Top

ಆಧುನಿಕ ತಂತ್ರಜ್ಞಾನದಿಂದ ಮರಗಳಿಗೆ ಮರುಜೀವ.!!

ಆಧುನಿಕ ತಂತ್ರಜ್ಞಾನದಿಂದ ಮರಗಳಿಗೆ ಮರುಜೀವ.!!
X

ವಿಜಯಪುರ : ಕಾಡು ಬೆಳೆದರೆ ನಾಡು, ಹಸಿರೆ ಉಸಿರು ಎಂದೆಲ್ಲಾ ನಾವು ಹೇಳುತ್ತೇವೆ. ಮರ ಗಿಡಗಳನ್ನು ರಕ್ಷಿಸಬೇಕೆಂದು ಗೋಡೆ ಬರಹಗಳನ್ನು ಬರೆಯಲಾಗಿರುತ್ತದೆ. ಆದರೆ ಅಭಿವೃದ್ದಿ ಹೆಸರಿನಲ್ಲಿ ಇದೇ ಮರ ಗಿಡಗಳನ್ನು ಕಡಿದು ಹಾಕುತ್ತೇವೆ. ಅದರಲ್ಲೂ ರಸ್ತೆ, ಹೆದ್ದಾರಿ ನಿರ್ಮಾಣ ಮಾಡುವ ಸಂದರ್ಭದಲ್ಯಂತೂ ಮರಗಳ ಮಾರಣ ಹೋಮಕ್ಕೆ ಲೆಕ್ಕವೇ ಇರುವುದಿಲ್ಲಾ. ಆದರೆ ಇದಕ್ಕೆ ವ್ಯತಿರಿಕ್ತವಾದ ರೀತಿಯಲ್ಲಿ ವಿಜಯಪುರ ಸೋಲ್ಲಾಪುರ ರಾಷ್ಟ್ರೀಯ ಹೆದ್ಧಾರಿ ನಿರ್ಮಾಣವಾಗುತ್ತಿದೆ, ಹೆದ್ಧಾರಿ ಕಾಮಗಾರಿಯಲ್ಲಿ ಅಡ್ಡ ಬರುವ ಮರಗಳನ್ನು ಉಳಿಸಿ ಬೆಳೆಸಲಾಗುತ್ತಿದೆ.

ಹೌದು ವಿಜಯಪುರ ಸೋಲ್ಲಾಪುರ ರಾಷ್ಟ್ರೀಯ ಹೆದ್ದಾರಿ 13 ರನ್ನು ಚತುಷ್ಪತ ಹೆದ್ದಾರಿಯನ್ನಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಜೊತೆಗೆ ಚತುಷ್ಪತ ಹೆದ್ದಾರಿ ನಿರ್ಮಾಣ ಕಾಮಗಾರಿಯನ್ನು ಮಲೇಷಿಯಾ ದೇಶದ ಐಜೆಎಂ ಕಂಪನಿಗೆ ನೀಡಿದೆ. ಸದ್ಯ ಮಲೇಷಿಯಾ ದೇಶದ ಐಜೆಎಂ ಕಂಪನಿ ಚತುಷ್ಪತ ಹೆದ್ದಾರಿ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದೆ.

ಒಟ್ಟು 110 ಕಿಲೋ ಮೀಟರ್ ಚತುಷ್ಪತ ಹೆದ್ದಾರಿ ಕಾಮಗಾರಿ ಪಡೆದಿರುವ ಐಜೆಎಂ ಕಾಮಗಾರಿಯುದ್ದಕ್ಕೂ ಬರುವ ಎಲ್ಲಾ ಮರಗಳನ್ನು ಉಳಿಸಲು ಮುಂದಾಗಿದೆ. ಹೆದ್ದಾರಿಯಲ್ಲಿ ಬರುವ ಮರಗಳನ್ನು ಕಿತ್ತು, ಅದೇ ಚತುಷ್ಪತ ಹೆದ್ದಾರಿಯ ಪಕ್ಕದಲ್ಲಿ ನೆಡುವ ಕಾಮಗಾರಿಯನ್ನು ಬೇರೆ ಬೇರೆ ಗುತ್ತಿಗೆದಾರರಿಗೆ ನೀಡಿದೆ. 20 ಕಿಲೋ ಮೀಟರ್ ನಂತೆ ತುಂಡು ಗುತ್ತಿಗೆಯನ್ನು ಮಾಡಿ ಒಟ್ಟು 6 ಗುತ್ತಿಗೆದಾರರಿಗೆ ಮರಗಳನ್ನು ಮರು ಬೆಳೆಸುವ ಕೆಲಸದ ಕಾಮಗಾರಿಯನ್ನು ನೀಡಿದೆ. 170 ಕೋಟಿ ರೂಪಾಯಿಗಳನ್ನು ಇದಕ್ಕಾಗಿ ಐಜೆಎಂ ಕಂಪನಿ ವಿನಿಯೋಗಿಸುತ್ತಿದೆ.

ಸದ್ಯ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಬರುವ ಸುಮಾರು 1200 ಮರಗಳನ್ನು ರಾಜ್ ಗ್ರೂಪ್ ಕಂಪನಿ ರೀ ಪ್ಲಾಂಟೇಷನ್ ಮಾಡುತ್ತಿದೆ. ಇದೇ ರೀತಿ ಇನ್ನೂ ಐದು ಕಂಪನಿಗಳು ಸಹ ಮರಗಳನ್ನು ಮರು ಪೂರಣ ಮಾಡಲು ಮುಂದಾಗಿವೆ. ಚತುಷ್ಪತ ಹೆದ್ದಾರಿ ನಿರ್ಮಾಣದ ಹೆಸರಿನಲ್ಲಿ ಮರಗಳನ್ನು ಕಡಿದು ಮಾರಣ ಹೋಮ ಮಾಡದೇ ಎಲ್ಲಾ ಮರಗಳನ್ನು ರಕ್ಷಣೆ ಮಾಡಿದ್ದಕ್ಕೆ ಸ್ಥಳಿಯರೂ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ವಿಜಯಪುರ ಸೋಲ್ಲಾಪುರ ಸಂಪರ್ಕ ಕಲ್ಪಿಸುವ ಈ ಹೆದ್ದಾರಿ ಚತುಷ್ಪತ ಹೆದ್ದಾರಿಯಾಗಿ ಬಡ್ತಿ ಪಡೆದಿದೆ. ಕಾಮಗಾರಿಯ ನೆಪದಲ್ಲಿ ಮರಗಳನ್ನು ಅಳಿಸದೇ ಉಳಿಸಲು ಮುಂದಾಗಿರುವ ಪರಿಸರ ಕಾಳಜಿಗೆ ನಾವು ಸಾಥ್ ನೀಡಬೇಕಿದೆ. ಇಲ್ಲಿ ಆಗುತ್ತಿರುವ ಟ್ರೀ ರೀ ಪ್ಲಾಂಟೇಷನ್ ನಂತಹ ಕಾರ್ಯ ಇತರೆಡೆಯೂ ಆಗಬೇಕಾಗಿದೆ.

ವರದಿ : ಶರಣು ಮಸಳಿ, ಟಿವಿ5 ವಿಜಯಪುರ

Next Story

RELATED STORIES