವಿಫಲವಾದ ಕಾರಣ ಅಧಿಕಾರದ ಗದ್ದುಗೆ ಕೇಸರಿ ಪಡೆಯ ಕೈ ತಪ್ಪಿ ಹೋಗಿದೆ. ಅತಿ ಹೆಚ್ಚು ಸ್ಥಾನಗಳನ್ನು ಗೆದ್ದರೂ ಅಧಿಕಾರ ಸಿಗಲಿಲ್ಲ ಎಂಬ ಬೇಸರದಿಂದ ಪಕ್ಷ ಸಂಘಟನೆ ತ್ಯಜಿಸಿದ್ದ ವಿವಿಧ ಮೋರ್ಚಾಗಳ ಮುಖಂಡರ ವಿರುದ್ದ ಯಡಿಯೂರಪ್ಪ ಗರಂ ಆಗಿದ್ದಾರೆ ಎನ್ನಲಾಗಿದೆ.

ಲೋಕಸಭೆ ಚುನಾವಣೆ ಹಿನ್ನೆಲೆ ಇನ್ನೇನು ಕೆಲ ದಿನಗಳಲ್ಲಿ ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಅಮಿತ್ ಷಾ ಕರ್ನಾಟಕಕ್ಕೆ ಬರಲಿದ್ದಾರೆ. ಆಗ ನಾವು ವಿಧಾನಸಭೆ ಚುನಾವಣೆ ಬಳಿಕ ನಡೆಸಿದ ಸಂಘಟನಾತ್ಮಕ ಚಟುವಟಿಕೆಗಳ ಬಗ್ಗೆ ವರದಿ ನೀಡಬೇಕಾಗುತ್ತದೆ. ಆದರೆ ನೀವು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳದೇ ಪಕ್ಷ ಅಧಿಕಾರಕ್ಕೆ ಬರಲಿಲ್ಲ ಎಂದು ನಿರಾಸೆಯಿಂದ ಕುಳಿತರೆ ಪ್ರಯೋಜನ ಏನು? ಹೀಗಾಗಿ ಇನ್ನು ಮುಂದೆ ಎಲ್ಲಾ ಮೋರ್ಚಾಗಳು ಫುಲ್ ಆಕ್ಟಿವ್ ಇರಬೇಕು. ಪಕ್ಷದಲ್ಲಿ ಅಶಿಸ್ತು ಸಹಿಸಲ್ಲ ಎಂದು ಬಿ.ಎಸ್.ವೈ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿ.ಎಸ್.ವೈ ಗರಂ ಆಗಲು ಕಾರಣ ಏನು?

ವಿಧಾನಪರಿಷತ್ ಗೆ ಮರು ಆಯ್ಕೆ ಮಾಡಲಿಲ್ಲ ಎಂಬ ಕಾರಣಕ್ಕೆ ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅದ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಅದ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಸಕ್ರೀಯವಾಗಿಲ್ಲ. ಇತ್ತ ಹಿಂದುಳಿದ ವರ್ಗದ ಮೋರ್ಚಾ ಉಸ್ತುವಾರಿ ಹೊತ್ತಿರುವ ಈಶ್ವರಪ್ಪ ಶಿವಮೊಗ್ಗಕ್ಕಷ್ಟೆ ಸೀಮಿತರಾಗಿದ್ದಾರೆ.ರಾಯಣ್ಣ ಬ್ರಿಗೇಡ್ ಕಟ್ಟಿದಾಗ ಈಶ್ವರಪ್ಪ ವಿರುದ್ದ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಪುಟ್ಟಸ್ವಾಮಿ ಮತ್ತೆ ಹಿಂದುಳಿದ ಮೋರ್ಚಾ ಅದ್ಯಕ್ಷ ಸ್ಥಾನಕ್ಕೆ ಮರುಳುವುದು ಈಶ್ವರಪ್ಪರಿಗೂ ಇಷ್ಟ ಇಲ್ಲ ಎನ್ನಲಾಗಿದೆ. ಹೀಗಾಗಿ ಹಿಂದುಳಿದ ವರ್ಗದ ಮೋರ್ಚಾ ಕ್ರಿಯಾಶೀಲತೆ ಕಳೆದುಕೊಂಡಿದೆ. ಇದು ಬಿ.ಎಸ್.ವೈಗೆ ಕೋಪ ತರಿಸಿದೆ ಎನ್ನಲಾಗಿದೆ.

ಇತ್ತ ಯುವ ಮೋರ್ಚಾ ಸಂಘಟನಾ ಸಾಮರ್ಥ್ಯವೂ ಕುಂದಿದೆ.ರಾಜ್ಯಾದ್ಯಂತ ಸಂಘಟನಾ ಚಟುವಟಿಕೆಗಳನ್ನು ಕೈಗೊಳ್ಳಲು ಯುವ ಮೋರ್ಚಾ ಕಾರ್ಯಕರ್ತರು ನಿರಾಸಕ್ತಿ ತಳೆದಿದ್ದಾರೆ ಎನ್ನಲಾಗಿದೆ. ರಾಜ್ಯಾದ್ಯಂತ ಭಾರಿ ಮಳೆ, ಕೌಟುಂಬಿಕ ಕೆಲಸಗಳಲ್ಲಿ ಯುವ ಮೋರ್ಚಾ ಕಾರ್ಯಕರ್ತರು ಬ್ಯುಸಿ ಇದ್ದಾರೆ. ವಿಧಾನಸಭೆ ಚುನಾವಣೆ ವೇಳೆ ಮನಡ ಮಠ ಬಿಟ್ಟು ಪಕ್ಷಕ್ಕಾಗಿ ಕೆಲಸ ಮಾಡಿದ್ದೇವೆ. ಸದ್ಯಕ್ಕೆ ನಮ್ಮನ್ನು ಬಿಟ್ಟು ಬಿಡಿ ಎಂದು ಕೆಲ ಪದಾಧಿಕಾರಿಗಳು ನೇರವಾಗೇ ಹೇಳಿದ್ದಾರೆ ಎನ್ನಲಾಗಿದೆ.

ಇನ್ನು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ, ಅಲ್ಪಸಂಖ್ಯಾತ ಮೋರ್ಚಾ , ಎಸ್.ಎಸಿ ಎಸ್ ಟಿ ಮೋರ್ಚಾಗಳೂ ಕೂಡಾ ಅಷ್ಟಕಷ್ಟೆ ಎಂಬಂತಿವೆ. ಇದು ಪಕ್ಷದ ಸಂಘಟನೆ ವಿಚಾರದಲ್ಲಿ ಯಡಿಯೂರಪ್ಪರಿಗೆ ತಲೆ ನೋವು ತರಿಸಿದೆ.

ಅಮಿತ್ ಷಾ ಬಂದಾಗ ಎಲ್ಲಾ ಮೋರ್ಚಾಗಳ ಫರ್ಫಾರ್ಮೆನ್ಸ್ ಪರಿಶೀಲನೆ ಮಾಡ್ತಾರೆ. ಆಗ ನೀವು ಏನು ಉತ್ತರ ಹೇಳ್ತೀರಿ? ಇನ್ನು ಮುಂದೆ ಹೀಗಾಗ ಕೂಡದ ಕೆಲಸ ಮಾಡಿ ಎಂದು ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ವರದಿ : ಪವನ್ ಕುಮಾರ್, ಪೊಲಿಟಿಕಲ್ ಬ್ಯುರೋ ಟಿವಿ5

Next Story

RELATED STORIES