Top

ಹಾವೇರಿ ಜಿಲ್ಲಾ ಪಂಚಾಯ್ತಿಯಲ್ಲಿ ಈಗ ಕಾಂಗ್ರೆಸ್ ವರ್ಸಸ್ ಕಾಂಗ್ರೆಸ್ ವಾರ್

ಹಾವೇರಿ ಜಿಲ್ಲಾ ಪಂಚಾಯ್ತಿಯಲ್ಲಿ ಈಗ ಕಾಂಗ್ರೆಸ್ ವರ್ಸಸ್ ಕಾಂಗ್ರೆಸ್ ವಾರ್
X

ಹಾವೇರಿ : ಕಾಂಗ್ರೇಸ್ ಮುಖಂಡರ ಆದೇಶದಂತೆ ಆತ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಆಗಿದ್ರು. ಕೆಲ ತಿಂಗಳ ಹಿಂದಷ್ಟೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಕಾನೂನು ಪ್ರಕಾರ ಹದಿನೈದು ದಿನಗಳ ನಂತ್ರ ರಾಜೀನಾಮೆ ಅಂಗೀಕಾರ ಆದಂತೆ. ಆದ್ರೂ ಈಗ ಅವರೆ ಅಧ್ಯಕ್ಷರ ಅಧಿಕಾರ ಚಲಾಯಿಸ್ತಿದ್ದಾರೆ. ಅಧ್ಯಕ್ಷರ ವಿರುದ್ಧ ಈಗ ಸ್ವಪಕ್ಷದ ಸದಸ್ಯರೆ ಅವರ ವಿರುದ್ದ ನಿಂತಿದ್ದಾರೆ.

ಹೌದು ಹಾವೇರಿ ಜಿಲ್ಲಾ ಪಂಚಾಯ್ತಿ ಒಟ್ಟು 34 ಸದಸ್ಯರನ್ನ ಹೊಂದಿದೆ. ಬಿಜೆಪಿ 12 ಸದಸ್ಯ ಬಲ ಹೊಂದಿದ್ರೆ, ಕಾಂಗ್ರೆಸ್ 22 ಸದಸ್ಯರನ್ನ ಹೊಂದಿ ದೊಡ್ಡ ಪಕ್ಷವಾಗಿದೆ. ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಎಚ್.ಕೆ.ಪಾಟೀಲ ಆಪ್ತ ಆಗಿರೋ ಕಾಂಗ್ರೆಸ್ ನ ಕೊಟ್ರೇಶಪ್ಪ ಬಸೇಗಣ್ಣಿ ಆಯ್ಕೆಯಾಗಿದ್ರು. ಆದ್ರೆ ಜಿಲ್ಲೆಯ ಕಾಂಗ್ರೆಸ್ ಮುಖಂಡರ ನಡುವೆ ನಡೆದ ಒಪ್ಪಂದದಂತೆ ಕೆಲ ತಿಂಗಳ ನಂತರ ಅಧ್ಯಕ್ಷ ಸ್ಥಾನವನ್ನ ಕೊಟ್ರೇಶಪ್ಪ ಬೇರೊಬ್ಬರಿಗೆ ಬಿಟ್ಟು ಕೊಡಬೇಕಿತ್ತು. ಆಗ ರಾಜ್ಯ ವಿಧಾನಸಭೆ ಚುನಾವಣೆ ಸಹ ಎದುರಾಗಿತ್ತು.

ಹೀಗಾಗಿ ಕೊಟ್ರೇಶಪ್ಪ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ರು. ಹದಿನೈದು ದಿನಗಳ ಒಳಗೆ ರಾಜೀನಾಮೆ ವಾಪಸ್ ಪಡೆಯದಿದ್ರೆ ರಾಜೀನಾಮೆ ಅಂಗೀಕಾರ ಅಂತಾ ಕಾನೂನು ಹೇಳ್ತಿದೆ. ಆದ್ರೆ ಜಿಲ್ಲಾಪಂಚಾಯಿತಿ ಅಭಿವೃದ್ಧಿ ಕಾರ್ಯಕ್ಕೆ ಬಂದ ಕೋಟಿ ಕೋಟಿ ಹಣ ಆಗೆ ಇದೆ. ಇತ್ತ ಸಭೆಯು ಮುಂದೂಡಲಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಕೊಟ್ರೇಶಪ್ಪ ರಾಜೀನಾಮೆ ಸಲ್ಲಿಸಿದ ನಂತರದಿಂದ ಈವರೆಗೆ ಯಾವುದೇ ಸಭೆಗಳು ನಡೆದಿರ್ಲಿಲ್ಲ. ಹೀಗಾಗಿ ಅಧ್ಯಕ್ಷ ಸ್ಥಾನ ಖಾಲಿಯಾಗಿದೆ ಅಂತಾನೆ ಕಾಂಗ್ರೆಸ್ ಪಕ್ಷದ ಬಹುತೇಕ ಸದಸ್ಯರು ಭಾವಿಸಿದ್ರಂತೆ. ಕೊಟ್ರೇಶಪ್ಪ ಬಸೇಗಣ್ಣಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆ ನಡೆಸೋಕೆ ಅಧಿಕಾರಿಗಳು ಮೇಲಧಿಕಾರಿಗಳ ಆದೇಶದಂತೆ ಮುಂದಾಗಿದ್ರು. ಆದ್ರೆ ಅಧ್ಯಕ್ಷ ಬಸೇಗಣ್ಣಿ ವಿರುದ್ಧ ಸೆಡ್ಡು ಹೊಡೆದಿರೋ ಕಾಂಗ್ರೆಸ್ ಸದಸ್ಯರು ಸಭೆಯಿಂದ ಹೊರಗುಳಿದು ಕೋರಂ ಅಭಾವ ಸೃಷ್ಟಿಸಿದ್ರು. ಸರಕಾರದ ಆದೇಶ ಕಾನೂನಾಗೋದಿಲ್ಲ. ಕಾನೂನು ಪ್ರಕಾರ ಅಧ್ಯಕ್ಷ ಸ್ಥಾನ ಖಾಲಿಯಿದೆ. ಸಭೆ ನಡೆಸೋದು ಬೇಡ ಅಂತಾ ಸಭೆ ಆರಂಭದಲ್ಲಿ ಕಾಂಗ್ರೆಸ್ ನ ಕೆಲ ಸದಸ್ಯರೆ ಅಧಿಕಾರಿಗಳಿಗೆ ತಾಕೀತು ಮಾಡಿದ್ರು.

ಆದ್ರೂ ಸಭೆ ನಡೆಸೋಕೆ ಮುಂದಾದಾಗ ಕೋರಂ ಇಲ್ಲದೇ ಸಭೆ ಹೇಗೆ ನಡಿಸ್ತೀರಿ ಅಂತಾ ಪ್ರಶ್ನೆಗಳ ಮೇಲೆ ಪ್ರಶ್ನೆ ಎದುರಾದಾಗ ಸಭೆ ಮುಂದೂಡಲಾಯ್ತು. ಆ ಮೂಲಕ ಸ್ವಪಕ್ಷದ ಅಧ್ಯಕ್ಷನಿಗೆ ಕೈ ಪಕ್ಷದ ಸದಸ್ಯರೆ ಭರ್ಜರಿ ಮುಖಭಂಗ ಉಂಟುಮಾಡಿದ್ದಾರೆ. ಅಧ್ಯಕ್ಷರ ವಿರುದ್ಧ ಬಿಜೆಪಿ ಸದಸ್ಯರು ಸಹ ಸಾಥ್ ನೀಡಿದಂತಿದ್ದು, ಬಿಜೆಪಿ ಪಕ್ಷದ ಸದಸ್ಯರೂ ಸಭೆಯಿಂದ ದೂರ ಉಳಿದಿದ್ರು, ಈ ಬಗ್ಗೆ ಜಿಲ್ಲಾ ಪಂಚಾಯ್ತಿ ಸಿಇಓರನ್ನ ಕೇಳಿದ್ರೆ ಅವರು ಹೇಳೋದು ಹೀಗೆ.

ಹಾವೇರಿ ಜಿಲ್ಲಾ ಪಂಚಾಯ್ತಿಯಲ್ಲಿ ಈಗ ಕಾಂಗ್ರೆಸ್ ವರ್ಸಸ್ ಕಾಂಗ್ರೆಸ್ ವಾರ್ ಶುರುವಾಗಿದೆ. ಕಾಂಗ್ರೆಸ್ ಸದಸ್ಯರ ನಡುವೆಯೇ ನಾ ಕೊಡೆ ನಾ ಬಿಡೆ ಅನ್ನುವಂಥಾ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಬದಲಾವಣೆ ಮಾಡೋದು ಸೇರಿದಂತೆ ಪಕ್ಷದಲ್ಲಿನ ಎಲ್ಲ ಬೆಳವಣಿಗೆಗಳು ಕಾಂಗ್ರೆಸ್ ನ ರಾಜ್ಯ ಮತ್ತು ಜಿಲ್ಲಾಮಟ್ಟದ ನಾಯಕರಿಗೆ ಗೊತ್ತಿದ್ರೂ ಅವರೂ ಸಹ ಪಕ್ಷದೊಳಗಿನ ಸದಸ್ಯರ ಕಿತ್ತಾಟಕ್ಕೆ ಬ್ರೇಕ್ ಹಾಕೋಕೆ ಮುಂದಾಗಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದ್ರೆ ಜಿಲ್ಲೆಯಲ್ಲಿ ಪಕ್ಷಕ್ಕೆ ಇನ್ನಷ್ಟು ಹೊಡೆತ ಬೀಳೋದ್ರಲ್ಲಿ ಎರಡು ಮಾತಿಲ್ಲ.

ವರದಿ : ರಾಜು ಅಣಬೇರ್, ಟಿವಿ5 ಹಾವೇರಿ

Next Story

RELATED STORIES